×
Ad

ಡಿಸೆಂಬರ್ ಅಂತ್ಯದ ತನಕ ಭಾರತಕ್ಕೆ ಬ್ರಿಟನ್ ವಿಮಾನಗಳ ಆಗಮನಕ್ಕೆ ತಾತ್ಕಾಲಿಕ ತಡೆ

Update: 2020-12-21 17:05 IST

ಹೊಸದಿಲ್ಲಿ, ಡಿ.21: ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೊರೋನ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬ್ರಿಟನ್‌ಗೆ ತೆರಳುವ ಮತ್ತು ಅಲ್ಲಿಂದ ಆಗಮಿಸುವ ಎಲ್ಲಾ ವಿಮಾನಗಳ ಸಂಚಾರವನ್ನು ಡಿಸೆಂಬರ್ 22ರಿಂದ ಡಿ. 31ರವರೆಗೆ ರದ್ದುಗೊಳಿಸುವಂತೆ ಕೇಂದ್ರ ಸರಕಾರ ಆದೇಶಿಸಿದೆ.

ಬ್ರಿಟನ್‌ನಿಂದ ಡಿಸೆಂಬರ್ 22ರ ವೇಳೆಗೆ ಭಾರತಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕರೂ ಕಡ್ಡಾಯವಾಗಿ ಸಂಬಂಧಪಟ್ಟ ವಿಮಾನನಿಲ್ದಾಣಗಳಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಬೇಕು. ಪಾಸಿಟಿವ್ ವರದಿ ಬಂದವರನ್ನು ರಾಜ್ಯ ಸರಕಾರ/ಕೇಂದ್ರಾಡಳಿತ ಪ್ರದೇಶ ಸ್ಥಾಪಿಸಿರುವ ಸಾಂಸ್ಥಿಕ ಕ್ವಾರಂಟೈನ್‌ಗೆ ಕಳುಹಿಸಲಾಗುವುದು. ನೆಗೆಟಿವ್ ವರದಿ ಬಂದವರು ಮನೆಯಲ್ಲೇ 7 ದಿನ ಪ್ರತ್ಯೇಕವಾಗಿ ವಾಸಿಸಬೇಕು ಮತ್ತು ಇವರ ಆರೋಗ್ಯ ಪರಿಸ್ಥಿತಿಯನ್ನು ನಿರಂತರ ಗಮನಿಸುತ್ತಿರಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ಸೂಚಿಸಿದೆ.

ಬ್ರಿಟನ್‌ನಲ್ಲಿ ಕಾಣಿಸಿಕೊಂಡ ಹೊಸ ವೈರಸ್‌ನ ಬಗ್ಗೆ ಚರ್ಚಿಸಲು ಆರೋಗ್ಯಸೇವೆಗಳ ಪ್ರಧಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಂಟಿ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಡಿ.22ರಿಂದ 10 ದಿನ ಬ್ರಿಟನ್‌ಗೆ ತೆರಳುವ ಮತ್ತು ಅಲ್ಲಿಂದ ಆಗಮಿಸುವ ವಿಮಾನ ಸಂಚಾರ ರದ್ದಾಗಲಿದೆ . ಡಿಸೆಂಬರ್ ಬಳಿಕ ಪರಿಸ್ಥಿತಿಯನ್ನು ಗಮನಿಸಿ ನಿರ್ಧಾರವನ್ನು ಮರುಪರಿಶೀಲಿಸಲಾಗುವುದು ಎಂದು ನಾಗರಿಕ ವಿಮಾನಯಾನ ಇಲಾಖೆಯ ಅಧಿಕಾರಿ ಹೇಳಿದ್ದಾರೆ.

ಬ್ರಿಟನ್‌ನಿಂದ ಬರುವ ಮತ್ತು ಆ ದೇಶಕ್ಕೆ ತೆರಳುವ ವಿಮಾನಗಳ ಸಂಚಾರವನ್ನು ಡಿ.21ರ ರಾತ್ರಿಯಿಂದ ರದ್ದುಗೊಳಿಸಲಾಗಿದೆ ಎಂದು ಹಾಂಕಾಂಗ್ ಹೇಳಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಅನಿವಾರ್ಯವಾದರೆ ಬ್ರಿಟನ್‌ಗೆ ವಿಮಾನ ಸಂಚಾರ ರದ್ದುಗೊಳಿಸಲಾಗುತ್ತದೆ ಎಂದು ಜಪಾನ್, ಕೊರಿಯಾ ಸಹಿತ ಏಶ್ಯಾದ ಹಲವು ದೇಶಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News