‘ಗೋಹತ್ಯೆ ನಿಷೇಧ’ದಿಂದ ರಾಜ್ಯದ ಆರ್ಥಿಕತೆ ಮೇಲೆ ಪರಿಣಾಮ: ಖಾಸಿಮ್ ಏಜಾಝ್ ಖುರೇಶಿ
ಬೆಂಗಳೂರು, ಡಿ.21: ಬಿಜೆಪಿ ಸರಕಾರ ಜಾರಿಗೆ ತರಲು ಮುಂದಾಗಿರುವ ಗೋಹತ್ಯೆ ನಿಷೇಧ ಕಾಯ್ದೆಯಿಂದ ರಾಜ್ಯದ ಆರ್ಥಿಕತೆ ಮೇಲೂ ಪರಿಣಾಮ ಬೀರಲಿದೆ. ರಾಜಕೀಯವನ್ನು ಬದಿಗಿಟ್ಟು ವಾಸ್ತವ ನೆಲೆಗಟ್ಟಿನಲ್ಲಿ ಚಿಂತನೆ ನಡೆಸಲಿ ಎಂದು ಜಮಿಯತುಲ್ ಖುರೇಶ್ ಬೀಫ್ ಮರ್ಚೆಂಟ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಖಾಸಿಮ್ ಏಜಾಝ್ ಖುರೇಶಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 1964ರಲ್ಲಿ ಜಾರಿಗೆ ತಂದಿರುವ ಕಾನೂನಿನಲ್ಲೆ ಹಸು ಹಾಗೂ ಕರುವನ್ನು ವಧೆ ಮಾಡುವುದನ್ನು ನಿರ್ಬಂಧಿಸಲಾಗಿದೆ. ನಾವು ಅದನ್ನು ಪಾಲಿಸಿಕೊಂಡು ಬಂದಿದ್ದೇವೆ. ಹೊಸ ಕಾಯ್ದೆಯಲ್ಲಿ ದನ, ಕೋಣವನ್ನು ಸೇರಿಸಿರುವುದರಿಂದ ಮಾಂಸದ ವ್ಯಾಪಾರಿಗಳಿಗಷ್ಟೇ ಅಲ್ಲ, ಜಾನುವಾರುಗಳನ್ನು ಖರೀದಿಸುವ, ಮಾರಾಟ ಮಾಡುವವರು ತೊಂದರೆ ಅನುಭವಿಸುತ್ತಾರೆ ಎಂದರು.
ರೈತ ಕೃಷಿಗೆ ಉಪಯುಕ್ತವಲ್ಲದ ಜಾನುವಾರುಗಳನ್ನು ಮಾರಾಟ ಮಾಡಿ ಬೇರೆ ಜಾನುವಾರುಗಳನ್ನು ಖರೀದಿಸುತ್ತಿದ್ದ. ಆದರೆ, ಈಗ ರೈತ ತನ್ನ ಜಾನುವಾರುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಕಾಯ್ದೆ ಜಾರಿಯಾದಲ್ಲಿ ಮಾಂಸದ ಅಂಗಡಿ, ವಧಾಗಾರ, ಚರ್ಮದ ಉದ್ಯಮದಲ್ಲಿ ತೊಡಗಿಕೊಂಡಿರುವ ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗುತ್ತಾರೆ. ಈಗಾಗಲೆ ಕೋವಿಡ್‍ನಿಂದ ಸಾಕಷ್ಟು ಜನ ಉದ್ಯೋಗ ಕಳೆದುಕೊಂದು ಬೀದಿ ಪಾಲಾಗಿದ್ದಾರೆ. ರಾಜ್ಯ ಸರಕಾರ ಮತ್ತಷ್ಟು ಜನರನ್ನು ಅದೇ ಹಾದಿ ತೋರಿಸಲು ಮುಂದಾಗಿದೆ ಎಂದು ಅವರು ಕಿಡಿಗಾರಿದರು.
ಒಂದು ವೇಳೆ ಸರಕಾರ ಈ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾದರೆ, ದಲಿತರು ಹಾಗೂ ಹಿಂದುಳಿದ ವರ್ಗದವರ 126 ಸಂಘಟನೆಗಳ ಒಕ್ಕೂಟದೊಂದಿಗೆ ಸೇರಿ ಕಾನೂನು ಹೋರಾಟವನ್ನು ನಡೆಸುತ್ತೇವೆ. ಯಾವುದೊ ಒಂದು ಸಮುದಾಯವನ್ನು ಗುರಿಯನ್ನಾಗಿಸಿಕೊಂಡು ಕಾನೂನು ರೂಪಿಸುವ ಮುನ್ನ ಸಮಾಜದಲ್ಲಿನ ವಾಸ್ತವ ಪರಿಸ್ಥಿತಿಯನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಏಜಾಝ್ ಖುರೇಶಿ ಹೇಳಿದರು.
ಟ್ರಸ್ಟ್ ಸಲಹೆಗಾರ ಮನ್ಸೂರ್ ಖುರೇಶಿ ಮಾತನಾಡಿ, ಗೋವಾ, ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಗೋಹತ್ಯೆಯನ್ನು ನಿಷೇಧಿಸಿಲ್ಲ. ನಮ್ಮ ದೇಶದಿಂದ ಗೋ ಮಾಂಸವನ್ನು ರಫ್ತು ಮಾಡುತ್ತಿರುವ ಪ್ರಮುಖ ಕಂಪೆನಿಗಳ ಮುಖ್ಯಸ್ಥರು ಹಿಂದೂ ಸಹೋದರರು. ಪ್ರತಿ ವರ್ಷ ಎಷ್ಟು ಸಾವಿರ ಕೋಟಿ ರೂ.ಗಳ ವ್ಯವಹಾರ ನಡೆಯುತ್ತಿದೆ ಎಂಬುದು ಅಂತರ್‍ಜಾಲ ತಾಣಗಳಲ್ಲಿ ಲಭ್ಯವಿದೆ. ಗೋ ಹತ್ಯೆಯನ್ನು ಏಕಾಏಕಿ ನಿಷೇಧಿಸಿದರೆ, ಸಕ್ಕರೆಯನ್ನು ಪಾಲಿಶ್, ದಾರದ ಉತ್ಪಾದನೆ, ಮಧುಮೇಹ, ಕ್ಯಾನ್ಸರ್ ಸೇರಿದಂತೆ ಇನ್ನಿತರ ಮಾರಕ ರೋಗಗಳಿಗೆ ಔಷಧಿ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಮಿಯತುಲ್ ಖುರೇಶ್ ಬೀಫ್ ಮರ್ಚೆಂಟ್ಸ್ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ರಿಝ್ವಾನ್ ಖುರೇಶಿ, ಕಾರ್ಯದರ್ಶಿ ಶಫಿ ಉಲ್ಲಾ ಉಪಸ್ಥಿತರಿದ್ದರು.
ವಿಪಕ್ಷಗಳ ಸಹಕಾರ
ರಾಜ್ಯ ಸರಕಾರದ ಈ ಜನ ವಿರೋಧಿ ವಿಧೇಯಕಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಮುಖಂಡರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. ಅವರೆಲ್ಲರೂ ಸದನದ ಒಳಗೆ ಹಾಗೂ ಹೊರಗೆ ಈ ಕಾಯ್ದೆಯನ್ನು ವಿರೋಧಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಖಾಸಿಮ್ ಏಜಾಝ್ ಖುರೇಶಿ ತಿಳಿಸಿದರು.