ಬೆಂಗಳೂರು ನಗರದಲ್ಲಿ ಭಿಕ್ಷೆ ಬೇಡುವ ಮಕ್ಕಳ ಸರ್ವೆಗೆ ಆಯುಕ್ತರ ಸೂಚನೆ
ಬೆಂಗಳೂರು, ಡಿ.18: ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಭಿಕ್ಷೆ ಬೇಡುವ ಅಥವಾ ಟ್ರಾಫಿಕ್ ಸಿಗ್ನಲ್‍ಗಳ ಬಳಿಯ ಆಟಿಕೆ ಅಥವಾ ವಸ್ತುಗಳನ್ನು ಮಾರಾಟ ಮಾಡುವಂತಹ ಮಕ್ಕಳು ಹಾಗೂ ಸ್ಲಂಗಳಲ್ಲಿನ ವಾಸಿಸುವ ಮಕ್ಕಳ ನಿಖರ ಮಾಹಿತಿಯನ್ನು ತ್ವರಿತವಾಗಿ ಸರ್ವೆ ಮಾಡಿ ಪಟ್ಟಿ ಸಿದ್ಧಪಡಿಸಬೇಕು ಎಂದು ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ಸೂಚನೆ ನೀಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭಿಕ್ಷಾಟನೆ ಮತ್ತು ಸ್ಲಂಗಳಲ್ಲಿನ ಮಕ್ಕಳನ್ನು ಗುರುತಿಸುವ ಸಲುವಾಗಿ ಪಾಲಿಕೆ ಕೇಂದ್ರ ಕಚೇರಿ ಸಭಾಂಗಣ-01ರಲ್ಲಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ವಲಯ ಜಂಟಿ ಆಯುಕ್ತರು ಹಾಗೂ ಆಯಾ ವಲಯಕ್ಕೆ ಸಂಬಂಧಿಸಿದ ಅಧಿಕಾರಿಗಳು ರಾತ್ರಿ 8 ರಿಂದ ಮಧ್ಯರಾತ್ರಿ 12 ರವರೆಗೆ ತಪಾಸಣೆ ನಡೆಸಿ ರಸ್ತೆ, ಪಾದಚಾರಿ ಮಾರ್ಗ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ತಂಗುದಾಣ, ಮಾರುಕಟ್ಟೆ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಸೂರು(ಮನೆ) ಇಲ್ಲದೆ ಮಲಗಿರುವವರನ್ನು ಗುರುತಿಸಿ ಪಟ್ಟಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ದಿನನಿತ್ಯದ ಕೆಲಸಗಳ ಜೊತೆ-ಜೊತೆಗೆ ಬಿಕ್ಷೆ ಬೇಡುವ ಹಾಗೂ ಟ್ರಾಫಿಕ್ ಸಿಗ್ನಲ್ ಬಳಿ ಬಿಕ್ಷೆ ಬೇಡುವ ಅಥವಾ ಪೆನ್, ನ್ಯಾಪ್‍ಕಿನ್, ಬಲೂನ್ ಸೇರಿದಂತೆ ಇನ್ನಿತರೆ ಆಟಿಕೆ/ವಸ್ತುಗಳನ್ನು ಮಾರಾಟ ಮಾಡುವ ಮಕ್ಕಳು, ಸ್ಲಂಗಳಲ್ಲಿ ಶಾಲೆಗೆ ಹೋಗದೆ ಮನೆಯಲ್ಲೇ ಇರುವಂತಹ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟು ಸ್ಲಂಗಳಿವೆಯೋ ಅಷ್ಟೂ ಸ್ಲಂಗಳಲ್ಲಿ ಎಷ್ಟು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ, ಎಷ್ಟು ಮಕ್ಕಳು ಮನೆಯಲ್ಲೇ ಇದ್ದಾರೆ ಎಂಬ ನಿಖರ ಮಾಹಿತಿ ಸಂಗ್ರಹಿಸಿ, ಸ್ಲಂಗಳಿಗೇ ಶಿಕ್ಷಕರನ್ನು ಕಳುಹಿಸಿ ಅವರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ನಗರದಲ್ಲಿ ರಸ್ತೆ, ಪಾದಚಾರಿ ಮಾರ್ಗ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ತಂಗುದಾಣ, ಸಬ್‍ವೇ, ಮಾರುಕಟ್ಟೆ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಮಲಗುವ ಮಕ್ಕಳು ಅಥವಾ ವಯಸ್ಕರು ಎಲ್ಲಿಂದ ಬಂದಿದ್ದಾರೆ, ಯಾವ ಕಾರಣಕ್ಕಾಗಿ ಭಿಕ್ಷೆ ಬೇಡುತ್ತಿದ್ದಾರೆ, ಇಲ್ಲಿನವರು ಹಾಗೂ ಹೊರ ರಾಜ್ಯದಿಂದ ಬಂದವರೆಷ್ಟು ಮಂದಿ ಸೇರಿದಂತೆ ಇನ್ನಿತರೆ ಸಮರ್ಪಕ ಮಾಹಿತಿಯನ್ನು ಛಾಯಾಚಿತ್ರದ ಸಮೇತ ಸಮೀಕ್ಷೆ ನಡೆಸಿ ವರದಿ ಮಾಡಬೇಕು. ಜೊತೆಗೆ ರಾತ್ರಿ ವೇಳೆ ಆಶ್ರಯ ಕಲ್ಪಿಸಲು ಇರುವ ಪಾಲಿಕೆಯ ರಾತ್ರಿ ತಂಗುದಾಣಗಳಲ್ಲಿ ಮಲಗಲು ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವಿಶೇಷ ಆಯುಕ್ತರು(ಕಲ್ಯಾಣ) ರವೀಂದ್ರ, ವಿಶೇಷ ಆಯುಕ್ತರು(ಆಡಳಿತ) ಜೆ.ಮಂಜುನಾಥ್, ವಲಯ ಜಂಟಿ ಆಯುಕ್ತರುಗಳಾದ ಪಲ್ಲವಿ, ರಾಮಕೃಷ್ಣ, ಅಶೋಕ್, ವೆಂಕಟಾಚಲಪತಿ, ನರಸಿಂಹಮೂರ್ತಿ, ಸಹಾಯಕ ಆಯುಕ್ತರು(ಶಿಕ್ಷಣ) ನಾಗೇಂದ್ರ ನಾಯ್ಕ್, ಮಕ್ಕಳ ರಕ್ಷಣಾ ನಿರ್ದೇಶನಾಲಯದ ಯೋಜನಾ ನಿರ್ದೇಶಕಿ ಪುಷ್ಪಲತಾ ಸೇರಿದಂತೆ ಮತ್ತಿತರೆ ಅಧಿಕಾರಿಗಳಿದ್ದರು.