ರೈತ ವಿರೋಧಿ ಕಾನೂನು ಜಾರಿಗೆ ತರುತ್ತಿರುವ ಮೋದಿ ಆಧುನಿಕ ಭಸ್ಮಾಸುರ: ವಿ.ಎಸ್.ಉಗ್ರಪ್ಪ

Update: 2020-12-17 11:57 GMT

ಬಳ್ಳಾರಿ, ಡಿ.17: ಉದ್ಯೋಗ ಸೃಷ್ಟಿ, ದೇಶದ ಆರ್ಥಿಕತೆ ಬಲಪಡಿಸುವ ಬಗ್ಗೆ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಆ ಕೆಲಸಗಳನ್ನು ಮಾಡದೇ, ಜನವಿರೋಧಿ, ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿರುವ ಆಧುನಿಕ ಭಸ್ಮಾಸುರ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಟೀಕಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಆರ್ಥಿಕ ಶಕ್ತಿಯನ್ನು ಬಲಪಡಿಸುವುದಾಗಿ ಭರವಸೆ ನೀಡಿದ್ದ ಮೋದಿ ಅಧೋಗತಿಗೆ ಕೊಂಡೊಯ್ದಿದ್ದಾರೆ. ಉದ್ಯೋಗ ಸೃಷ್ಟಿಯೂ ಆಗಿಲ್ಲ. ಜಿಡಿಪಿ ಕೂಡ ಕುಸಿದಿದೆ ಎಂದು ಟೀಕಿಸಿದರು.

ಪ್ರತಿ ವರ್ಷ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ನೀಡಿದ್ದ ಭರವಸೆ ಈಡೇರಲಿಲ್ಲ. ಇರುವ ಉದ್ಯೋಗಗಳೂ ಹೋಗುತ್ತಿವೆ. ನೋಟು ರದ್ದತಿಯಿಂದ ಕಪ್ಪು ಹಣದ ಪತ್ತೆಯೂ ಆಗಲಿಲ್ಲ. ಬಡವರ ಖಾತೆಗೆ ಲಕ್ಷಾಂತರ ಹಣವೂ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಂದಿರಾಗಾಂಧಿ, ದೇವರಾಜ ಅರಸು ಅವರ ಅವಧಿಯಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು ರಾಜ್ಯದ ಲಕ್ಷಾಂತರ ರೈತರ ಬದುಕನ್ನು ಕಾಂಗ್ರೆಸ್ ಸರಕಾರ ಉತ್ತಮಪಡಿಸಿತ್ತು. ಆದರೆ, ಈಗ ಕೃಷಿ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಪ್ರಧಾನಿ ಮೋದಿ ರೈತರ ಬದುಕಿನ ಜೊತೆ ಆಟವಾಡುತ್ತಿದ್ದಾರೆ ಎಂದು ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News