ಕಾಯ್ದೆ ತಿದ್ದುಪಡಿ ವಿರೋಧಿಸಿ ಬೆಂಗಳೂರಿನ ಯಶವಂತಪುರದ ‘ಎಪಿಎಂಸಿ ಬಂದ್’
ಬೆಂಗಳೂರು, ಡಿ.21: ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದ ಅಖಿಲ ಕರ್ನಾಟಕ ಎಪಿಎಂಸಿ ಯಾರ್ಡ್‍ಗಳ ಕಾರ್ಮಿಕರ ಒಕ್ಕೂಟವು ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಯನ್ನು ಕೆಲಕಾಲ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ನಗರದ ಯಶವಂತಪುರ ಎಪಿಎಂಸಿ ಪ್ರಾಂಗಣದಲ್ಲಿ ಜಮಾಯಿಸಿದ ಹಮಾಲಿಗಳು ಹಾಗೂ ಕಾರ್ಮಿಕರು, ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವುದು ಬೇಡ. ಆದರೆ, ಎಪಿಎಂಸಿ ಕಾರ್ಮಿಕರಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಖಿಲ ಕರ್ನಾಟಕ ಎಪಿಎಂಸಿ ಯಾರ್ಡ್‍ಗಳ ಕಾರ್ಮಿಕರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಅರುಣ್ ಪರಮೇಶ್, ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಸರಕಾರ ವಾಪಸ್ ಪಡೆಯಬೇಕು. ಕಾಯ್ದೆ ವಿರೋಧಿಸಿ ದೇಶದಾದ್ಯಂತ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಪ್ರಾಂಗಣದ ಹಮಾಲಿಗಳು ಹಾಗೂ ಕಾರ್ಮಿಕರು ಜತೆಗೂಡಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಎಪಿಎಂಸಿಗಳಲ್ಲಿ ಕೆಲಸ ಮಾಡುತ್ತಿರುವ ಹಮಾಲಿಗಳು ಹಾಗೂ ಕಾರ್ಮಿಕರ ಅಭಿವೃದ್ಧಿಗಾಗಿ ಸರಕಾರ ಎಪಿಎಂಸಿ ಕಾರ್ಮಿಕರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಅಸಂಘಟಿತರಾಗಿರುವ ಇವರಿಗೆ ಪಿಂಚಣಿ ಸೌಲಭ್ಯಗಳನ್ನು ನೀಡಬೇಕು. ಕಾರ್ಮಿಕ ಇಲಾಖೆಯಿಂದ ಇವರಿಗೂ ಎಲ್ಲ ರೀತಿಯ ಸವಲತ್ತುಗಳು ಸಿಗಬೇಕು. ಪ್ರಾಂಗಣಗಳಲ್ಲಿ ಆಸ್ಪತ್ರೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಗೆ ಎಪಿಎಂಸಿ ಮಂಡಿ ಹಮಾಲಿ ಕಾರ್ಮಿಕರ ಸಂಘ, ಎಪಿಎಂಸಿ ಲೋಡಿಂಗ್, ಅಲ್‍ಲೋಡಿಂಗ್ ಮತ್ತು ಜನರಲ್ ವರ್ಕರ್ಸ್ ಯೂನಿಯನ್, ಮಹಿಳಾ ಹಮಾಲಿ ಕಾರ್ಮಿಕರ ಸಂಘ ಹಾಗೂ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಸಂಘಟನೆಗಳು ಬೆಂಬಲ ನೀಡಿದ್ದವು.