×
Ad

ಖಾಸಗಿ ಅಲ್ಪಸಂಖ್ಯಾತ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಒತ್ತಾಯಿಸಿ ಧರಣಿ

Update: 2020-12-15 18:02 IST

ಬೆಂಗಳೂರು, ಡಿ.15: ಕೋವಿಡ್‍ನಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿರುವ ಅನುದಾನ ರಹಿತ ಅಲ್ಪಸಂಖ್ಯಾತ ಮತ್ತು ಇತರೆ ಶಾಲಾ ಶಿಕ್ಷಕರಿಗೆ ರಾಜ್ಯ ಸರಕಾರ ಕೂಡಲೇ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಅಲ್ಪಸಂಖ್ಯಾತ ಶಾಲಾ ಒಕ್ಕೂಟದ ಅಧ್ಯಕ್ಷ ಡಾ.ಅಫ್ಶದ್ ಅಹ್ಮದ್ ಒತ್ತಾಯಿಸಿದ್ದಾರೆ.

ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಖಾಸಗಿ ಶಿಕ್ಷಕರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮಾತನಾಡಿದ ಅವರು, ಕೋವಿಡ್ ಲಾಕ್‍ಡೌನ್‍ನಿಂದಾಗಿ ಖಾಸಗಿ ಶಾಲೆಗಳು ಮುಚ್ಚಿವೆ. ಇದರಿಂದಾಗಿ ಲಕ್ಷಾಂತರ ಶಿಕ್ಷಕರು ಕೆಲಸ ಕಳೆದುಕೊಂಡು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದು ಸರಕಾರದ ಗಮನಕ್ಕೂ ಬಂದಿದೆ. ಆದರೂ ಸರಕಾರ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ಮಾರ್ಚ್‍ನಿಂದ ಶಾಲಾ ಶಿಕ್ಷಕರು ಪಡುತ್ತಿರುವ ಪಾಡು ಒಂದೆರಡಲ್ಲ. ಕೆಲಸವಿಲ್ಲದ ಸಮಸ್ಯೆ ಒಂದಾದರೆ, ಕೆಲವು ಶಿಕ್ಷಕರು ಕೋವಿಡ್ ತುತ್ತಾಗಿ ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ. ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಶಿಕ್ಷಕರು, ಜೀವನ ನಿರ್ವಹಣೆಗೆ ಸರಕಾರದ ಬಳಿ ಕೈಚಾಚುತ್ತಿದ್ದಾರೆ. ಸರಕಾರ ಮಾತ್ರ ಇತ್ತ ಗಮನ ಕೊಡುತ್ತಿಲ್ಲ. ಈಗಲಾದರೂ ನಮ್ಮ ಸಮಸ್ಯೆಗಳಿಗೆ ಕಿವಿಗೊಡಬೇಕೆಂದು ಅವರು ಹೇಳಿದ್ದಾರೆ.

ಸರಕಾರದ ಸೂಚನೆಯಿಂದಾಗಿ ಶುಲ್ಕ ಕಟ್ಟಲು ಸಾಮಥ್ರ್ಯವಿರುವ ಪೋಷಕರು ಶುಲ್ಕ ಕಟ್ಟುತ್ತಿಲ್ಲ. ಹಾಗೂ ವಿದ್ಯಾರ್ಥಿಗಳನ್ನು ನೋಂದಣಿ ಮಾಡುತ್ತಿಲ್ಲ. ಇದರಿಂದ ಖಾಸಗಿ ಶಾಲಾ ಸಂಸ್ಥೆಗಳು ಆರ್ಥಿಕ ನಷ್ಟ ಅನುಭವಿಸುತ್ತಿವೆ. ಹೀಗಾಗಿ ಸರಕಾರ ಶಾಲಾ ಶುಲ್ಕ ಕಟ್ಟಲು ನಿರ್ದೇಶನ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಹಕ್ಕೊತ್ತಾಯಗಳು

-ಖಾಸಗಿ ಅನುದಾನರಹಿತ ಅಲ್ಪಸಂಖ್ಯಾತ ಮತ್ತು ಇತರೆ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು.

-ಸಾಲ ಮರುಪಾವತಿಗೆ ಸಮಯಾವಕಾಶ ನೀಡಬೇಕು.

-ಬಡ್ಡಿರಹಿತ ಸಾಲದ ವ್ಯವಸ್ಥೆ ಕಲ್ಪಿಸಬೇಕು.

-ವಿದ್ಯಾರ್ಥಿಗಳಿಗೆ ಕನಿಷ್ಠ ಶುಲ್ಕ ಪಾವತಿಸಲು ಮತ್ತು ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ದಾಖಲಾತಿ ಮಾಡಲು ನಿರ್ದೇಶನ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News