ವಿಧಾನಪರಿಷತ್ ನಲ್ಲಿ ಗದ್ದಲ, ಜಟಾಪಟಿ: ರಾಜ್ಯಪಾಲರ ನಡೆಯತ್ತ ಎಲ್ಲರ ಚಿತ್ತ

Update: 2020-12-16 15:26 GMT

ಬೆಂಗಳೂರು, ಡಿ. 16: ವಿಧಾನ ಪರಿಷತ್ ಕಲಾಪದಲ್ಲಿ ನಿನ್ನೆ ನಡೆದಿದ್ದ ಘಟನಾವಳಿಗಳು, ಸಭಾಪತಿ ಸ್ಥಾನದ ಕುರಿತಂತೆ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಮಧ್ಯೆ 'ಜಟಾಪಟಿ' ಮುಂದುವರಿದಿದೆ. ರಾಜಕೀಯ ಪಕ್ಷಗಳ ನಡುವೆ ಸರಿ-ತಪ್ಪುಗಳ ವಿಶ್ಲೇಷಣೆ ನಡೆಸುತ್ತಿದ್ದು, ರಾಜ್ಯಪಾಲರ ಮುಂದಿನ ನಡೆಯತ್ತ ಎಲ್ಲರ ಕುತೂಹಲದ ದೃಷ್ಟಿ ನೆಟ್ಟಿದೆ.

ಈ ಮಧ್ಯೆ ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ವಿಧಾನ ಪರಿಷತ್ ಕಾರ್ಯದರ್ಶಿಯವರ ಮೂಲಕ `ಕಲಾಪದಲ್ಲಿ ನಿನ್ನೆ ನಡೆದ ಘಟನಾವಳಿಗಳು ಹಾಗೂ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಅನಿವಾರ್ಯತೆ' ಕುರಿತು ಸಮಗ್ರ ಮಾಹಿತಿ ನೀಡುವ ಲಿಖಿತ ಪತ್ರವೊಂದನ್ನು ಬರೆದಿದ್ದು, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ಭಯದ ವಾತಾವರಣ ನಿರ್ಮಾಣ: `ವಿಧಾನ ಪರಿಷತ್ ಕಲಾಪದ ಸಂದರ್ಭದಲ್ಲಿ ಸದನದೊಳಗೆ ಭಯದ ವಾತಾವರಣ ನಿರ್ಮಾಣವಾಗಿದ್ದರಿಂದಾಗಿ ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಬೇಕಾಯಿತು' ಎಂದು ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಸಮಗ್ರ ವಿವರವನ್ನು ನೀಡಿದ್ದಾರೆ.

'ರಾಜ್ಯ ಸರಕಾರದ ಕೋರಿಕೆಯಂತೆ ಒಂದು ದಿನದ ಅಧಿವೇಶನ ಕರೆಯಲಾಗಿತ್ತು. ಅದರಂತೆ (ಡಿ.15)ಸುಮಾರು 11:15ರ ಸಮಯದಲ್ಲಿ ಸನದ ಕಾರ್ಯಕಲಾಪವನ್ನು ಪ್ರಾರಂಭಿಸಲು `ಬೆಲ್' ಹಾಕಲು ಕಾರ್ಯದರ್ಶಿಯವರಿಗೆ ಸೂಚನೆ ನೀಡಿರುತ್ತೇನೆ. ನಾನು ನನ್ನ ಕಚೇರಿಯಲ್ಲಿ ಕುಳಿತಿರುವಾಗ ಪರಿಷತ್ ಕಾರ್ಯದರ್ಶಿಯವರು ಕೋರಂ ಬೆಲ್ ಹಾಕಿದರು. ಈ ನಡುವೆ ಬೆಲ್ ಆಫ್ ಮಾಡುವ ಪೂರ್ವದಲ್ಲಿಯೇ ಸದನದಲ್ಲಿದ್ದ ಉಪಸಭಾಪತಿಯವರು ಏಕಾಏಕಿ ಯಾವುದೇ ಸೂಚನೆ ಇಲ್ಲದೆ, ಸಭಾಪತಿ ಪೀಠ ಅಲಂಕರಿಸಿದರು. ತಕ್ಷಣ ಸದನದಲ್ಲಿದ್ದ ಬಹುತೇಕ ಸದಸ್ಯರು ಸಭಾಪತಿಯವರ ಪೀಠವನ್ನು ಸುತ್ತುವರಿದು ತಳ್ಳಾಟ-ನೂಕಾಟಗಳಿಂದ ಗೊಂದಲದ ವಾತಾವರಣ ನಿರ್ಮಾಣ ಮಾಡಿ, ಒಬ್ಬರಿಗೊಬ್ಬರು ಕಿರುಚಾಡುತ್ತಾ ಕೈ-ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆಯುತ್ತಿತ್ತು'.

'ಕೆಲವು ಸದಸ್ಯರು ಒಂದು ಹಂತದಲ್ಲಿ ಪೀಠದ ಮುಂದೆ ಇದ್ದ ಗ್ಲಾಸ್, ಮೈಕ್ ಇತ್ಯಾದಿಗಳನ್ನು ಧ್ವಂಸಗೊಳಿಸುವ ಜೊತೆಗೆ, ಪೀಠದ ಮುಂದೆ ಇದ್ದ ಎಲ್ಲ ದಾಖಲೆಗಳನ್ನು ಹರಿದು ಹಾಕುತ್ತಿದ್ದರು. ಮುಂದುವರಿದು ಕೆಲ ಸದಸ್ಯರು ಸಭಾಪತಿಯವರು ಸದನ ಪ್ರವೇಶಿಸುವ ಬಾಗಿಲನ್ನು ಒಳಗಡೆಯಿಂದ ಚಿಲಕ ಹಾಕಿಕೊಂಡು ಸಭಾಪತಿಯವರು ಸದನದ ಒಳಗೆ ಪ್ರವೇಶಿಸದಂತೆ ತಡೆಯುವ ಪ್ರಯತ್ನಗಳು ಸಹ ನಡೆದವು. ಈ ಎಲ್ಲ ಅಂಶಗಳನ್ನು ನಾನು ಕಚೇರಿಯಲ್ಲಿದ್ದ ಟಿವಿ ಮೂಲಕ ವೀಕ್ಷಿಸುತ್ತಿದ್ದೆ'.

'ಸಭಾಪತಿಯವರ ಪೀಠದಲ್ಲಿ ಅಸೀನರಾಗಿದ್ದ ಉಪಸಭಾಪತಿಯವರನ್ನು ಕೆಲವು ಸದಸ್ಯರು ಬಲವಂತವಾಗಿ ಆ ಸ್ಥಾನದಿಂದ ತೆರವುಗೊಳಿಸಿದ್ದನ್ನು ಗಮನಿಸಿದ್ದು, ತದನಂತರವೂ ಗದ್ದಲ ಮುಂದುವರಿದಿತ್ತು. ಈ ಹಂತದಲ್ಲಿ ವಿಧಾನ ಪರಿಷತ್ ಸಚಿವಾಲಯದ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ನನ್ನ ಕಚೇರಿಗೆ ಬಂದು ಸದನದೊಳಗಿನ ಪರಿಸ್ಥಿತಿಯನ್ನು ನನಗೆ ಮನವರಿಕೆ ಮಾಡಿಕೊಟ್ಟು ಸದನದಲ್ಲಿ ಅಧಿಕಾರಿಗಳಿಗೂ ಭಯದ ವಾತಾವರಣ ಇದೆ ಎಂದು ತಿಳಿಸಿದರು'.

`ಆ ಕೂಡಲೇ ಬೆಲ್ ನಿಲ್ಲಿಸುವಂತೆ ಕಾರ್ಯದರ್ಶಿಯವರಿಗೆ ಸೂಚಿಸಿ, ದಂಡನಾಯಕರ ರಕ್ಷಣೆಯೊಂದಿಗೆ ನಾನು ಸಭಾಪತಿ ಪೀಠಕ್ಕೆ ತೆರಳಿದಾಗಲೂ ಸದನದಲ್ಲಿ ಸದಸ್ಯರ ಕೂಗಾಟ-ಜಗ್ಗಾಟ ಮುಂದುವರಿದಿತ್ತು. ಜೊತೆಗೆ ಪೀಠದ ಸುತ್ತಲೂ ಸದಸ್ಯರು ಸುತ್ತುವರೆದು ಭಯದ ವಾತಾವರಣವಿತ್ತು. ನಾನು ಪೀಠದಿಂದ ಎಲ್ಲ ಸದಸ್ಯರಿಗೆ ಮನವಿ ಮಾಡಿದರೂ ಶಾಂತ ವಾತಾವರಣ ಮೂಡದೇ ಇರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಪೀಠದಿಂದ ತೀರ್ಮಾನಿಸಿರುತ್ತೇನೆ. ಈ ಎಲ್ಲ ಅಂಶಗಳನ್ನು ಸದನದ ದೃಶ್ಯಾವಳಿಗಳಿಂದ ಖಾತ್ರಿಪಡಿಸಿಕೊಳ್ಳಬಹುದು. ಅದರಂತೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಅಧಿಸೂಚನೆಯನ್ನು ಅನುಮೋದಿಸಿದೆ' ಎಂದು ರಾಜ್ಯಪಾಲರಿಗೆ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೋರಾಟ ನಿಲ್ಲುವುದಿಲ್ಲ

ವಿಧಾನ ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ಹಿನ್ನೆಲೆಯಲ್ಲಿ ನಿನ್ನೆ ಘಟನೆ ಕುರಿತು ಬಿಜೆಪಿಯವರು ನನ್ನ ಶಾಸಕ ಸ್ಥಾನ ಹೋಗುತ್ತೆ ಎಂದು ಹೇಳುತ್ತಿದ್ದರು. ಆದರೆ, ನನ್ನ ಸ್ಥಾನ ಹೋದರೂ ಚಿಂತೆ ಇಲ್ಲ. ನಾನು ನನ್ನ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ'

-ಎಂ.ನಾರಾಯಣಸ್ವಾಮಿ, ಪರಿಷತ್ ಕಾಂಗ್ರೆಸ್ ಸದಸ್ಯ

ಸುಮ್ನೆ ಇರಬೇಕಾ?

ಮೇಲ್ಮನೆಯಲ್ಲಿ ನಿನ್ನೆ ನಡೆದ ಘಟನೆಯನ್ನು ರಾಜ್ಯದ ಜನ ನೋಡಿದ್ದಾರೆ. ಯಾರ ತಪ್ಪೆಂದು ಜನರೇ ಹೇಳುತ್ತಿದ್ದಾರೆ. ಆದರೆ, ನಾನು ಈ ಘಟನೆಯನ್ನು ಸಮರ್ಥಿಸುವುದಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಎಂಬ ಪ್ರಶ್ನೆಯಲ್ಲ. ಆದರೆ, ನಮ್ಮ ಕೊಲೆ ಮಾಡಲು ಬಂದವರನ್ನ ನೋಡ್ಕೊಂಡು ಸುಮ್ನೆ ಇರಬೇಕಾ. ಸುಮ್ನೆ ಇದ್ದರೆ ಸಭಾಪತಿ ಸ್ಥಾನವನ್ನು ನಾವು ಕಳೆದುಕೊಳ್ಳಬೇಕಾಗಿತ್ತು'

-ಜೆ.ಸಿ.ಚಂದ್ರಶೇಖರ್, ರಾಜ್ಯಸಭಾ ಸದಸ್ಯ

ಮ್ಯಾನ್ ಆಫ್ ದಿ ಮ್ಯಾಚ್ ಗೆದ್ದಿದ್ದಾರೆ

`ನಾವು ರೈತರ ಪರ ನಿಲುವು ತೆಗೆದುಕೊಂಡಿದ್ದಕ್ಕೆ ಪರಿಷತ್‍ನಲ್ಲಿ ಕಾಂಗ್ರೆಸಿಗರನ್ನೇ ಕೆಟ್ಟದಾಗಿ ಬಿಂಬಿಸಿದರು. ರೈತರ ವಿರುದ್ಧದ ಕಾನೂನನ್ನ ಬೀಳಿಸಿದ್ದೀವೆ. ಆ ಸೇಡಿನಿಂದ ಕಲಾಪವನ್ನು ಹಾಳು ಮಾಡಿದರು. ಬಿಜೆಪಿ ಹಾಗೂ ಜೆಡಿಎಸ್ ಸೇರಿ ಯೋಜನೆ ರೂಪಿಸಿ ಪರಿಷತ್‍ನಲ್ಲಿ ಗದ್ದಲ ಸೃಷ್ಟಿಸಿದರು. ಬಿಡಿಸಲು ಹೋದ ಕಾಂಗ್ರೆಸ್ ಪಕ್ಷದವರನ್ನು ಕೆಟ್ಟದಾಗಿ ಬಿಂಬಿಸಿದರು. ಬಿಜೆಪಿ ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದೆ. ನಮ್ಮ ಹೀರೋ ನಾರಾಯಣಸ್ವಾಮಿ ನಿನ್ನೆಯ ಮ್ಯಾನ್ ಆಫ್ ದಿ ಮ್ಯಾಚ್ ಗೆದ್ದಿದ್ದಾರೆ. ಬಿಜೆಪಿಯವರು `ಅಲ್ಲಿ ಕೂರಲು ಅರ್ಹರಲ್ಲ' ಎಂದು ಅವರು ಕರೆತಂದಿದ್ದಾರೆ ಅಷ್ಟೆ. ಹೀಗಾಗಿ ನಾವೆಲ್ಲರು ನಾರಾಯಣಸ್ವಾಮಿ ಪರ ಇದ್ದೇವೆ. ಆದರೆ, ನಮ್ಮ ಮೇಲೆ ಗೂಬೆ ಕೂರಿಸುವುದು ಸಲ್ಲ'

-ಬಿ.ಕೆ.ಹರಿಪ್ರಸಾದ್, ಪರಿಷತ್ ಕಾಂಗ್ರೆಸ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News