ಪ್ರತಿಭಟನಾನಿರತರೊಂದಿಗೆ ಸಂಧಾನ ಯತ್ನ ಮುಂದುವರಿಸಿದ ಕೇಂದ್ರ ಸರಕಾರ

Update: 2020-12-14 18:54 GMT

ಹೊಸದಿಲ್ಲಿ,ಡಿ.14: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ರೈತ ಪ್ರತಿಭಟನಕಾರರೊಂದಿಗೆ ಸಂಧಾನ ಯತ್ನವನ್ನು ಕೇಂದ್ರ ಸರಕಾರ ಮುಂದುವರಿಸಿದೆ. ಮಾತುಕತೆಯ ಮುಂದಿನ ದಿನಾಂಕವನ್ನು ನಿಗದಿಪಡಿಸುವ ಬಗ್ಗೆ ಸರಕಾರವು ರೈತ ನಾಯಕರೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ. ತೋಮರ್ ಅವರು ಹೊಸದಿಲ್ಲಿಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ, ‘‘ ಖಂಡಿತವಾಗಿಯೂ ಮಾತುಕತೆ ನಡೆಯಲಿದೆ. ನಾವು ರೈತ ನಾಯಕರೊಂದಿಗೆ ಸಂಪರ್ಕದಲ್ಲಿದ್ದೇವೆ’’ ಎಂದು ತಿಳಿಸಿದರು.

 ಸರಕಾರವು ಯಾವುದೇ ಸಮಯದಲ್ಲೂ ಪ್ರತಿಭಟನಾನಿರತರೊಂದಿಗೆ ಮಾತುಕತೆಗೆ ಸಿದ್ಧವಿದೆ. ಮುಂದಿನ ಮಾತುಕತೆಗೆ ಯಾವಾಗ ಸಿದ್ಧವಿದ್ದೇವೆಂಬುದನ್ನು ರೈತ ನಾಯಕರು ನಿರ್ಧರಿಸಬೇಕು ಹಾಗೂ ಸರಕಾರಕ್ಕೆ ತಿಳಿಸಬೇಕು ಎಂದವರು ಹೇಳಿದರು.

ರೈತರ ಬದುಕನ್ನು ಮಾರ್ಪಡಿಸಲು ನೂತನ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಈ ಕಾನೂನುಗಳ ಬಗ್ಗೆ ಸರಕಾರದ ನೀತಿ ಹಾಗೂ ಉದ್ದೇಶಗಳು ಸ್ಪಷ್ಟವಾಗಿವೆ ಎಂದು ತೋಮರ್ ಹೇಳಿದರು. ಆದಾಗ್ಯೂ ಸರಕಾರವು ನೂತನ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಿಲ್ಲವೆಂದು ತೋಮರ್ ಸುಳಿವು ನೀಡಿದರು.

 40 ಕೃಷಿಕ ಒಕ್ಕೂಟಗಳ ಪ್ರತಿನಿಧಿಗಳ ಜೊತೆ ಈವರೆಗೆ ಐದು ಸುತ್ತಿನ ಮಾತುಕತೆಗಳು ನಡೆದಿವೆ. ತೋಮರ್ ಹಾಗೂ ಕೇಂದ್ರ ಆಹಾರ ಸಚಿವ ಪಿಯೂಶ್‌ ಗೋಯಲ್ ಹಾಗೂ ವಾಣಿಜ್ಯ ಹಾಗೂ ಕೈಗಾರಿಕಾ ಖಾತೆಯ ಸಹಾಯಕ ಸಚಿವ ಸೋಮ್ ಪ್ರಕಾಶ್ ಮಾತುಕತೆಗಳ ನೇತೃತ್ವವನ್ನು ವಹಿಸಿದ್ದರು. ಆದಾಗ್ಯೂ ಇತ್ತಂಡಗಳಿಗೂ ಸಮ್ಮತವಾಗುವಂತಹ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ.

 ಕೇಂದ್ರ ಸರಕಾರವು ಈಗಾಗಲೇ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಮುಂದುವರಿಸುವ ಭರವಸೆಯೊಂದಿಗೆ ಕರಡು ಪ್ರಸ್ತಾವನೆಯನ್ನು ರೈತ ಒಕ್ಕೂಟಗಳಿಗೆ ಕಳುಹಿಸಿಕೊಟ್ಟಿತ್ತು. ಆದರೆ ರೈತ ಒಕ್ಕೂಟಗಳು ಅವುಗಳನ್ನು ತಿರಸ್ಕರಿಸಿದ್ದವು ಹಾಗೂ ಕಾನೂನುಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದವು.

 ಸೋಮವಾರ ಬೆಳಗ್ಗೆ ತೋಮರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಪ್ರಸಕ್ತ ಬಿಕ್ಕಟ್ಟನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪರಿಹಾರೋಪಾಯಗಳ ಬಗ್ಗೆ ಚರ್ಚಿಸಿದರು.

 ಆನಂತರ ಅಖಿಲ ಭಾರತ ಕಿಸಾನ್ ಸಮನ್ವಯ ಸಮಿತಿ (ಎಐಕೆಸಿಸಿ) ನೇತೃತ್ವದ ರೈತರ ನಿಯೋಗವು ತೋಮರ್ ಅವರನ್ನು ಭೇಟಿಯಾಗಿ, ಕೃಷಿ ಕಾನೂನುಗಳಿಗೆ ತನ್ನ ಬೆಂಬಲವನ್ನು ಘೋಷಿಸಿತು.

ಪ್ರತಿಭಟನೆ ತೀವ್ರ: ದಿಲ್ಲಿಯಲ್ಲಿ ರೈತರ ನಿರಶನ

 ಹೊಸದಿಲ್ಲಿ,ಡಿ.14: ನೂತನ ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆ ದೇಶದ ವಿವಿಧ ಭಾಗಗಳಿಗೆ ಹರಡಿದ್ದು, ವಿವಿಧ ರೈತ ಸಂಘಟನೆಗಳು ಜಿಲ್ಲಾ ಕೇಂದ್ರಗಳಲ್ಲಿ ಧರಣಿ, ಪ್ರದರ್ಶನಗಳನ್ನು ನಡೆಸಿದರು.

 ರಾಜಧಾನಿ ಹೊಸದಿಲ್ಲಿಯ ಗಡಿಗಳಲ್ಲಿ ಪ್ರತಿಭಟನೆ ಮುಂದುವರಿದಿದ್ದು, ವಿವಿಧ ಕೃಷಿಕ ಒಕ್ಕೂಟಗಳ ನಾಯಕರು ಸೋಮವಾರ ಸಂಜೆಯವರೆಗೆ ಉಪವಾಸ ಸತ್ಯಾಗ್ರಹ ನಡೆಸಿದರು. ರೈತರಿಗೆ ಬೆಂಬಲ ವ್ಯಕ್ತಪಡಿಸಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೂಡಾ ನಿರಶನ ನಡೆಸಿದವು.

ದಿಲ್ಲಿ-ಜೈಪುರ ಹೆದ್ದಾರಿಯಲ್ಲಿ ರೈತರನ್ನು ತಡೆದ ಪೊಲೀಸರು

 ದಿಲ್ಲಿ -ಜೈಪುರ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್‌ನಲ್ಲಿ ಹೊಸದಿಲ್ಲಿಗೆ ಆಗಮಿಸುತ್ತಿದ್ದ ಕೆಲವು ರೈತರನ್ನು ಹರ್ಯಾಣದಲ್ಲಿ ಪೊಲೀಸರು ತಡೆದಾಗ ಘರ್ಷಣೆ ನಡೆದಿರುವುದಾಗಿ ವರದಿಯಾಗಿದೆ. ಟ್ರ್ಯಾಕ್ಟರ್‌ಗಳ ಕೀಗಳನ್ನು ಕಸಿದುಕೊಂಡ ಪೊಲೀಸರು, ರೈತರನ್ನು ಎಳೆದುಕೊಂಡು ಹೋಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿವೆ. ಸುಮಾರು 20 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಕೆಲವು ತಾಸುಗಳ ಬಳಿಕ  ಅವರನ್ನು ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News