ಕಾರ್ಪೊರೇಟ್ ಶಕ್ತಿಗಳ ವಿರುದ್ಧದ ರೈತ ಹೋರಾಟಕ್ಕೆ ಜತೆಯಾಗೋಣ: ರಂಗಕರ್ಮಿ ಪ್ರಸನ್ನ

Update: 2020-12-17 17:06 GMT

ಬೆಂಗಳೂರು, ಡಿ.17: ಕೇಂದ್ರ ಸರಕಾರ ಕಾರ್ಪೊರೇಟ್ ನೀತಿಗಳ ವಿರುದ್ಧ ದೇಶದ ರೈತ ಸಮುದಾಯ ಚಾರಿತ್ರಿಕ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಪ್ರತಿಯೊಬ್ಬರ ಬೆಂಬಲ ಅಗತ್ಯವಿದೆ ಎಂದು ರಂಗಕರ್ಮಿ ಪ್ರಸನ್ನ ತಿಳಿಸಿದ್ದಾರೆ.

ಕೇಂದ್ರ ಸರಕಾರ ಜಾರಿ ಮಾಡಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೊಸದಿಲ್ಲಿಯಲ್ಲಿ ರೈತ ಸಮೂಹ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ನಗರದಲ್ಲಿ ಎಐಕೆಎಸ್‍ಸಿಸಿ(ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ) ವತಿಯಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ ಅನಿರ್ದಿಷ್ಟ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೊಸದಿಲ್ಲಿಯಲ್ಲಿ ರೈತರ ನಡೆಸುತ್ತಿರುವುದು ಶ್ರಮ ಸಂಸ್ಕೃಯ ಗ್ರಾಮೀಣ ಬದುಕಿನ ರಕ್ಷಣೆಗಾಗಿ ನಡೆಸುತ್ತಿರುವ ಹೋರಾಟವಾಗಿದೆ ಎಂದು ತಿಳಿಸಿದ್ದಾರೆ.

ಕೃಷಿಕರು ಹಾಗೂ ಕೃಷಿ ಕಾರ್ಮಿಕರೇ ನಮ್ಮ ದೇಶದ ನಿಜವಾದ ಜ್ಞಾನಿಗಳು. ನಮ್ಮ ಶ್ರಮ ಸಂಸ್ಕೃತಿಯ ಜ್ಞಾನದ ಋಷಿಗಳಾಗಿರುವ ರೈತರು, ಕರಕುಶಲ ಕರ್ಮಿಗಳು, ಕೃಷಿ ಕೂಲಿಕಾರರು ಯಾವುದೇ ಅಂಜಿಕೆ ಆತಂಕ ಕೀಳರಿಮೆಯಿಲ್ಲದೆ ಕೇಂದ್ರ ಸರಕಾರ ಜಾರಿ ಮಾಡಿರುವ ಜನವಿರೋಧಿ ಕಾಯ್ದೆಗಳ ವಿರುದ್ಧ ಹೋರಾಟ ಮುಂದುವರಿಸಲಿ. ಅವರಿಗೆ ಬೆಂಬಲಿಸುವುದು ಅಭಿಮಾನದ ವಿಷಯವೆಂದು ಅವರು ಹೇಳಿದ್ದಾರೆ.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ತಂದಿರುವ ಕೃಷಿ ಕಾಯ್ದೆಗಳು ಕೂಲಿಕಾರರನ್ನು ನಿರುದ್ಯೋಗಿಯಾಗಿಸಿ, ಹಸಿವಿಗೆ ತಳ್ಳುವ ಕಾನೂನುಗಳಾಗಿವೆ. ಈಗಾಗಲೇ 25ಮಂದಿ ರೈತ ಹೋರಾಟಗಾರರು ಚಳಿ ಮತ್ತಿತರೆ ಕಾರಣಗಳಿಂದ ನಿಧನರಾಗಿದ್ದಾರೆ. ಆದರೂ ಕೇಂದ್ರ ಸರಕಾರಕ್ಕೆ ಈ ಸಾವುಗಳ ಬಗ್ಗೆ ಯಾವುದೇ ಕನಿಕರವಿಲ್ಲ. ಈ ಅಂಶದಿಂದಲೇ ಬಿಜೆಪಿ ಸರಕಾರಕ್ಕೆ ರೈತರ ಮೇಲೆ ಎಷ್ಟು ಕಾಳಜಿ ಇದೆ ಎಂಬುದು ಗೊತ್ತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ, ರಾಜ್ಯ ಉಪಾಧ್ಯಕ್ಷ ಪುಟ್ಟಮಾದು, ಮಾಜಿ ಜಿಪಂ ಸದಸ್ಯೆ ಸಾವಿತ್ರಮ್ಮ, ಯು.ಬಸವರಾಜು. ಟಿ.ಯಶವಂತ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News