×
Ad

ಕಾಂಗ್ರೆಸ್ ಗೆ ನೈತಿಕತೆ ಇದ್ದರೆ ಸಭಾಪತಿಗೆ ರಾಜೀನಾಮೆ ಕೊಡಲು ಸೂಚಿಸಬೇಕು: ಸಿಎಂ ಯಡಿಯೂರಪ್ಪ

Update: 2020-12-15 17:57 IST

ಬೆಂಗಳೂರು, ಡಿ. 15: ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಸದಸ್ಯರು ಬೆಂಬಲಿಸಿದ್ದಾರೆ. ಹೀಗಾಗಿ ಅವರು ರಾಜೀನಾಮೆ ನೀಡಬೇಕಿತ್ತು. ಸಭಾಪತಿ ಪೀಠದಲ್ಲಿ ಉಪಸಭಾಪತಿ ಅವರನ್ನು ಕೂರಿಸುತ್ತೇವೆಂದು ನಾವು ಪ್ರಕಟಿಸಿದ್ದೆವು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅವಿಶ್ವಾಸ ನಿರ್ಣಯ ಮಂಡನೆ ಬಳಿಕ ಉಪಸಭಾಪತಿ ಅವರೇ ಮುಂದುವರಿಯುತ್ತಾರೆ. ‘ಬೆಲ್' ಚಾಲನೆಯಲ್ಲಿರುವ ವೇಳೆ ಪೀಠಕ್ಕೆ ಬಂದರು ಎಂಬುದು ಮುಖ್ಯವಲ್ಲ. ಕಾಂಗ್ರೆಸ್ ನೈತಿಕತೆ ಇದ್ದರೆ ಸಭಾಪತಿಗೆ ರಾಜೀನಾಮೆ ಕೊಡಲು ಸೂಚಿಸಬೇಕು. ಘಟನೆಯ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ' ಎಂದು ತಿಳಿಸಿದರು.

ಬಿಜೆಪಿಯೇ ನೇರ ಕಾರಣ: ''ವಿಧಾನ ಪರಿಷತ್ತಿನಲ್ಲಿ ನಡೆದ ಜಟಾಪಟಿಗೆ ಬಿಜೆಪಿಯೇ ನೇರ ಕಾರಣ. ಚರ್ಚೆಗೆ ಪ್ರತಿಪಕ್ಷ ಕಾಂಗ್ರೆಸ್ ತಯಾರಾಗಿತ್ತು. ಆದರೆ, ನಿಯಮಾವಳಿಯನ್ವಯ ಕಲಾಪ ನಡೆಸಬೇಕೆಂಬುದಷ್ಟೇ ನಮ್ಮ ಬೇಡಿಕೆಯಾಗಿತ್ತು'' ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ನಾರಾಯಣ ಸ್ವಾಮಿ ಆರೋಪ ಮಾಡಿದ್ದಾರೆ.

ಬಿಜೆಪಿ ಸದಸ್ಯರು ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಭಾಪತಿ ಪೀಠದ ಮುಂದೆ ರಂಪಾಟ ಮಾಡಿದರು. 2009ರಲ್ಲಿ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದಾಗ ವಿಧಾನಸಭೆಯೊಳಗೆ ಬಿಡದೇ ಬಿಜೆಪಿ ಪ್ರಜಾಪ್ರಭುತ್ವವನ್ನು ಅಣುಕಿಸಿತ್ತು. ಈಗಲೂ ವಿಧಾನ ಪರಿಷತ್‍ನಲ್ಲಿ ಗದ್ದಲ ಎಬ್ಬಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಿಜೆಪಿ ಅವಮಾನ ಮಾಡಿದೆ ಎಂದು ದೂರಿದರು.

ಸಭಾಪತಿ ಪೀಠದ ಮುಂದೆ ಯಾರು ಗದ್ದಲ ಮಾಡಿದರು ಎಂಬುದನ್ನು ಇಡೀ ದೇಶ ನೋಡಿದೆ. ಆದರೆ, ಸಚಿವ ಸ್ಥಾನದಲ್ಲಿರುವವರು ಆಲೋಚಿಸಿ ಮಾತನಾಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಮ್ಮ ಸ್ಥಾನದ ಘನತೆಯನ್ನು ಅರಿತು ಮಾತನಾಡಬೇಕು ಎಂದ ಅವರು, ಪರಿಷತ್ ಕಲಾಪ ಕರೆಯಬೇಕಾದರೆ ಸಚಿವ ಸಂಪುಟದ ಅನುಮೋದನೆ ಅಗತ್ಯ ಎಂದರು.

ಬೇಸರ: ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ನಡೆದ ಅಹಿತಕರ ಘಟನೆ ನಡೆಯಬಾರದಿತ್ತು. ಇಂತಹ ಅಗೌರವ ಸೂಚಿಸಿದ ಘಟನೆ ಯಾವತ್ತು ಆಗಿರಲಿಲ್ಲ. ಉಪ ಸಭಾಪತಿಯವರು ಸಭಾಪತಿ ಸೂಚನೆ ಬಳಿಕ ಪೀಠದಲ್ಲಿ ಕೂರಬೇಕು. ಆದರೆ, ಅವರ ಸೂಚನೆ ಇಲ್ಲದೆಯೆ ಸಭಾಪತಿ ಪೀಠದಲ್ಲಿ ಕೂತಿದ್ದು ತಪ್ಪು ಎಂದು ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

ರಾಜಭವನದ ಗೌರವವನ್ನು ಬಿಜೆಪಿ ಗಾಳಿಗೆ ತೂರಿದ್ದು, ಅದನ್ನು ಬಿಜೆಪಿ ಪಕ್ಷದ ಕಚೇರಿಯನ್ನಾಗಿ ಮಾಡಿಕೊಂಡಿದೆ. ರಾಜ್ಯಪಾಲರು ಸೂಚನೆ ಕೊಟ್ಟರೆ ಸಭಾಪತಿ ವಿರುದ್ಧದ ಅವಿಶ್ವಾಸ ಎದುರಿಸಲು ತಯಾರಾಗಿದ್ದೇವೆ. ಎಲ್ಲಿಯವರೆಗೂ ಸಭಾಪತಿ ಇರುತ್ತಾರೋ ಅಲ್ಲಿಯವರೆಗೆ ಅವರೇ ಸುಪ್ರೀಂ. ಸದನದ ನಿಯಮ ಪಾಲನೆ ಮಾಡಲಿ ನಮ್ಮ ಅಭ್ಯಂತರವಿಲ್ಲ ಎಂದು ಹರಿಪ್ರಸಾದ್ ಸ್ಪಷ್ಟನೆ ನೀಡಿದರು.

'ಪರಿಷತ್ ನಿಯಮಾವಳಿಯಂತೆ ಅಧಿವೇಶನ ಕಲಾಪ ನಡೆಯುತ್ತಿತ್ತು. ಉಪಸಭಾಪತಿಯವರನ್ನು ಕಾಂಗ್ರೆಸ್ ಸದಸ್ಯರು ಎಳೆದಾಡಿದರು. ಆದರೆ, ಉಪಸಭಾಪತಿಗೆ ಮಾರ್ಷಲ್‍ಗಳು ರಕ್ಷಣೆಯನ್ನೇ ನೀಡಿಲ್ಲ. ಭದ್ರತೆ ವಿಷಯದಲ್ಲಿ ಷಡ್ಯಂತ್ರ ನಡೆದಿದೆ. ಅವಿಶ್ವಾಸ ನಿರ್ಣಯ ಮಂಡಿಸಿರುವಲ್ಲಿ ನಾನು ಮೊದಲಿಗಳು. ನಿಯಮಾವಳಿ ಪ್ರಕಾರ ಅವಿಶ್ವಾಸ ನಿರ್ಣಯ ಇದ್ದಾಗ ಉಪಸಭಾಪತಿ ಪೀಠದಲ್ಲಿ ಇರಬೇಕು. ಹೀಗಾಗಿ ಅವರು ಕಲಾಪವನ್ನು ನಡೆಸಬೇಕಿತ್ತು. ಇದಕ್ಕೆ ಕಾಂಗ್ರೆಸ್ ಸದಸ್ಯರು ಅವಕಾಶ ನೀಡಲಿಲ್ಲ'

-ತೇಜಸ್ವಿನಿಗೌಡ, ಪರಿಷತ್ ಸದಸ್ಯೆ

‘ಸಭಾಪತಿ ಸ್ಥಾನದ ಬಗ್ಗೆ ಗೌರವವಿದೆ. ಎಲ್ಲ ಪಕ್ಷಗಳಲ್ಲಿ ಗೊಂದಲ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ನನ್ನ ಕೈಹಿಡಿದು ಪೀಠದಲ್ಲಿ ಕೂರಿಸಿದರೆ, ಕಾಂಗ್ರೆಸ್ ಸದಸ್ಯರು ಬೇಡ ಎಂದು ಎಳೆದಾಡಿದರು. ಹೀಗಾಗಿ ನಾನು ಒಬ್ಬನೇ ಏನು ಮಾಡಲಿ. ಈ ಘಟನೆಯಿಂದ ನನಗೆ ಬೇಸರವೇನು ಆಗಿಲ್ಲ'

-ಧರ್ಮೇಗೌಡ, ಉಪಸಭಾಪತಿ

'ಪರಿಷತ್ ಕಲಾಪ ಪ್ರಾರಂಭವಾಗುವ ಸಂದರ್ಭದಲ್ಲಿ ಪ್ರತಿಪಕ್ಷ ಕಾಂಗ್ರೆಸ್‍ನ ಕೆಲ ಸದಸ್ಯರು ಸಭಾಪತಿ ಪೀಠಕ್ಕೆ ನುಗ್ಗಿ, ಉಪಸಭಾಪತಿಯವರ ಮೇಲೆ ಹಲ್ಲೆ ನಡೆಸಿ ದಾಂಧಲೆ ಎಬ್ಬಿಸಿರುವುದು ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಕಪ್ಪು ಚುಕ್ಕೆಯಾಗಿದೆ. ಇಂತಹ ದುರ್ಘಟನೆಗಳಿಗೆ ಇನ್ನಾದರೂ ಅಂತ್ಯ ಹೇಳಿ ಎಂದು ಕಾಂಗ್ರೆಸ್ ಪಕ್ಷದವರಲ್ಲಿ ಕೋರುತ್ತೇನೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿ ವಿರೋಧ ಪಕ್ಷಗಳಿಗೂ ಇರುತ್ತದೆ.  ಈ ರೀತಿ ದುಂಡಾವರ್ತನೆ ನಡೆಸಿರುವುದು ಅಕ್ಷಮ್ಯ'

-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News