×
Ad

ನಿರ್ಮಾಪಕನ ಕೊಲೆಗೆ ಸಂಚು ಆರೋಪ: ಹಲವರ ಬಂಧನ, ಪೊಲೀಸರ ತನಿಖೆ ಚುರುಕು

Update: 2020-12-21 21:57 IST

ಬೆಂಗಳೂರು, ಡಿ.21: ನಿರ್ಮಾಪಕ, ಅವರ ಸಹೋದರ ಹಾಗೂ ಇಬ್ಬರು ರೌಡಿಗಳ ಹತ್ಯೆಗೆ ಸಂಚು ರೂಪಿಸಿ ಪರಾರಿಯಾಗಿರುವ ಆರೋಪದಡಿ ಇಲ್ಲಿನ ಜಯನಗರ ಠಾಣಾ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಡಿ.20ರಂದು ನ್ಯಾಶನಲ್ ಕಾಲೇಜು ಬಳಿ ಜಯನಗರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಗಸ್ತಿನಲ್ಲಿದ್ದ ಸಂದರ್ಭದಲ್ಲಿ ವಾಹನವೊಂದರಲ್ಲಿ ಕೆಲವರು ಕೊಲೆ ವಿಚಾರವಾಗಿ ಮಾತನಾಡುತ್ತಿದ್ದುದು ಕೇಳಿಸಿದೆ. ತಕ್ಷಣ ವಾಹನವನ್ನು ಸುತ್ತುವರಿದು 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಹತ್ತಿರದಲ್ಲಿಯೇ ಇದ್ದು ಇನ್ನು ಕೆಲವರು ಪರಾರಿಯಾಗಿದ್ದಾರೆ.

ವಶಕ್ಕೆ ಪಡೆದಿರುವ ಆರೋಪಿಗಳ ವಿಚಾರಣೆ ವೇಳೆ ಕೊಲೆಗೆ ಸಂಚು ರೂಪಿಸಿದ್ದ ವಿಚಾರ ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿಗಳು ಸಿಕ್ಕ ನಂತರ ಇನ್ನೂ ಹೆಚ್ಚಿನ ವಿವರ ಲಭ್ಯವಾಗಲಿದೆ. ವಶಕ್ಕೆ ಪಡೆದಿರುವವರ ಪೈಕಿ ಒಬ್ಬ ರೌಡಿ, ಇನ್ನು ಮೂವರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಇನ್ನುಳಿದ ಆರೋಪಿಗಳ ಬಂಧನಕ್ಕಾಗಿ ರಚಿಸಲಾಗಿರುವ ತಂಡಗಳು ತಮಿಳುನಾಡು, ಆಂಧ್ರಪ್ರದೇಶ ಮುಂತಾದ ಕಡೆ ಹುಡುಕಾಟ ನಡೆಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News