×
Ad

ಸಹೋದ್ಯೋಗಿಗಳ ಖಾಸಗಿ ವಿಡಿಯೋ ಚಿತ್ರೀಕರಣ ಪ್ರಕರಣ: ನರ್ಸ್ ಪ್ರಿಯಕರನ ಬಂಧನ

Update: 2020-12-15 21:59 IST

ಬೆಂಗಳೂರು, ಡಿ.15: ಸಹೋದ್ಯೋಗಿಗಳ ವಿಡಿಯೋ ಚಿತ್ರೀಕರಿಸಿ ಬಂಧನಕ್ಕೊಳಗಾಗಿರುವ ನರ್ಸ್‍ನ ಪ್ರಿಯಕರನನ್ನು ಇಲ್ಲಿನ ವೈಟ್‍ಫೀಲ್ಡ್ ವಿಭಾಗದ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಬಂಧಿತ ಆರೋಪಿ ನರ್ಸ್ ಅಶ್ವಿನಿ ನೀಡಿದ ಮಾಹಿತಿ ಮೇರೆಗೆ ತಮಿಳುನಾಡಿನ ಮೂಲದ ಪ್ರಭು(31) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಭು ಚೆನ್ನೈನ ಪ್ರತಿಷ್ಠಿತ ಹೋಟೆಲ್‍ವೊಂದರಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ. ಈತನ ಪ್ರೇಯಸಿಯೂ ಆದ ತಮಿಳುನಾಡಿನ ಗುಡಿಯಾಟ್ಟಂನ ಅಶ್ವಿನಿ ವೈಟ್‍ಫೀಲ್ಡ್‍ನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತ ವಸತಿ ಗೃಹದಲ್ಲಿ ವಾಸವಾಗಿದ್ದಳು. ಈ ಸಂದರ್ಭದಲ್ಲಿ ಶೌಚಾಲಯದಲ್ಲಿ ಮೊಬೈಲ್ ಇಟ್ಟು, ಇತರೆ ಸಹೋದ್ಯೋಗಿಗಳ ಅರೆನಗ್ನ ವಿಡಿಯೊಗಳನ್ನು ಸೆರೆ ಹಿಡಿದಿದ್ದಳು. ಈ ಸಂಬಂಧ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆಕೆಯನ್ನು ಬಂಧಿಸಲಾಗಿತ್ತು.

ಸದ್ಯ ಅಶ್ವಿನಿ ಮಾಹಿತಿ ಮೇರೆಗೆ ಪ್ರಭು ಅನ್ನು ಬಂಧಿಸಿದ್ದು, ಅಶ್ವಿನಿ ಕಳುಹಿಸುತ್ತಿದ್ದ ವಿಡಿಯೊವನ್ನು ನೋಡುತ್ತಿದ್ದ ಪ್ರಿಯಕರ ಬಳಿಕ ಅದನ್ನು ಡಿಲೀಟ್ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು, ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News