ಬೆಂಗಳೂರು: ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತು ಜಪ್ತಿ; ನಾಲ್ವರ ಬಂಧನ
ಬೆಂಗಳೂರು, ಡಿ.16: ಮಾದಕ ವಸ್ತುಗಳ ಮಾರಾಟಗಾರರ ಮೇಲೆ ತೀವ್ರ ನಿಗಾವಿಟ್ಟಿರುವ ಸಿಸಿಬಿ ಪೊಲೀಸರು, ವಿಶೇಷ ಕಾರ್ಯಾಚರಣೆ ನಡೆಸಿ 1 ಕೋಟಿ 15 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಮಾದಕವಸ್ತು ಸಂಗ್ರಹಿಸಿದ್ದ ಡ್ರಗ್ಸ್ ಪೆಡ್ಲರ್ ಗಳಾದ ಎಂ.ತಿರುಪಾಲ್(32), ಕಮಲೇಶನ್(31), ಸತೀಶ್ ಕುಮಾರ್(27), ಎ.ಪಾಷ(45) ಎಂಬುವರನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.
ಬಂಧಿತರಿಂದ 5,500 ರೂ. ನಗದು, 5 ಕೆ.ಜಿ. 600 ಗ್ರಾಂ ಹ್ಯಾಶ್‍ಆಯಿಲ್, 3 ಕೆಜಿ 300 ಗ್ರಾಂ ಗಾಂಜಾ, 1 ಕಾರು, 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ನಗರದ ಅಮೃತಹಳ್ಳಿಯಲ್ಲಿ ಡ್ರಗ್ಸ್ ದಂಧೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿಯನ್ನು ಹಲವು ದಿನಗಳಿಂದ ಸಂಗ್ರಹಿಸಲಾಗಿದ್ದು, ಅದನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡಾಗ ಹೊಸ ವರ್ಷ ಗುರಿಯಾಗಿಸಿಕೊಂಡು ಆರೋಪಿಗಳು 1 ಕೋಟಿ 15 ಲಕ್ಷ ರೂ. ಮಾದಕ ವಸ್ತುಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ ಎಂದರು.
ಬಂಧಿತ ಆರೋಪಿಗಳ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಹೆಚ್ಚಿನ ತನಿಖೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.