ಟೊಯೋಟಾ ಕಿರ್ಲೋಸ್ಕರ್ ಬಿಕ್ಕಟ್ಟು: ಹೋರಾಟ ಮಾಡದಿದ್ದರೆ ಕಾರ್ಮಿಕರಿಗೆ ಭವಿಷ್ಯವಿಲ್ಲ ಎಂದ ಕಾರ್ಮಿಕ ಮುಖಂಡರು

Update: 2020-12-19 18:00 GMT
ಫೈಲ್ ಚಿತ್ರ

ಬೆಂಗಳೂರು, ಡಿ. 19: ರಾಮನಗರ ಜಿಲ್ಲೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆ ಆಡಳಿತ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ಹೋರಾಟವೊಂದೆ ಮಾರ್ಗ. ಅದನ್ನು ಹೊರತುಪಡಿಸಿದರೆ ಕಾರ್ಮಿಕರಿಗೆ ಭವಿಷ್ಯವಿಲ್ಲ ಎಂದು ಕಾರ್ಮಿಕರ ಮುಖಂಡರು ಇಂದಿಲ್ಲಿ ಸಲಹೆ ಮಾಡಿದ್ದಾರೆ.

ಶನಿವಾರ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆಯ ಕಾರ್ಮಿಕರ ಅಮಾನತ್ತು ರದ್ದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕಾರ್ಮಿಕರು ನಡೆಸುತ್ತಿರುವ ಮುಷ್ಕರ 41ನೆ ದಿನಕ್ಕೆ ಕಾಲಿಟ್ಟಿದೆ. ಈ ಹೋರಾಟಕ್ಕೆ ಹುಂಡೈ, ಫೋರ್ಡ್, ರೇನೊಲ್ಟ್, ನಿಸಾನ್, ಬಿಎಂಡಬ್ಲ್ಯೂ, ವೋಲ್ವೋ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಿವೆ.

ಕಾರ್ಮಿಕ ಕಾನೂನುಗಳ ತಿದ್ದುಪಡಿ ಹಿನ್ನೆಲೆಯಲ್ಲಿ ಆಟೋಮೊಬೈಲ್ ಕ್ಷೇತ್ರದ ಎಲ್ಲ ಕಾರ್ಮಿಕರು ಹೊಸದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಮಾದರಿಯಲ್ಲೇ ಹೋರಾಟಕ್ಕೆ ಮುಂದಾಗದಿದ್ದರೆ ಕಾರ್ಮಿಕರಿಗೆ ಭವಿಷ್ಯವಿಲ್ಲ. ಹೀಗಾಗಿ ಈ ಕ್ಷೇತ್ರದ ಎಲ್ಲ ಕಾರ್ಮಿಕರು ಐಕ್ಯ ಹೋರಾಟವನ್ನು ರೂಪಿಸುವ ಅಗತ್ಯವಿದೆ ಎಂದು ಮುಖಂಡರು ಸಲಹೆನೀಡಿದರು.

ಟೊಯೋಟಾ ಬಿಕ್ಕಟ್ಟು ಪರಿಹಾರಕ್ಕೆ ಆಡಳಿತ ಮಂಡಳಿಗೆ ಒಂದು ಜಂಟಿ ಪತ್ರವನ್ನು ನೀಡಿ ತಮಿಳುನಾಡಿನ ಚೆನ್ನೈನಲ್ಲಿ ಹೋರಾಟ ನಡೆಸಲಾಗುವುದು ಎಂದು ಕಾರ್ಮಿಕ ಮುಖಂಡರು ತಿಳಿಸಿದ್ದಾರೆ. ಟಿಕೆಎಂ ಕಾರ್ಮಿಕ ಯುನಿಯನ್‍ನ ಪ್ರಸನ್ನಕುಮಾರ್ ಚೆಕ್ಕೆರೆ, ಗಂಗಾಧರ್ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News