ಕೃಷಿ ಕಾಯ್ದೆಗಳು ಕೂಡಲೇ ಹಿಂಪಡೆಯಲು ಪಟ್ಟು: ಬೆಂಗಳೂರಿನಲ್ಲಿ ಸಮಾಜವಾದಿ ಪಕ್ಷದಿಂದ ಧರಣಿ

Update: 2020-12-17 12:43 GMT

ಬೆಂಗಳೂರು, ಡಿ.17: ಕೇಂದ್ರ ಸರಕಾರ ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಹಾಗೂ ಹೊಸದಿಲ್ಲಿಯಲ್ಲಿ ಹಲವು ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಸಮಾಜವಾದಿ ಪಕ್ಷದ ಮುಖಂಡರು ಧರಣಿ ನಡೆಸಿದರು.

ಗುರುವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಪಕ್ಷದ ಕಾರ್ಯಕರ್ತರು, ಮುಖಂಡರು, ಕೇಂದ್ರ ಸರಕಾರ ರೈತರ ಬಿಕ್ಕಟ್ಟು ಬಗೆಹರಿಸುವಂತೆ ಆಗ್ರಹಿಸಿದರು.

ಕಾರ್ಪೋರೇಟ್ ಕೃಷಿ ಜಾರಿಗಾಗಿ ತಂದಿರುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ವಿದ್ಯುತ್ ರಂಗದ ಖಾಸಗೀಕರಣಕ್ಕೆ ಪೂರಕವಾಗಿರುವ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ, ರಾಜ್ಯ ಸರಕಾರದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇಧ ತಿದ್ದುಪಡಿ ಮಸೂದೆಗಳನ್ನು ವಾಪಸ್ ಪಡೆಯಬೇಕು ಎಂದು ಘೋಷಣೆಗಳನ್ನು ಕೂಗಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ರಾಬಿನ್ ಮ್ಯಾಥ್ಯೂಸ್, ಕೇಂದ್ರ ಸರಕಾರವು ರೈತರನ್ನು ಪೊಲೀಸರು, ಸೈನಿಕರ ಮೂಲಕ ಅವರನ್ನು ತಡೆದು ಹೊಸದಿಲ್ಲಿಯ ಹೊರವಲಯದಲ್ಲಿ ನಿಲ್ಲಿಸಿದ್ದಾರೆ. ವಿಪರೀತ ಚಳಿ ಲೆಕ್ಕಿಸದೆ ರೈತರು ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ. ಅವರಿಗೆ ನೈತಿಕ ಬೆಂಬಲ ನೀಡುವುದಕ್ಕಾಗಿ ಸಾಂಕೇತಿಕವಾಗಿ ಧರಣಿ ನಡೆಸಲಾಯಿತು ಎಂದರು.

ರೈತರ ಮೇಲೆ ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಪ್ರಯೋಗಿಸಿ ದೌರ್ಜನ್ಯ ಎಸಗಿದ ಕೇಂದ್ರ ಸರಕಾರದ ಕ್ರಮ ಖಂಡನೀಯ. ಕಾರ್ಪೋರೇಟ್ ಪರವಾದ ನೀತಿಗಳನ್ನು ಜಾರಿಗೆ ತಂದು ರೈತರನ್ನು ಕೃಷಿಯಿಂದ ವಿಮುಖಗೊಳಿಸುತ್ತಿರುವ ನಡೆಯೂ ಖಂಡನಾರ್ಹ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕಾಯ್ದೆಗಳಿಗೆ ತರಾತುರಿಯಲ್ಲಿ ತಿದ್ದುಪಡಿ ತಂದು ರೈತರಿಗೆ ಮರಣ ಶಾಸನ ಬರೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News