ಹೊಸ ವರ್ಷದ ಸಂಭ್ರಮಾಚರಣೆ: ನಿಯಮಾವಳಿ ಪಾಲನೆ ಕಡ್ಡಾಯ- ಕಮಲ್ ಪಂತ್

Update: 2020-12-16 18:21 GMT

ಬೆಂಗಳೂರು, ಡಿ.16: ಕೋವಿಡ್-19 ಸೋಂಕು ಹಿನ್ನೆಲೆ ರಾಜ್ಯ ಸರಕಾರ ಹೊರಡಿಸುವ ಮಾರ್ಗಸೂಚಿಗಳ ಅನ್ವಯ ಹೊಸ ವರ್ಷದ ಸಂಭ್ರಮಾಚರಣೆ ಮಾಡಬೇಕು. ಈ ಸಂದರ್ಭದಲ್ಲಿ ನಿಯಮಾವಳಿ ಪಾಲನೆ ಕಡ್ಡಾಯವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದೆಲ್ಲೆಡೆ ಕೊರೋನ ಸೋಂಕು ಇರುವ ಕಾರಣಕ್ಕಾಗಿ ಈ ಬಾರಿಯ ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಕೊಂಚ ಬದಲಾವಣೆಗೆ ರಾಜ್ಯ ಸರಕಾರ ಮುಂದಾಗಿದ್ದು, ಈ ಕುರಿತು ಈಗಾಗಲೇ ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚೆ ನಡೆಸಿ ಸಲಹೆಗಳನ್ನು ಪಡೆದುಕೊಂಡಿದೆ ಎಂದರು.

ಇನ್ನು, ಬೆಂಗಳೂರಿನ ಎಂ.ಜಿ ರಸ್ತೆ, ಇಂದಿರಾನಗರ, ಕೋರಮಂಗಲ ಸೇರಿದಂತೆ ಸಾಮೂಹಿಕವಾಗಿ ಗುಂಪು ಸೇರಿ ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆಗೆ ಈ ಬಾರಿ ಅವಕಾಶವಿಲ್ಲ ಎಂದು ಆಯುಕ್ತರು ನುಡಿದರು.

ಈಗಾಗಲೇ ಕೊರೋನ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಬಾರ್, ಪಬ್, ರೆಸ್ಟೋರೆಂಟ್‍ಗಳಿಗೆ ಪೊಲೀಸ್ ಇಲಾಖೆಯಿಂದ ಸೂಚನೆ ನೀಡಲಾಗುತ್ತದೆ. ಹೀಗಾಗಿ ಪೊಲೀಸ್ ಇಲಾಖೆಯ ನಿಯಮದ ಪ್ರಕಾರ ಬಾರ್, ರೆಸ್ಟೋರೆಂಟ್‍ಗಳು ಕಾರ್ಯನಿರ್ವಹಿಸಬೇಕು. ಜೊತೆಗೆ ಮಧ್ಯರಾತ್ರಿ ರಸ್ತೆಗಳಲ್ಲಿ ಹೊಸ ವರ್ಷ ಆಚರಣೆ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News