ಹಸಿವಿನಲ್ಲಿ ಸುಡಾನ್- ಭಾರತವನ್ನು ಒಂದಾಗಿಸಿದ ಮೋದಿ-ಶಾ ಜೋಡಿ: ದೇವನೂರ ಮಹಾದೇವ

Update: 2020-12-21 16:17 GMT

ಬೆಂಗಳೂರು, ಡಿ.21: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಜೋಡಿಯು, ಭಾರತ ಮತ್ತು ಸುಡಾನ್ ಅನ್ನು ಹಸಿವಿನಲ್ಲಿ ಒಂದಾಗಿಸಿದ್ದಾರೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಹೇಳಿದರು.

ಸೋಮವಾರ ನಗರದ ಮೌರ್ಯ ವೃತ್ತದ ಬಳಿ ಐಕ್ಯ ಹೋರಾಟ, ಎಐಕೆಎಸ್‍ಸಿಸಿ ಮತ್ತು ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸತತ ಏಳು ದಿನಗಳಿಂದ ನಡೆಯುತ್ತಿರುವ ರೈತ ಧರಣಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಪ್ರಸ್ತುತ ಸಾಲಿನಲ್ಲಿ 100ಕ್ಕೂ ಅಧಿಕ ದೇಶಗಳಲ್ಲಿ ನಡೆಸಿದ ಜಾಗತಿಕ ಹಸಿವು ಸೂಚ್ಯಂಕ ಸಮೀಕ್ಷೆ ಪ್ರಕಾರ, ಭಾರತವು 90ನೆ ಸ್ಥಾನ ತಲುಪಿದ್ದು, ಹಸಿವಿನ ಕರಾಳತೆಯಲ್ಲಿರುವ ಸುಡಾನ್‍ನ ಜೊತೆ ನಮ್ಮ ದೇಶವೂ ಇದೆ. ಅಪೌಷ್ಠಿಕತೆಯಲ್ಲೂ 3ನೇ ಒಂದು ಭಾಗದಷ್ಟು ಪಾಲು ಭಾರತಕ್ಕೆ ದಕ್ಕಿದ್ದು, ಆಫ್ರಿಕಕ್ಕಿಂತ ದುಪ್ಪಟ್ಟು ಆಗಿದೆ. ಇಂತಹ ಸನ್ನಿವೇಶ ನಿರ್ಮಿಸಲು ಮೋದಿ-ಶಾ ಜೋಡಿಯೇ ಬರಬೇಕಾಯಿತು ಎಂದರು.

ಕೃಷಿ ವಲಯವು ರಾಜ್ಯ ಸರಕಾರದ ವ್ಯಾಪ್ತಿಗೆ ಬರುತ್ತದೆ. ಆದರೆ ರಾಜ್ಯಗಳನ್ನು ಕೇಂದ್ರ ಸರಕಾರ (ಒಕ್ಕೂಟ ಸರಕಾರ) ಗಣನೆಗೆ ತೆಗೆದುಕೊಳ್ಳದೆ ಕಾಲು ಕಸ ಮಾಡಿಕೊಂಡಿದೆ. ಇದು ಕೆಟ್ಟ ಬೆಳವಣಿಗೆ ಆಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಧರಣಿಯಲ್ಲಿ ಚಿಂತಕ ಶಿವಸುಂದರ್, ಪ್ರಗತಿಪರ ಹೋರಾಟಗಾರ ಶ್ರೀಪಾದ್ ಭಟ್, ರೈತ ಹೋರಾಟಗಾರ್ತಿ ಅನಸೂಯಮ್ಮ, ಕರ್ನಾಟಕ ಜನಾಂದೋಲನ ಸಂಘಟನೆ ಮುಖಂಡ ಮರಿಯಪ್ಪ, ಕರ್ನಾಟಕ ಜನಶಕ್ತಿ ನೂರ್ ಶ್ರೀಧರ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News