ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ಸ್ವಾಪಿಂಗ್ ಘಟಕಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ
ಬೆಂಗಳೂರು, ಡಿ.22: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಗೃಹ ಕಚೇರಿ ಕೃಷ್ಣಾ ಆವರಣದಲ್ಲಿ ಸನ್ ಮೊಬಿಲಿಟೀಸ್ ಕಂಪೆನಿಯ ವಿದ್ಯುತ್ ವಾಹನಗಳ ಬ್ಯಾಟರಿ ಸ್ವಾಪಿಂಗ್ ಘಟಕಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ನಾಗರಿಕರು ವಿದ್ಯುತ್ ಚಾಲಿತ ವಾಹನಗಳನ್ನು ಬಳಸಲು ಉತ್ಸುಕರಾಗಿದ್ದಾರೆ. ಆದರೆ ಇದಕ್ಕೆ ಪೂರಕ ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸನ್ ಮೊಬಿಲಿಟಿಯವರು ರೂಪಿಸಿರುವ ಬ್ಯಾಟರಿ ಸ್ವಾಪಿಂಗ್ ನೆಟ್‍ವರ್ಕ್ ಒಂದು ಮಹತ್ವಪೂರ್ಣ ಬೆಳವಣಿಗೆ ಎಂದು ಶ್ಲಾಘಿಸಿದರು.
ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಸರಕಾರ ಒತ್ತು ನೀಡಲಿದ್ದು, ಬ್ಯಾಟರಿ ಸ್ವಾಪಿಂಗ್ ಘಟಕಗಳು ವೆಚ್ಚ ಹಾಗೂ ಸಮಯದ ಉಳಿತಾಯ ಮಾಡಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ಸನ್ ಮೊಬಿಲಿಟಿಯ ಉಪಾಧ್ಯಕ್ಷ ಉದಯ್ ಖೇಮ್ಕಾ ಹಾಗೂ ಚೇತನ್ ಮೈನಿ ಅವರು ಭಾರತದ ಮೊದಲ ವಿದ್ಯುತ್ ಚಾಲಿತ ಕಾರ್ ತಯಾರಿಕೆಗೆ ಕರ್ನಾಟಕ ಸರಕಾರ ನೀಡಿದ ಬೆಂಬಲವನ್ನು ಸ್ಮರಿಸಿ, ಈ ಹಸಿರು ಉಪಕ್ರಮಕ್ಕೂ ಸರಕಾರ ಬೆಂಬಲ ನೀಡುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಯ ಸಲಹೆಗಾರ ಎಂ. ಲಕ್ಷ್ಮೀನಾರಾಯಣ, ಸನ್ ಮೊಬಿಲಿಟಿ ಸಂಸ್ಥೆಯ ಸಿಇಓ ಡಿ.ಎಸ್.ರಾವತ್, ಪಿಯಾಜಿಯೊ ವೆಹಿಕಲ್ಸ್‍ನ ಸಿಇಓ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿಯಾಗೊ ಗ್ರಾಫಿ ಮೊದಲಾದವರು ಉಪಸ್ಥಿತರಿದ್ದರು.