×
Ad

ರಾಜಕಾರಣಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣ ಹಿಂಪಡೆದ ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್ ತಡೆ

Update: 2020-12-21 15:43 IST

ಬೆಂಗಳೂರು, ಡಿ.21: ರಾಜ್ಯ ಸಚಿವ ಸಂಪುಟದ ನಿರ್ಣಯ ಆಧರಿಸಿ ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಟ್ಟು ರಾಜ್ಯ ಬಿಜೆಪಿ ಸರಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆ ನೀಡಿದೆ. 

ಶಾಸಕರು, ಸಂಸದರು, ಮಂತ್ರಿಗಳೂ ಸೇರಿದಂತೆ 62 ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ರಾಜ್ಯ ಸರಕಾರ ಹಿಂತೆಗೆದುಕೊಂಡಿರುವ ಕ್ರಮ ಪ್ರಶ್ನಿಸಿ ವಕೀಲೆ ಸುಧಾ ಕಾಟ್ವಾ ಹಾಗೂ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ.  

ರಾಜ್ಯ ಸರಕಾರದ ಪರ ವಾದಿಸಿದ ವಕೀಲರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಾಜ್ಯ ಸರಕಾರ ಈವರೆಗೂ ಅರ್ಜಿದಾರರ ಆರೋಪಗಳಿಗೆ ಉತ್ತರಿಸಿಲ್ಲ. ಆಕ್ಷೇಪಣೆಯನ್ನೂ ಸಲ್ಲಿಸಿಲ್ಲ. ಹೀಗಾಗಿ ನ್ಯಾಯಾಲಯದ ಮುಂದಿನ ಆದೇಶದವರೆಗೆ ರಾಜ್ಯ ಸರಕಾರ 2020ರ ಆ.31ರಂದು ಹೊರಡಿಸಿರುವ ಆದೇಶಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಜರುಗಿಸಬಾರದು ಎಂದು ಆದೇಶಿಸಿತು.

ಅಲ್ಲದೇ, ರಾಜ್ಯ ಸರಕಾರ ಅರ್ಜಿಗೆ ಆಕ್ಷೇಪಣೆಗಳನ್ನು ಹಾಗೂ ಅರ್ಜಿದಾರರ ಆರೋಪಗಳಿಗೆ ಸ್ಪಷ್ಟನೆಯನ್ನು ಜ.22ರೊಳಗೆ ಸಲ್ಲಿಸಬೇಕು. ಇದಕ್ಕೆ ಮತ್ತಷ್ಟು ಕಾಲಾವಕಾಶ ನೀಡುವುದಿಲ್ಲ ಎಂದು ಗಡುವು ವಿಧಿಸಿ ವಿಚಾರಣೆಯನ್ನು ಜ.29ಕ್ಕೆ ಮುಂದೂಡಿತು.

ಏನಿದು ಪ್ರಕರಣ: ಗೃಹ ಮಂತ್ರಿ ನೇತೃತ್ವದ ಉಪ ಸಮಿತಿ ಶಿಫಾರಸಿನ ಮೇರೆಗೆ ಶಾಸಕರು, ಸಂಸದರ ವಿರುದ್ಧದ 62 ಪ್ರಕರಣಗಳನ್ನು ರಾಜ್ಯ ಸಚಿವ ಸಂಪುಟ 2020ರ ಆ.31ರಂದು ಹಿಂಪಡೆದುಕೊಂಡು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇದನ್ನು ಆಕ್ಷೇಪಿಸಿರುವ ಅರ್ಜಿದಾರರು ಸಿಆರ್‍ಪಿಸಿ ಸೆಕ್ಷನ್ 321ರ ಮೇರೆಗೆ ಸರಕಾರ ಕೆಲ ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆದಿದೆ. ಇದು ನಿಯಮಬಾಹಿರ ಎಂದು ಆರೋಪಿಸಿದ್ದಾರೆ.

ಡಿ.1ರಂದು ಅರ್ಜಿ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ, ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಅಭಿಯೋಜನೆ ಇಲಾಖೆ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತ್ತು.

ಹಾಗೆಯೇ, ರಾಜಕೀಯ ನಾಯಕರ ವಿರುದ್ಧದ ಪ್ರಕರಣಗಳನ್ನು ಕೈಬಿಡಲು ಪ್ರಾಸಿಕ್ಯೂಷನ್ ಯಾವ ಆಧಾರದಲ್ಲಿ ಶಿಫಾರಸು ಮಾಡಿದೆ ಎಂಬುದರ ವರದಿ ತರಿಸಿಕೊಂಡು ನ್ಯಾಯಾಲಯಕ್ಕೆ ಸಲ್ಲಿಸುವಂತೆಯೂ ಸೂಚಿಸಿತ್ತು. ಆದರೆ, ಸರಕಾರ ಈವರೆಗೆ ಆಕ್ಷೇಪಣೆ ಸಲ್ಲಿಸಿಲ್ಲ. 

ಸರಕಾರಿ ಇಲಾಖೆಗಳಿಂದ ವಿರೋಧ
ಕ್ರಿಮಿನಲ್ ಪ್ರಕರಣಗಳನ್ನು ರಾಜ್ಯ ಬಿಜೆಪಿ ಸರಕಾರ ಹಿಂಪಡೆಯುತ್ತಿದ್ದಂತೆಯೇ ಡಿಜಿ, ಐಜಿಪಿ ಕಚೇರಿ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ, ಕಾನೂನು ಇಲಾಖೆಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದವು.    

'ಕಾರು ನುಗ್ಗಿಸಿದ್ದ ಪ್ರತಾಪ್ ಸಿಂಹ'
ಹುಣಸೂರು ಪಟ್ಟಣದಲ್ಲಿ 2017ರಂದು ಹನುಮ ಜಯಂತಿ ಪ್ರಯುಕ್ತ 114 ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಮೈಸೂರು ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಗಿತ್ತು. ಈ ವೇಳೆ ಪ್ರತಾಪ್ ಸಿಂಹ ಬ್ಯಾರಿಕೇಡ್ ಮೇಲೆ ಕಾರನ್ನು ವೇಗವಾಗಿ ನುಗ್ಗಿಸಿದ ಆರೋಪಕ್ಕೊಳಗಾಗಿದ್ದರು. ಹೀಗಾಗಿ, ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನೂ ರಾಜ್ಯ ಬಿಜೆಪಿ ಸರಕಾರ ಕೈಬಿಟ್ಟಿತ್ತು. 

'ರೇಣುಕಾಚಾರ್ಯ ಬೆಂಬಲಿಗರಿಂದ ಚೂರಿ ಇರಿತ' 
ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಯ ಗಳಿಸಿದ್ದಕ್ಕಾಗಿ ಬಿಜೆಪಿ ಬೆಂಬಲಿಗರು ಹೊನ್ನಾಳಿ ಪಟ್ಟಣದಲ್ಲಿ ಜೈಕಾರ ಹಾಕುತ್ತಾ ಗುಂಪು ಕಟ್ಟಿಕೊಂಡಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಜತೆ ಜಗಳವಾಗಿತ್ತು. ಆಗ ರೇಣುಕಾಚಾರ್ಯ ಬೆಂಬಲಿಗರು, ಅಲ್ಲಿ ಜಗಳವಾಡಿ ಇಬ್ಬರಿಗೆ ಚಾಕು ಇರಿದಿರುವ ಆರೋಪವಿದೆ. ಈ ಪ್ರಕರಣಗಳೂ ಸೇರಿ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ನಿರ್ಧರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News