ಮರು ಚಿಂತಿಸುವುದನ್ನು ಕಲಿಸುತ್ತಿರುವ ಮಹಾ ಸಾಂಕ್ರಾಮಿಕ ಕೊರೋನ

Update: 2020-12-20 19:30 GMT

ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುವ ಹೋಮಿ ಕೆ. ಬಾಬಾ ಮುಂಬೈ ನಗರದಲ್ಲಿ ಜನಿಸಿದವರು. ವಸಾಹತೋತ್ತರ ಅಧ್ಯಯನಕ್ಕೆ ಮುಖ್ಯವಾದ ಕೊಡುಗೆಗಳನ್ನು ನೀಡಿದ್ದಾರೆ. ‘ದ ವೈರ್’ ಅಂತರ್ಜಾಲ ಪತ್ರಿಕೆಯ ಸ್ಥಾಪಕರಲ್ಲಿ ಒಬ್ಬರಾದ ಸಿದ್ಧಾರ್ಥ ಭಾಟಿಯ ಅವರು ಹೋಮಿ ಕೆ. ಬಾಬಾ ಅವರೊಂದಿಗೆ ನಡೆಸಿದ ಸಂದರ್ಶನದ ಕನ್ನಡ ಅನುವಾದವಿದು. ಡಿಸೆಂಬರ್ 12, 2020ರಂದು ಪ್ರಕಟವಾದ ಮೂಲ ಸಂದರ್ಶನವನ್ನು https://m.thewire.in/article/politics/watch-homi-k-bhabha-interview-populism ಲಿಂಕ್‌ನಲ್ಲಿ ನೋಡಬಹುದು. 


ಭಾಗ-2

ಸಿದ್ಧಾರ್ಥ ಭಾಟಿಯ: ಇವರೆಲ್ಲಾ ಜನರಿಂದ ಚುನಾಯಿತರಾದ ಕಾರಣ ಇವರನ್ನು ಜನರ ಆಯ್ಕೆ ಎಂದು ಗೌರವಿಸುವ ಅಗತ್ಯವಿದೆಯೇ? ಇನ್ನಷ್ಟು ಚೆಕ್ಸ್ ಆ್ಯಂಡ್ ಬ್ಯಾಲೆನ್ಸ್ ಬೇಕೆಂದು ನಿಮಗೆ ಅನ್ನಿಸುವುದಿಲ್ಲವೇ?

ಹೋಮಿ ಬಾಬಾ: ಮುಂದೊಂದು ಹಂತದಲ್ಲಿ ಖಂಡಿತವಾಗಿಯೂ ಜನರು ಇಂತಹ ಸ್ಥಿತಿಯನ್ನು ಎಂದಿಗೂ ಸ್ವೀಕರಿಸುವುದಿಲ್ಲ. ಈ ಕಾರಣದಿಂದಲೇ ಜನರು ರಾಷ್ಟ್ರೀಯ ಹಂತದಲ್ಲಿ ಚಳವಳಿಗಳಿಗೆ ಮುಂದಾಗುತ್ತಾರೆ. ಇಂತಹ ಚಳವಳಿಗಳಿಂದ ಬಲವಾದ ಬದಲಾವಣೆಗಳು ಮೂಡುತ್ತವೆ ಎಂದು ನಿರೀಕ್ಷಿಸುವುದು ಕಷ್ಟಸಾಧ್ಯ ಎನ್ನುವುದೂ ಸತ್ಯವೇ. ಆದರೆ ಬಲವಾದ ಬದಲಾವಣೆಗೆ ಕಾರಣವಾಗುವಂತಹ ಪ್ರತಿಭಟನೆಯ ಸೂಚನೆಗಳು ಅಲ್ಲಲ್ಲಿ ಖಂಡಿತ ದೊರೆಯುತ್ತಿವೆ. ಉದಾಹರಣೆಗೆ ನಾನು ಅಮೆರಿಕದ ಕುರಿತು ಆಲೋಚಿಸುತ್ತಿದ್ದೆ: ಇಲ್ಲಿನ ಜನರು ಮತದಾನದ ಮೂಲಕ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಅಮೆರಿಕದ ಈಗಿನ ಅಧ್ಯಕ್ಷರನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಇದು ಸ್ವೀಕಾರ್ಹ ಎನಿಸಿದೆ. ಇವರ ಅರ್ಟಾನಿ ಜನರಲ್ ಆಗಿದ್ದ ವ್ಯಕ್ತಿ ಅವರ ಪರವಾಗಿ ಏನೆಲ್ಲಾ ಮಸಲತ್ತು ಮಾಡುತ್ತಲೇ ಬಂದರೂ, ಚುನಾವಣೆಯಲ್ಲಿ ಯಾವುದೇ ಲೋಪವಾಗಲಿ, ಮೋಸವಾಗಲಿ ಆಗಿಲ್ಲವೆಂದು ಘೋಷಿಸಿದ್ದಾರೆ. ಇಷ್ಟಾದರೂ, ಚುನಾವಣೆಯ ಫಲಿತಾಂಶವನ್ನು ಸ್ವೀಕರಿಸಲು ಸಿದ್ಧರಿಲ್ಲದ ಟ್ರಂಪ್ ತಮ್ಮಾಂದಿಗೆ ಅನೇಕರನ್ನು ಇರಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಇದು ಮತ್ತೊಂದು ಪ್ರಶ್ನೆಗೆ ಅವಕಾಶ ನೀಡುತ್ತದೆ. ಇಂತಹ ನಾಯಕರು ಜನರಿಗೇಕೆ ಆಕರ್ಷಕವಾಗಿ ಕಾಣುತ್ತಾರೆ? ನಾವು ಇವರನ್ನು ನಮ್ಮ ದೃಷ್ಟಿಕೋನದಿಂದ ವಿಮರ್ಶೆಗೆ ಒಳಪಡಿಸುತ್ತೇವೆ. ಆದರೆ, ಅವರ ಬೆಂಬಲಿಗರ ದೃಷ್ಟಿಕೋನದಿಂದಲೂ ಒಮ್ಮೆ ಇಂತಹ ನಾಯಕರನ್ನು ಅರಿಯುವ ಯತ್ನ ಮಾಡಬೇಕಿರುತ್ತದೆ. ಇದು ಕೇವಲ ಓರ್ವ ಪ್ರಬಲ ನಾಯಕನ ಕುರಿತಾದ ಆಕರ್ಷಣೆ ಅಷ್ಟೇ ಆಗಿರುವುದಿಲ್ಲ. ಬದಲಿಗೆ ಇದೊಂದು ಸುಳ್ಳಿನ ಕಂತೆಯನ್ನು ಆಧರಿಸಿದ ಮತ್ತು ವಾಸ್ತವವನ್ನು ನಿರಾಕರಿಸುವ ಮನೋಭಾವದ, ಜೊತೆಗೆ ‘ಕ್ಯೂಅನಾನ್’ ರೀತಿಯ ವಿಪರೀತ ಕಲ್ಪನೆಯನ್ನು ಆಧರಿಸಿದ ಅಂಶಗಳ ಆಕರ್ಷಣೆಯಾಗಿರುತ್ತದೆ. ಎಲ್ಲಾ ಡೆಮಾಕ್ರಟ್‌ಗಳು ಮಕ್ಕಳ ಶೋಷಣೆಯಲ್ಲಿ ತೊಡಗಿರುವ ದೆವ್ವಗಳು ಎನ್ನುವ ರೀತಿಯ ಅಸಂಬದ್ಧ ಅಂತೆಕಂತೆಗಳನ್ನು ಅವಲಂಬಿಸಿರುವ ಮತ್ತು ವೆನೆಝವೆಲ ದೇಶ ಅಮೆರಿಕದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿದೆ ಎನ್ನುವ ಅತಾರ್ಕಿಕವಾದ ಚಿಂತನೆಗಳನ್ನು ಹೊಂದಿರುವ ಇದರ ಹಿಂದಿನ ಮರ್ಮವೇನೆಂದು ಅರಿಯಲು ನಾವು ಮನೋವಿಜ್ಞಾನದ ಸಹಾಯವನ್ನು ಪಡೆಯಬೇಕಿರುತ್ತದೆ. ಯಾವ ಕಾರಣಕ್ಕಾಗಿ ಇಂತಹ ಫ್ಯಾಂಟಸಿಗಳಲ್ಲಿ ಜನರು ಮುಳುಗುತ್ತಾರೆ ಎಂದು ಕೇಳಿಕೊಳ್ಳಬೇಕಿದೆ. ಇಂತಹ ಅನೇಕ ಊಹೆಗಳ ಸಾಧ್ಯತೆಗಳಿರುವ ಸರಣಿಗಳನ್ನು ದೂರದರ್ಶನದ ಚಾನೆಲ್‌ಗಳಲ್ಲಿ ವಿಜ್ಞಾನದ ಹೆಸರಿನಲ್ಲಿ ಅನೇಕ ವರ್ಷಗಳಿಂದ ತಯಾರಿಸಲಾಗುತ್ತಿದೆ. ಇಲ್ಲಿ ಮೂಡಿಬರುವ ಅಂತೆಕಂತೆಗಳ ಕಲ್ಪನೆಯನ್ನು (ಫ್ಯಾಂಟಸಿಯನ್ನು) ಜನರು ಸಾರ್ವಜನಿಕ ಕ್ಷೇತ್ರದಲ್ಲೂ ಕಾಣುವಂತೆ ಪ್ರೇರೇಪಿಸಿದೆಯೇ? ಸುಮ್ಮನೆ ಇವರ ಕುರಿತು ಮಾತನಾಡುವುದು ಬೇಡ. ಇವರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಅರಿಯುವ ಕಾರ್ಯ ಆಗಬೇಕಿದೆ. ಇಂತಹ ಸರಕಾರಗಳು ಅದರ ಬೆಂಬಲಿಗರ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಜಗತ್ತಿನ ಧ್ಯೋತಕಗಳಾಗಿರುತ್ತವೆ. ಈ ಕಾರಣದಿಂದಲೇ ಈ ವಿಚಾರ ಕುರಿತು ಭವಿಷ್ಯದಲ್ಲಿ ಯಾವುದೇ ಚರ್ಚೆ ನಡೆದರೂ ಅದಕ್ಕೆ ನಾವು ನೀಡಬೇಕಾದ ಶೀರ್ಷಿಕೆ ಸಾರ್ವಜನಿಕ ಹುಚ್ಚು ಕುರಿತಾದ ಸಂವಾದ ಎನ್ನುವುದು ನನ್ನ ವಿಚಾರವಾಗಿದೆ.

ಸಿದ್ಧಾರ್ಥ ಭಾಟಿಯ: ಹೌದು. ಇದು ಕೇವಲ ಫ್ಯಾಂಟಸಿ ಅಷ್ಟೇ ಅಲ್ಲ, ಇದೊಂದು ಐತಿಹಾಸಿಕ ನೆನಪುಗಳನ್ನು ಆಧರಿಸಿದ ರಾಜಕೀಯ ಫ್ಯಾಂಟಸಿಯೂ ಆಗಿ ರೂಪುಗೊಂಡಿದೆ. ಮೊಘಲ್ ಪೂರ್ವ ಭಾರತ ವೈಭವದಿಂದ ಕೂಡಿತ್ತು, ಒಬಾಮ ಪೂರ್ವ ಅಮೆರಿಕ ಶ್ರೇಷ್ಠವಾಗಿತ್ತು, ಒಟ್ಟೋಮನ್ ಕಾಲದ ಟರ್ಕಿ ಪ್ರಬಲ ಸಾಮ್ರಾಜ್ಯವಾಗಿತ್ತು ಮುಂತಾದ ವಿಚಾರಗಳಿವೆ. ಟರ್ಕಿಯಲ್ಲಿ ಒಟ್ಟೋಮನ್ ಕಾಲದ ಕಥೆಯಿರುವ ದೂರದರ್ಶನ ಸರಣಿಗಳು ಬಿತ್ತರಗೊಂಡರೆ, ಭಾರತದಲ್ಲಿ ರಾಮಾಯಣ ಮರುಪ್ರಸಾರಗೊಳ್ಳುತ್ತಿದೆ. ಕೋವಿಡ್ ಇಂತಹ ಫ್ಯಾಂಟಸಿಗಳ ಪ್ರಭಾವವನ್ನು ಮತ್ತೆ ಮರುಸ್ಥಾಪಿಸುತ್ತಿದೆ ಎನಿಸುತ್ತಿದೆ. ಅಮೆರಿಕವನ್ನು ಮತ್ತೆ ಪ್ರಬಲಗೊಳಿಸುವುದು ಎಂದರೆ ಬಿಳಿಯರ ಸ್ಥಾನವನ್ನು ಬಲಪಡಿಸುವುದು ಎಂದರ್ಥ. ಐತಿಹಾಸಿಕವಾಗಿ ಯಾರ್ಯಾರು ಯಾವ್ಯಾವ ಜಾಗದಲ್ಲಿದ್ದರೋ ಅಲ್ಲಿಯೇ ಇರುವುದು ಸರಿ ಎನ್ನುವ ಚಿಂತನೆಯನ್ನು ಬಲಗೊಳಿಸುವ ಹಂಚಿಕೆಯಾಗಿ ಇದು ಕಾಣುತ್ತಿದೆ. ಎಲ್ಲರೂ ಇದನ್ನೇ ಭಿನ್ನಭಿನ್ನವಾಗಿ ಹೇಳುತ್ತಿರುವಂತೆ ಗೋಚರಿಸುತ್ತದೆ.

ಹೋಮಿ ಬಾಬಾ: ಖಂಡಿತ. ಇದರ ಕುರಿತು ಸ್ವಲ್ಪ ಆಲೋಚಿಸೋಣ. ನಾನು ಯಾವುದೇ ಸಂಯಮವಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ ್ಟ ಗಳನ್ನು ಹಾಕುವ ಕುರಿತು ಹೇಳುತ್ತಿದ್ದೆ. ಇಂತಹ ಫ್ಯಾಂಟಸಿಗಳಲ್ಲಿ ನಂಬಿಕೆಯಿರುವ ಗುಂಪುಗಳು ತಮ್ಮ ಪರವಾಗಿರುವ ಅನೇಕ ಗುಂಪುಗಳನ್ನು ಜಾಲತಾಣಗಳಲ್ಲಿ ರಚಿಸಿಕೊಳ್ಳುತ್ತವೆ. ಇವರು ಬೀದಿಗೆ ಬಂದು ನಿಲ್ಲುವ ಅನಿರ್ವಾಯತೆಯನ್ನು ಹೊಂದಿರುವುದಿಲ್ಲ. ದೂರದರ್ಶನದ ಸರಣಿಗಳು ಸೃಜಿಸುವ ಫ್ಯಾಂಟಸಿಗಳ ಶಕ್ತಿಯೊಂದಿಗೆ ಇಂತಹ ಜಾಲತಾಣಗಳಲ್ಲಿ ಸೃಷ್ಟಿಯಾಗುವ ಫ್ಯಾಂಟಸಿಗಳ ಕುರಿತು ನಾವು ಆಲೋಚಿಸಬೇಕಿದೆ. ಇಂದಿನ ಸಾಂಸ್ಕೃತಿಕ ನೆನಪುಗಳ ಕುರಿತು ನಾವು ಯೋಚಿಸಬೇಕಿದೆ. ಹಿಂದೆ ಸಂಭವಿಸದೇ ಇದ್ದಂತಹ ಘಟನೆಗಳನ್ನು ಐತಿಹಾಸಿಕ ಘಟನೆಗಳ ಹೆಸರಿನಲ್ಲಿ ಪ್ರಚುರಪಡಿಸುವ ಮತ್ತು ಅದರ ಆಧಾರದ ಮೇಲೆ ವರ್ತಮಾನಕ್ಕೆ ಅವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಕಲ್ಮಶವಿಲ್ಲದ ಗತವನ್ನು ಸೃಜಿಸಿಕೊಳ್ಳುವ ತೀವ್ರ ತುಡಿತ ಇಲ್ಲಿ ಕಾಣುತ್ತದೆ. ಇಂತಹ ಕಲ್ಮಶ ರಹಿತಗತದಲ್ಲಿ ಎಲ್ಲರಿಗೂ ಅವರದ್ದೇ ಆದ ನಿಗದಿತ ಸ್ಥಾನಮಾನಗಳು ಮೀಸಲಿರುತ್ತವೆ. ಯಾವುದೇ ದಲಿತ ಯಾವುದೇ ಸಾಧನೆಯ ಕನಸನ್ನು ಕಾಣಬಾರದು. ಅಮೆರಿಕದ ಕಪ್ಪು ಜನರು ಗುಲಾಮ ಸ್ಥಿತಿಯಾಚೆಗೆ ಯಾವುದೇ ಗುರಿಯನ್ನು ಹೊಂದಬಾರದು. ತನ್ನ ಜನಾಂಗದ ಸೀಮಿತ ಮಿತಿಯೊಳಗೆ ಜೀವಿಸುವ ಉದ್ದೇಶವನ್ನು ಹೊಂದಬೇಕು ಇತ್ಯಾದಿ ಅಂಶಗಳು ಇಂದಿನ ರಾಜಕೀಯ ಪರಿಸರದಲ್ಲಿ ಮೂಡುತ್ತಿರುವುದು ಇಂದಿನ ನಾಯಕರ ಪ್ರಜಾಪ್ರಭುತ್ವ ವಿರೋಧಿ ವರ್ತನೆಯಿಂದ. ಇಲ್ಲಿ ಅನೇಕ ಅಂಶಗಳನ್ನು ನಾವು ಗುರುತಿಸಬೇಕಿರುತ್ತದೆ. ಗತದ ನೆನಪಿನ ಮರುಸ್ಥಾಪನೆಯ ಮೂಲಕ ಹಿಂದುತ್ವದಂತಹ ಸೀಮಿತ ಜನಾಂಗೀಯ ಚೌಕಟ್ಟಿನೊಳಗೆ ಜನರನ್ನು ಇರಿಸುವ ತಾತ್ವಿಕತೆ ಒಂದೆಡೆಯಾದರೆ, ಇಂತಹ ನೋವಿನ ರಾಜಕೀಯ ನಡೆಯನ್ನು ಜಾರಿಗೆ ತರುವ ವಿಧಾನದ ಕುರಿತು ನಾವು ಆಲೋಚಿಸಬೇಕಾದ ಅಗತ್ಯತೆ ಇರುತ್ತದೆ. ಇದನ್ನು ಅರಿಯಲು ನಮ್ಮ ರಾಜಕೀಯ ಭಾಗವಹಿಸುವಿಕೆಯ ಗ್ರಹಿಕೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ‘ಕ್ಯೂಅನಾನ್’ನಂತಹ ಗುಂಪುಗಳು ಪ್ರತಿಪಾದಿಸುವ ಯಾವುದೇ ಫ್ಯಾಂಟಸಿಯನ್ನು ಬೆಂಬಲಿಸುವುದರಿಂದ ನನ್ನ ದಿನ ನಿತ್ಯದ ಇರುವಿಕೆಯ ಮೇಲೆ ಯಾವುದೇ ಪ್ರಭಾವ ಉಂಟಾಗುವುದಿಲ್ಲ. ನನ್ನ ಆಹಾರ, ನೀರು, ಗಾಳಿ ಮುಂತಾದವುಗಳ ಲಭ್ಯತೆಯ ಮೇಲೆ ಇಂತಹ ಫ್ಯಾಂಟಸಿಯ ಪರಿಣಾಮ ಆಗುವುದೇ ಇಲ್ಲ. ಇವು ನನ್ನ ಮುಕ್ತಿಯ ಹಾದಿಯಲ್ಲಿ ಸಾಗಿಸುವ ಫ್ಯಾಂಟಸಿಗಳಾಗಿರುತ್ತವೆ. ಇವು ನನ್ನ ಸದ್ಯದ ಆತಂಕದಿಂದ ಸೃಷ್ಟಿಯಾದ ಫ್ಯಾಂಟಿಸಿಗಳಾಗಿರುತ್ತವೆ. ನಾನೀಗ ಇರುವ ವಾಸ್ತವದ ಪರಿಸ್ಥಿತಿಯಿಂದ ಬಿಡುಗಡೆಗೊಳಿಸುವ ಮಾರ್ಗ ಈ ಫ್ಯಾಂಟಸಿಯಾಗಿರುತ್ತದೆ. ಮುಂದಿನ ದಿನಗಳಲ್ಲಿ ಇವುಗಳ ಕುರಿತು ಸ್ಪಷ್ಟತೆಯನ್ನು ಜನರು ಪಡೆಯುತ್ತಾರೆನ್ನುವ ಆಶಾವಾದ ನನ್ನದಾಗಿರುತ್ತದೆ. ಅಮೆರಿಕದ ಜನರು ಸ್ವಲ್ಪಮಟ್ಟಿಗೆ ಇದನ್ನು ಅರಿತಂತೆ ಕಾಣುತ್ತದೆ. ಮಹಾಸಾಂಕ್ರಾಮಿಕದಂತಹ ತೀವ್ರವಾದ ಆರ್ಥಿಕ ಸಮಸ್ಯೆಯ ಸಂದರ್ಭದಲ್ಲಿ ಇಂತಹ ಫ್ಯಾಂಟಸಿಗಳು ಯಾವುದೇ ಕೆಲಸಕ್ಕೆ ಬರುವುದಿಲ್ಲ. ಅಸ್ಥಿರತೆಯನ್ನು ಅನುಭವಿಸುತ್ತಿರುವ, ತೀವ್ರವಾದ ಆತಂಕಕ್ಕೆ ಈಡಾಗಿರುವ ಮತ್ತು ಯಾವುದೇ ನಾಗರಿಕ ಪೋಷಣೆಯನ್ನು ಪಡೆಯದೇ ಇರುವ ಪ್ರಜೆಯಲ್ಲಿ ಮಾತ್ರ ಬಿಡುಗಡೆಯ ಆಶಾವಾದವನ್ನು ಇಂತಹ ಫ್ಯಾಂಟಸಿಗಳು ಮೂಡಿಸುವ ಅವಕಾಶವನ್ನು ಹೊಂದಿರುತ್ತವೆ. ಸಿದ್ಧಾರ್ಥ ಭಾಟಿಯ: ಭವಿಷ್ಯದಲ್ಲಿ ಹೀಗೆ ನಡೆಯುತ್ತದೆಂದು ಹೇಳುವುದು ಅಪಾಯಕಾರಿಯಾದ ಕಾರ್ಯವೇ. ಈ ಕಾರಣದಿಂದಲೇ ವಿದ್ವಾಂಸರು ಮತ್ತು ತತ್ವಜ್ಞಾನಿಗಳು ಏನನ್ನೂ ಹೇಳಲು ಮುಂದಾಗುವುದಿಲ್ಲ. ಆದರೆ ಪತ್ರಕರ್ತರಿಗೆ ಅಂತಹ ಯಾವುದೇ ಮಿತಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಕೇಳುತ್ತೇನೆ: ಮುಂದಿನ ದಿನಗಳು ಹೇಗಿರುತ್ತವೆ? ಹೋಮಿ ಬಾಬಾ: ಇದಕ್ಕೆ ಉತ್ತರವಾಗಿ ನಾನು ಈಗ ಬರೆಯುತ್ತಿರುವ ಪುಸ್ತಕದ ಸಾಲೊಂದನ್ನು ತೆಗೆದುಕೊಳ್ಳುತ್ತೇನೆ. ನಿಮ್ಮ ಪ್ರಶ್ನೆ ಬಹಳ ಮುಖ್ಯವಾದ ಪ್ರಶ್ನೆಯಾಗಿದೆ. ಇದು ಆಡಳಿತದ ಸಮಯವನ್ನು ಪ್ರತಿಧ್ವನಿಸುತ್ತದೆ. ನಾವಿಂದು ಬದುಕುತ್ತಿರುವ ರಾಜಕೀಯದ ಸಮಯವನ್ನು, ನಾವಿರುವ ಸಮಯದ ಸಮಯವನ್ನು ಇದು ಪ್ರತಿನಿಧಿಸುತ್ತದೆ: ‘‘ಗತ ಇಲ್ಲವಾಗಲೂ ನಿರಾಕರಿಸುತ್ತಿದೆ. ಅದೇ ಸಮಯದಲ್ಲಿ ಭವಿಷ್ಯವೂ ವ್ಯವಸ್ಥಿತವಾಗಿ ಜನಿಸಲು ನಿರಾಕರಿಸುತ್ತಿದೆ. ನಾವು ಈ ಎರಡೂ ಶಕ್ತಿಗಳ ನಡುವೆ ಸಿಲುಕಿದ್ದೇವೆ?. ತನ್ನದೇ ಇತಿಹಾಸವನ್ನು ಹೊಂದಿರುವ ಗತ ಕಾಲ ಇಲ್ಲವಾಗಲು ಸಿದ್ಧವಿಲ್ಲದ ಸ್ಥಿತಿ ಒಂದೆಡೆಯಾದರೆ, ಇಂದು ನೀನು ಏನನ್ನು ನಿರ್ಧರಿಸುವೆ ಎನ್ನುವುದನ್ನು ಆಧರಿಸಿ ನಾನು ರೂಪಗೊಳ್ಳುವೆ ಎನ್ನುವ ಭವಿಷ್ಯ ಇನ್ನೊಂದೆಡೆ. ನೀನು ಇಂದು ಎಷ್ಟು ಪ್ರಗತಿಪರ ಮತ್ತು ಜೀವಪರ ನಿಲುವುಗಳನ್ನು ತೆಗೆದುಕೊಳ್ಳುವೆಯೋ ಅಷ್ಟೇ ಪ್ರಮಾಣದ ಒಳಿತನ್ನು ತಾನು ಹೊಂದಿರುವೆ ಎನ್ನುವ ಭವಿಷ್ಯ ನಮ್ಮ ಮುಂದಿದೆ. ಇಂತಹ ತೀವ್ರವಾದ ಸಮಸ್ಯೆಗಳನ್ನು ಎದುರಿಸುವಾಗ ನಾವು ಅತ್ಯಂತ ವ್ಯಗ್ರ ಸ್ಥಿತಿಯಲ್ಲೇ ಉತ್ತರಕ್ಕಾಗಿ ಪರಿಹಾರಕ್ಕಾಗಿ ತಡಕಾಡುತ್ತಿರುತ್ತೇವೆ. ಒಂದು ಅಂತ್ಯವಿಲ್ಲದ ದುಃಖ ಮಡುವಿನಲ್ಲಿ ಇದ್ದುಕೊಂಡೇ ಏನಾದರೂ ಸಾಧನೆಯನ್ನು ಮಾಡುವ ಗುರಿಯನ್ನು ಹೊಂದಿರುತ್ತೇವೆ. ಅಲ್ಲಲ್ಲಿ ಕೆಲವು ತೋರಿಕೆಯ ಗೆಲುವುಗಳಿಗಾಗಿ ಹುಡುಕುತ್ತೇವೆ. ನಾವೀಗ ಮಾಡುತ್ತಿರುವ ಯುದ್ಧಗಳ ಕುರಿತು ನಮಗೆ ಯಾವುದೇ ದೂರುಗಳಿರುವುದಿಲ್ಲ. ಬಹಳ ವಿಷಾದದಿಂದಲೇ ಕೆಲವು ಗೆಲುವಿನ ಸೂಚನೆಗಳಿಗಾಗಿ ಎದುರು ನೋಡುತ್ತಿರುತ್ತೇವೆ. ಈ ದಾರಿಯಲ್ಲೇ ನಾವು ಭವಿಷ್ಯ ಚರ್ಚೆಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಆದರೆ ಇಂತಹ ನಿರಾಶಾವಾದ ಸನ್ನಿವೇಶದಲ್ಲಿಯೇ ಮಹಾಸಾಂಕ್ರಾಮಿಕದಂತಹ ಆಕಸ್ಮಿಕ ಸೃಷ್ಟಿಯಾಗಿದ್ದು ಬಹಳ ಸಮಾಧಾನದ ವಿಚಾರವಾಗಿದೆ. ನಾವು ಇದುವರೆಗೂ ಯಾವುದನ್ನು ಗೆಲುವು ಎಂದು ಭಾವಿಸಿದ್ದೆವೋ, ಯಾವುದು ಕಾರ್ಯಸಾಧುವಾದ ಬದುಕು ಎಂದು ಭಾವಿಸಿಕೊಂಡಿದ್ದೆವೋ ಅದೆಲ್ಲವೂ ಈಗ ಬಹುದೊಡ್ಡ ಪ್ರಶ್ನೆಗಳಾಗಿ ನಮ್ಮ ಮುಂದೆ ನಿಂತಿವೆ. ಶ್ರೀಮಂತ ದೇಶಗಳಲ್ಲಿ ಇಂತಹ ಸನ್ನಿವೇಶಗಳು ಸ್ವಲ್ಪ ಸರಳವಾಗಿ ಪರಿಹಾರವನ್ನು ಕಾಣುವುದು ಸಾಧ್ಯವಾದರೆ, ಬಡ ರಾಷ್ಟ್ರಗಳಲ್ಲಿ ಇವು ಬಹಳ ಕಠಿಣವಾದ ಸಂದರ್ಭಗಳನ್ನು ಸೃಷ್ಟಿಸಲಿವೆ. ಸೂಕ್ತ ರೀತಿಯ ಆರ್ಥಿಕ ನೀತಿಯ ಮೂಲಕ, ಬಡ ದೇಶಗಳಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ವಿನಿಯೋಗ ಮಾಡದಿದ್ದರೆ, ಅವೆಲ್ಲಾ ಸೋತ ದೇಶಗಳಾಗಿಬಿಡುತ್ತವೆ(ಫೈಲ್ಡ್ ನೇಷನ್ಸ್). ಅಮೆರಿಕ ಮತ್ತು ಬ್ರಿಟನ್ ದೇಶಗಳಲ್ಲಿ ಈ ಕುರಿತು ಚರ್ಚೆಗಳು ಈಗಾಗಲೇ ಆರಂಭಗೊಂಡಿವೆ. ಈ ದೇಶಗಳಲ್ಲಿ ಈಗಾಗಲೇ ಇರುವ ಕಲ್ಯಾಣ ಯೋಜನೆಗಳ ಮೂಲಭೂತ ರಚನೆಗಳನ್ನು ಹೇಗೆ ಬಲವರ್ಧಿಸುವುದು ಎನ್ನುವ ಚಿಂತನೆ ಆರಂಭವಾಗಿದೆ. ಭಾರತದಲ್ಲಿ ವಿಶಿಷ್ಟವಾದ ಸ್ಥಿತಿ ಇದೆ ಬಿಡಿ. ಅನುದಿನವೂ ಬದುಕಿಗಾಗಿ ಹೋರಾಡಬೇಕಾದ ಜನರು ಬಹುಸಂಖ್ಯೆಯಲ್ಲಿರುವ ಈ ದೇಶದಲ್ಲಿ, ತಮ್ಮ ಹಕ್ಕಿಗಾಗಿ ಒತ್ತಾಯಿಸಿ ಸಂಘಟಿತ ಪ್ರಯತ್ನ ಮಾಡುವ ಅವಕಾಶ ಮತ್ತು ಸಾಮರ್ಥ್ಯ ಅವರಿಗೆ ಇರುವುದಿಲ್ಲ. ಭಾರತದ ಕುರಿತು ನನಗೆ ಯಾವಾಗಲೂ ನಿರಾಶೆ ಮೂಡುತ್ತದೆ. ಏಕೆಂದರೆ ಇಲ್ಲಿಯ ಜನರು ತಮಗಾಗಿ ಮತ್ತು ತಮ್ಮ ಅನುಕೂಲಕ್ಕಾಗಿ ಖಚಿತವಾಗಿ ಹೋರಾಡಿದ್ದೇ ಇಲ್ಲ. ಪ್ರತಿಕೂಲ ಸನ್ನಿವೇಶಗಳು ಇದ್ದಾಗಲೂ ತಮ್ಮ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಪೂರ್ಣವಾಗಿ ಪ್ರಯತ್ನಿಸದೇ ಇರುವ ದೇಶಗಳು ವಿರಳ ಎನ್ನುವುದಂತು ಸತ್ಯವಾಗಿದೆ. ಇದರ ನಡುವೆ ಹೊಸದೊಂದು ಸಾಧ್ಯತೆಯೂ ನನಗೆ ಕಾಣುತ್ತದೆ. ಜಗತ್ತಿನಲ್ಲಿ ಮರುಹೊಂದಾಣಿಕೆಗಳು ತೀವ್ರ ರೀತಿಯಲ್ಲಿ ಸಂಭವಿಸುತ್ತವೆ. ಮಹಾಸಾಂಕ್ರಾಮಿಕ ನಮಗೆ ಎಲ್ಲದರ ಕುರಿತು ಮರುಚಿಂತಿಸುವಂತೆ ಮಾಡಿದೆ. ಆರೋಗ್ಯ ಸೇವೆಯ ಕುರಿತು, ಮಾನಸಿಕ ಆರೋಗ್ಯದ ಕುರಿತು, ಸಾಮಾಜಿಕ ನ್ಯಾಯದ ಕುರಿತು. ಸಾವು-ಬದುಕಿನ ಪ್ರಶ್ನೆ ತೀವ್ರವಾಗಿ ನಮ್ಮ ಮುಂದೆ ನಿಂತಾಗಲೇ, ನಮ್ಮ ಸಾಮಾನ್ಯ ಗುರಿಗಳ ಕುರಿತು ಚಿಂತಿಸುವಂತಾಗಿರುವುದನ್ನು ಬಿಬ್ಲಿಕಲ್ ಸನ್ನಿವೇಶ ಎನ್ನೋಣವೇ? ವೈದ್ಯಕೀಯ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಏನೆಲ್ಲಾ ಸಾಧನೆಗಳು ಸಾಧ್ಯವಾದ ಮೇಲೂ ಮಧ್ಯಕಾಲದ ಪ್ಲೇಗ್ ರೋಗವನ್ನು ನೆನಪಿಸುವ ರೀತಿಯಲ್ಲಿ ಸಾವುಗಳು ಉಂಟಾಗುತ್ತಿರುವುದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಬಹುಶಃ ಒಂದು ಡಿವೈನ್-ಸೆಕ್ಯೂಲರ್(ದೈವಿಕ-ಜಾತ್ಯತೀತ) ಶಕ್ತಿಯೊಂದು ನಮಗೆ ಎದುರಾಗಿ ನಿಂತಿದೆ-ಎಲ್ಲರನ್ನು ಜಗ್ಗಿಸಿ ಕೇಳುತ್ತಿದೆ- ನಿಮ್ಮ ನೈತಿಕತೆಯನ್ನು, ನಿಮ್ಮ ಸಾರ್ವಜನಿಕ ಮತ್ತು ಖಾಸಗಿ ಬದುಕಿನ ಗುರಿಗಳ ಕುರಿತು ಪ್ರಶ್ನಿಸಿಕೊಳ್ಳಿರಿ- ಎಂದು ನನಗೆ ಅನ್ನಿಸುತ್ತಿದೆ.

Writer - ಅನುವಾದ: ಸದಾನಂದ ಆರ್.

contributor

Editor - ಅನುವಾದ: ಸದಾನಂದ ಆರ್.

contributor

Similar News