ಸ್ಟೀವ್ ಸ್ಮಿತ್ ಯಶಸ್ಸಿನ ಹಾದಿಯಲ್ಲಿ

Update: 2020-12-17 05:08 GMT

ಸಿಡ್ನಿ, ಡಿ.17: ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ 2019ರ ಐಸಿಸಿ ವಿಶ್ವಕಪ್‌ನಲ್ಲಿ ಮರಳಿದ ನಂತರ ಗ್ಯಾಲರಿಯಲ್ಲಿದ್ದ ಕೆಲವು ಪ್ರೇಕ್ಷಕರು ತನ್ನನ್ನು ಅಪಹಾಸ್ಯ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಬುಧವಾರ ಹೇಳಿದ್ದಾರೆ.

ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್ ಹಗರಣದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಸ್ಮಿತ್‌ಗೆ 2018ರಲ್ಲಿ ಒಂದು ವರ್ಷ ನಿಷೇಧ ಹೇರಲಾಗಿತ್ತು. ಅಫ್ಘಾನಿಸ್ತಾನ ವಿರುದ್ಧ ವಿಶ್ವಕಪ್‌ನ ಮೊದಲ ಪಂದ್ಯವನ್ನು ಆಡಿದಾಗ ಸ್ಮಿತ್‌ಗೆ ಆತ್ಮೀಯ ಸ್ವಾಗತ ಸಿಗಲಿಲ್ಲ.

‘‘ಜನರು ಏನು ಹೇಳುತ್ತಿದ್ದಾರೆಂಬುದನ್ನು ಲೆಕ್ಕಿಸದೆ ನಾನು ಶಬ್ದವನ್ನು ಇಷ್ಟಪಟ್ಟೆ, ಅದು ನನ್ನ ಕಡೆಗೆ ನಕಾರಾತ್ಮಕವಾಗಿದ್ದರೂ ಅದು ಕೇವಲ ಶಬ್ದವಾಗಿದೆ. ನಿಸ್ಸಂಶಯವಾಗಿ, ನಾನು ಮೊದಲು ಹಿಂದಿರುಗಿದಾಗ ಕೆಲವು ನಕಾರಾತ್ಮಕ ವಿಷಯಗಳಿತ್ತು. ಅವರು ಮಾಡಿರುವುದು ತಪ್ಪೆಂದು ಸಾಬೀತುಪಡಿಸಲು ಮತ್ತು ಸಕಾರಾತ್ಮಕ ಮನಸ್ಥಿತಿಯಲ್ಲಿರಲು ನಾನು ಇಷ್ಟಪಡುತ್ತೇನೆ. ನಾನು ಆಡಿದ್ದೇನೆ ಮತ್ತು ಆನಂದಿಸಿದೆ’’ ಎಂದು ಸ್ಮಿತ್ ಹೇಳಿದರು.

‘ವಿಶ್ವಕಪ್ ನಂತರ ಸ್ಟೀವ್ ಸ್ಮಿತ್ 2019ರಲ್ಲಿ ಆ್ಯಶಸ್ ಸರಣಿಯಲ್ಲಿ ಭರ್ಜರಿ ಆಟವಾಡಿದ್ದರು. ನಾಲ್ಕು ಟೆಸ್ಟ್ ಪಂದ್ಯಗಳಿಂದ 110 ಸರಾಸರಿಯಲ್ಲಿ 774 ರನ್ ಗಳಿಸಿದರು, ಸರಣಿ 2-2 ಡ್ರಾದಲ್ಲಿ ಮುಗಿದ ನಂತರ ಆಸ್ಟ್ರೇಲಿಯವು ಆ್ಯಶಸ್ ಸರಣಿಯನ್ನು ಉಳಿಸಿಕೊಂಡಿತು. ಲಾರ್ಡ್ಸ್‌ನಲ್ಲಿ ಜೋಫ್ರಾ ಆರ್ಚರ್ ಅವರ ಶಾರ್ಟ್ ಬಾಲ್ ಬಡಿದು ಐದು ಪಂದ್ಯಗಳ ಸರಣಿಯ ಒಂದು ಟೆಸ್ಟ್ ಪಂದ್ಯವನ್ನು ಸ್ಮಿತ್ ತಪ್ಪಿಸಿಕೊಂಡರು.

ಆಸ್ಟ್ರೇಲಿಯ ಮತ್ತು ಭಾರತ ಇದೀಗ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಸ್ಮಿತ್ ಅಪೂರ್ವ ಫಾರ್ಮ್‌ನ್ನು ಮುಂದು ವರಿಸುವುದನ್ನು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News