ಕಮಲ್‌ನಾಥ್ ಸರ್ಕಾರ ಪತನದಲ್ಲಿ ಮೋದಿ ಪಾತ್ರ ಮಹತ್ವದ್ದು : ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‌ ವರ್ಗೀಯ

Update: 2020-12-17 05:50 GMT

ಭೋಪಾಲ್ : ಮಧ್ಯಪ್ರದೇಶದಲ್ಲಿ ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರ ಮಹತ್ವದ್ದಾಗಿತ್ತು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‌ವರ್ಗಿಯಾ ಬಹಿರಂಗಪಡಿಸಿದ್ದಾರೆ.

ವಿಜಯ್‌ವರ್ಗಿಯ ಅವರು, ಮಧ್ಯಪ್ರದೇಶದ ಮಾಜಿ ಸಚಿವ ಹಾಗೂ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಪಶ್ಚಿಮ ಬಂಗಾಳ ಚುನಾವಣೆಯ ಉಸ್ತುವಾರಿ ಹೊಂದಿದ್ದಾರೆ. ಇಂದೋರ್‌ನಲ್ಲಿ ನಡೆದ ಬಿಜೆಪಿ ಕಿಸಾನ್ ಸಮ್ಮೇಳನದಲ್ಲಿ ಮಾತನಾಡಿದ ಅವರು ಈ ವಿಷಯ ಬಹಿರಂಗಪಡಿಸಿದರು.

"ಯಾರಿಗೂ ಹೇಳಬೇಡಿ; ಇದುವರೆಗೆ ಯಾರಿಗೂ ಇದನ್ನು ಹೇಳಿಲ್ಲ; ಈ ವೇದಿಕೆಯಲ್ಲಿ ಈ ಹಂತದಲ್ಲಿ ಮೊದಲ ಬಾರಿಗೆ ಬಹಿರಂಗಪಡಿಸುತ್ತಿದ್ದೇನೆ. ಕಮಲ್‌ನಾಥ್ ಸರ್ಕಾರ ಪತನದಲ್ಲಿ ಯಾರಾದರೂ ಪ್ರಧಾನ ಪಾತ್ರ ವಹಿಸಿದ್ದರೆ ಅದು ಧರ್ಮೇಂದ್ರ ಪ್ರಧಾನ್ ಅಲ್ಲ; ನರೇಂದ್ರ ಮೋದಿ" ಎಂದು ಹೇಳಿದರು. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಮಧ್ಯಪ್ರದೇಶ ಗೃಹಸಚಿವ ನರೋತ್ತಮ್ ಮಿಶ್ರಾ ಕೂಡಾ ಈ ಸಂದರ್ಭ ವೇದಿಕೆಯಲ್ಲಿದ್ದರು.

ವಿಜಯ್‌ವರ್ಗಿಯಾ ಹೇಳಿಕೆ ಕುರಿತ ವೀಡಿಯೊ ಟ್ವೀಟ್ ಮಾಡಿರುವ ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ "ಸಂವಿಧಾನಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಅಸಂವಿಧಾನಿಕ ವಿಧಾನದಲ್ಲಿ ಪತನಗೊಳಿಸಿದ್ದು ಪ್ರಧಾನಿ ನರೇಂದ್ರ ಮೋದಿ ಎನ್ನುವುದು ಈಗ ಸ್ಪಷ್ಟ" ಎಂದು ಹೇಳಿದ್ದಾರೆ.

ಕಾಂಗ್ರೆಸ್ ಆರಂಭದಿಂದಲೂ ಸರ್ಕಾರ ಪತನಕ್ಕೆ ಪ್ರಧಾನಿ ಮೋದಿಯವರೇ ಹೊಣೆ ಎಂದು ಹೇಳುತ್ತಾ ಬಂದಿತ್ತು. ಆದರೆ ಬಿಜೆಪಿ ಮಾತ್ರ, ಆಡಳಿತ ಪಕ್ಷದ ಆಂತರಿಕ ಭಿನ್ನಾಭಿಪ್ರಾಯದಿಂದ ಸರ್ಕಾರ ಪತನವಾಗಿದೆ ಎಂದು ಪ್ರತಿಪಾದಿಸಿತ್ತು. ಆದರೆ ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‌ವರ್ಗಿಯಾ ಈ ಸತ್ಯವನ್ನು ಬಹಿರಂಗಪಡಿಸಿದ್ದಾರೆ ಎಂದು ವಿವರಿಸಿದ್ದಾರೆ.

ಇದಕ್ಕೂ ಮುನ್ನ ಜೂನ್‌ನಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, "ಕೇಂದ್ರ ನಾಯಕತ್ವ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ನಿರ್ಧರಿಸಿತ್ತು" ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News