ತನ್ನ ಪೌರತ್ವ ಸಾಬೀತುಪಡಿಸುವ ಮುಂಚೆಯೇ ವಿದೇಶಿಗನಾಗಿ ಮೃತಪಟ್ಟ 104ರ ಹರೆಯದ ವೃದ್ಧ

Update: 2020-12-15 06:37 GMT

ಅಸ್ಸಾಮ್,ಡಿ.15: 2018ರಲ್ಲಿ ನ್ಯಾಯಮಂಡಳಿಯಿಂದ ವಿದೇಶಿಗನೆಂದು ಮುದ್ರೆಯೊತ್ತಲ್ಪಟ್ಟಿದ್ದ 104ರ ಹರೆಯದ ವೃದ್ಧರೋರ್ವರು ತಾನು ಭಾರತೀಯ ನಾಗರಿಕನೆಂದು ಸಾಬೀತುಪಡಿಸುವ ಮುಂಚೆ ವಿದೇಶಿಗನಾಗಿಯೇ ಮೃತಪಟ್ಟ ಘಟನೆಯು ಅಸ್ಸಾಮ್ ನಲ್ಲಿ ನಡೆದಿದೆ. ಈ ಕುರಿತು www.hindustantimes.com ವರದಿ ಮಾಡಿದೆ.

ಅಸ್ಸಾಮ್ ನ ಕಚರ್ ಜಿಲ್ಲೆಯ ಅಮರ್ ಘಾಟ್ ಪ್ರದೇಶದಲ್ಲಿ ವಾಸ್ತವ್ಯವಿದ್ದ ಚಂದ್ರಧರ್ ದಾಸ್ ರವಿವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವರದಿ ತಿಳಿಸಿದೆ. 2018ರ ಜನವರಿಯಲ್ಲಿ ನ್ಯಾಯಮಂಡಳಿಯ ಮುಂದೆ ಹಾಜರಾಗಿ ತನ್ನ ಪೌರತ್ವವನ್ನು ಸಾಬೀತುಪಡಿಸಲು ಚಂದ್ರಧರ್ ಗೆ ಸಾಧ್ಯವಾಗಿರಲಿಲ್ಲ. ಬಳಿಕ ಅವರನ್ನು ಮಾರ್ಚ್ ನಲ್ಲಿ ಸಿಲ್ಚಾರ್ ಜೈಲಿಗೆ ಕಳುಹಿಸಲಾಗಿತ್ತು. ಇವರ ಬಂಧನಕ್ಕೆ ಸಾರ್ವಜನಿಕರಿಂದ ಆಕ್ಷೇಪಗಳು ವ್ಯಕ್ತವಾದ ಕಾರಣ ಜೂನ್ ತಿಂಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಚಂದ್ರಧರ್ ಗೆ ತನ್ನ ಪೌರತ್ವ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಅವರ ಮೂವರು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಕೂಡಾ ಪೌರತ್ವ ಪಟ್ಟಿಯಿಂದ ಕೈಬಿಡಲಾಗಿತ್ತು.

ಈ ಕುರಿತು indianexpress.comನೊಂದಿಗೆ ಮಾತನಾಡಿದ ಚಂದ್ರಧರ್ ದಾಸ್ ಪುತ್ರಿ ನಿಯುತಿ, “ನಮ್ಮ ತಂದೆ ಭಾರತೀಯನಾಗಿ ಮರಣ ಹೊಂದಬೇಕೆಂಬ ತೀವ್ರ ಹಂಬಲದಲ್ಲಿದ್ದರು. ನಾವು ಎಲ್ಲಾ ಸಾಕ್ಷ್ಯಗಳನ್ನು ಹಿಡಿದುಕೊಂಡು ಕೋರ್ಟ್ ನಿಂದ ಕೋರ್ಟ್ ಗೆ ಅಲೆದೆವು. ಅಡ್ವಕೇಟ್ ಗಳಿಂದ ಹಿಡಿದು ಸಾಮಾಜಿಕ ಕಾರ್ಯಕರ್ತರ ಮೊರೆ ಹೋದೆವು. ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ನಮ್ಮ ತಂದೆ ಹೊರಟು ಹೋದರು. ನಾವು ಈಗಲೂ ನ್ಯಾಯಾಂಗದ ಕಣ್ಣಲ್ಲಿ ವಿದೇಶಿಗರಾಗಿಯೇ ಬದುಕುತ್ತಿದ್ದೇವೆ” ಎಂದಿದ್ದಾರೆ.

ಚಂದ್ರಧರ್ ದಾಸ್ 1955ರಲ್ಲಿ ಪೂರ್ವ ಪಾಕಿಸ್ತಾನ (1971ರಲ್ಲಿ ಬಾಂಗ್ಲಾದೇಶ)ದಿಂದ ಬಂದವರು. ಅವರಿಗೆ ನಿರಾಶ್ರಿತರ ಸರ್ಟಿಫಿಕೇಟನ್ನೂ ನೀಡಲಾಗಿತ್ತು. ಆದರೆ ಅದನ್ನು ಅಧಿಕಾರಿಗಳು ಪರಿಶೀಲನೆ ಮಾಡಿರಲಿಲ್ಲ. ಏನೇ ಆದರೂ, 1971ಕ್ಕೂ ಮುಂಚೆ ಅಸ್ಸಾಮ್ ನಲ್ಲಿ ವಾಸಿಸುತ್ತಿದ್ದವರನ್ನು ಭಾರತೀಯರೆಂದೆ ಪರಿಗಣಿಸಬೇಕೆಂದು ನ್ಯಾಯಮಂಡಳಿ ಹೇಳುತ್ತದೆ. ಆದರೆ ಇದು ಚಂದ್ರಧರ್ ದಾಸ್ ಪ್ರಕರಣಕ್ಕೆ ಇದು ಅನ್ವಯಿಸದಿದ್ದದ್ದು ದುರದೃಷ್ಟಕರ ಎಂದು ಸಾಮಾಜಿಕ ತಾಣದಲ್ಲಿ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News