ಎಚ್‍ಡಿಕೆ ಹೊಟೇಲ್‍ನಿಂದ ಆಡಳಿತ ನಡೆಸುವಾಗ ಸಿದ್ದರಾಮಯ್ಯ ಏನು ಮಾಡುತ್ತಿದ್ದರು: ಅಶೋಕ್ ಪ್ರಶ್ನೆ
ಬೆಂಗಳೂರು, ಡಿ. 19: ಕುಮಾರಸ್ವಾಮಿ ಒಂದು ವರ್ಷ ತಾಜ್ ಹೊಟೇಲ್‍ನಲ್ಲಿ ಕೂತು ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಅದು ಸಿದ್ದರಾಮಯ್ಯನವರ ಕಣ್ಣಿಗೆ ಕಾಣಿಸಲಿಲ್ಲವೇ? ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಅವಧಿಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಆಗಲೇ ಈ ಬಗ್ಗೆ ತುಟಿಬಿಚ್ಚದೆ ಈಗ ಪ್ರಶ್ನೆ ಮಾಡಿದರೆ ಏನು ಪ್ರಯೋಜನ ಎಂದು ಇದೇ ಸಂದರ್ಭದಲ್ಲಿ ಲೇವಡಿ ಮಾಡಿದರು.
ತಮ್ಮನ್ನು ಸೋಲಿಸಿದವರು ಎಂದು ಈಗ ಹೇಳುತ್ತಿದ್ದಾರೆ. ಆ ಸಂದರ್ಭದಲ್ಲಿ ಅವರ ಜತೆಯಲ್ಲೇ ಇದ್ದರು. ಸಿದ್ದರಾಮಯ್ಯ ಅವರು ಈ ವಿಷಯವನ್ನು ಡಿ.ಕೆ.ಶಿವಕುಮಾರ್ ಅವರನ್ನು ಉದ್ದೇಶಿಸಿಯೇ ಹೇಳಿರಬೇಕು ಎಂದು ಕೆಣಕಿದ ಅಶೋಕ್, ಕಾಂಗ್ರೆಸ್‍ನಲ್ಲಿ ಆಂತರಿಕ ಕಚ್ಚಾಟವಿದೆ. ಜೆಡಿಎಸ್ ಜತೆಗೆ ನಾವು ಯಾವುದೇ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ನೈತಿಕತೆ ಇಲ್ಲ: ಪ್ರಧಾನಿ ಮೋದಿಯವರಿಗೆ ರೈತರ ಕಷ್ಟ ಗೊತ್ತಿಲ್ಲ ಎಂದು ಹೇಳುವ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಭೂಮಿ ಉತ್ತಿದ್ದಾರಾ, ಬಿತ್ತಿದ್ದಾರಾ? ಅವರ ತಂದೆ, ತಾಯಿ, ಅಜ್ಜ–ಅಜ್ಜಿ ಯಾರೂ ರೈತರಲ್ಲ. ಹೀಗಾಗಿ ಅವರಿಗೆ ಮೋದಿಯವರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ಅಶೋಕ್ ತಿರುಗೇಟು ನೀಡಿದರು.
ರೈತರ ಬಗ್ಗೆ ಕಿಂಚಿತ್ತು ಗೊತ್ತಿಲ್ಲದವರು ನಮಗೆ ಬುದ್ಧಿವಾದ ಹೇಳುವುದು ಬೇಡ. ಕಾಂಗ್ರೆಸ್ ನಾಯಕರು ಢೋಂಗಿ ರಾಜಕಾರಣ ಮಾಡುತ್ತಿದ್ದಾರೆ. ಮೊದಲು ರೈತರು ತಾವು ಬೆಳೆದ ಉತ್ಪನ್ನಗಳನ್ನು ಎಪಿಎಂಸಿ ಬಿಟ್ಟು ಬೇರೆ ಕಡೆಗಳಲ್ಲಿ ಮಾರುವಂತಿರಲಿಲ್ಲ. ಹಾಗೆ ಮಾಡಿದ್ದರೆ ರೈತರ ಮೇಲೆ ಕೇಸ್ ಹಾಕಬಹುದಿತ್ತು. ಹೊಸ ಕಾಯ್ದೆಗಳಿಂದ ರೈತರ ತಾನು ಬೆಳೆದ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಬಹುದು ಎಂದು ಕಾಯ್ದೆ ತಿದ್ದುಪಡಿಯನ್ನು ಸಮರ್ಥಿಸಿದರು.