ಬಿಜೆಪಿ ನಾಯಕರ ಸೂಚನೆಯಂತೆ ನಮ್ಮ ಕಾರ್ಯಕರ್ತರ ಬಂಧನ: ಎಸ್‍ಡಿಪಿಐ ಆರೋಪ

Update: 2020-12-22 12:52 GMT

ಬೆಂಗಳೂರು, ಡಿ.22: ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ಸೂಚನೆಯ ಮೇರೆಗೆ ಎನ್‍ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ಅಧಿಕಾರಿಗಳು ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಎಸ್‍ಡಿಪಿಐ ಬೆಂಗಳೂರು ಜಿಲ್ಲಾಧ್ಯಕ್ಷ ಎಂ.ಡಿ.ಶರೀಫ್ ಸೇರಿದಂತೆ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಆರೋಪಿಸಿದ್ದಾರೆ.

ಮಂಗಳವಾರ ನಗರದ ಎಸ್‍ಡಿಪಿಐ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‍ಐಎ ಅಧಿಕಾರಿಗಳು ಡಿಜೆ ಹಳ್ಳಿ ಗಲಭೆ ಪ್ರಕರಣಗಳಲ್ಲಿ ಕೂಲಂಕಷವಾದ ತನಿಖೆ ನಡೆಸುವ ಮೊದಲೇ, ಈ ಪ್ರಕರಣದಲ್ಲಿ ಎಸ್‍ಡಿಪಿಐ ಭಾಗಯಾಗಿರಬಹುದೆಂದು ಹೇಳಿಕೆ ನೀಡಿದ್ದಾರೆ. ಆ ಮೂಲಕ ಎನ್‍ಐಎ ಅಧಿಕಾರಿಗಳು ಬಿಜೆಪಿಯ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆಂದು ತಿಳಿಸಿದ್ದಾರೆ.

ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಮುಹಮ್ಮದ್ ಶರೀಫ್ ಹಾಗೂ ಕಾರ್ಯಕರ್ತರು ಎನ್‍ಐಎ ಅಧಿಕಾರಿಗಳು ಕರೆದಾಗಲೆಲ್ಲ ಎನ್‍ಐಎ ಕಚೇರಿಗೆ ಭೇಟಿ ನೀಡಿ ತನಿಖೆಗೆ ಸಹಕರಿಸುತ್ತಿದ್ದಾರೆ. ಹಾಗೂ ನಮ್ಮ ಪಕ್ಷದ ಕಚೇರಿಗಳಿಗೆ ದಾಳಿ ಮಾಡಿ, ನಮ್ಮ ಕರಪತ್ರಗಳು ವಶಪಡಿಸಿಕೊಳ್ಳಲಾಗಿದೆ. ನಮ್ಮ ಕಾರ್ಯಕರ್ತರ ಮೊಬೈಲ್‍ಗಳನ್ನು ಪರಿಶೀಲನೆ ಮಾಡಿದ್ದಾರೆ. ಯಾವುದರಲ್ಲೂ ಗಲಭೆ ಸಂಬಂಧಿಸಿದಂತೆ ಎಸ್‍ಡಿಪಿಐ ಪಾತ್ರವಿಲ್ಲದಿರುವುದು ಅಧಿಕಾರಿಗಳಿಗೆ ಸ್ಪಷ್ಟವಾಗಿದೆ. ಆದರೂ ನಮ್ಮ ಕಾರ್ಯಕರ್ತರನ್ನು ಬಂಧಿಸುತ್ತಿರುವುದು ಹಿಂದೆ ಬಿಜೆಪಿ ರಾಜಕೀಯ ಷಡ್ಯಂತ್ರವಿದೆ ಎಂದು ಅವರು ಹೇಳಿದ್ದಾರೆ.

ಸುಳ್ಳು ಸಾಕ್ಷ್ಯಗಳ ಸೃಷ್ಟಿ: ರಾಜ್ಯದಲ್ಲಿ ಆಗಸ್ಟ್ ತಿಂಗಳ ಆಸುಪಾಸಿನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಜನರ ಸಾವು-ನೋವುಗಳು ಹೆಚ್ಚಾಗುತ್ತಿತ್ತು. ಈ ವೇಳೆ ಕೋವಿಡ್‍ನಿಂದ ಮೃತರಾದವರ ಅಂತ್ಯಕ್ರಿಯೆ ನಡೆಸಲು ಸಂಬಂಧಿಸಿಕರೆ ಹಿಂಜರಿಯುತ್ತಿದ್ದರು. ಅಂತಹ ಸಂದರ್ಭದಲ್ಲಿ ಎಸ್‍ಡಿಪಿಐ ಸ್ವಯಂ ಸೇವಕರು ಕೋವಿಡ್‍ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುತ್ತಾ ಬಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹಾಗೂ ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದಂತೆ ಆ.8ರಿಂದ 11ರವರೆಗೆ ಬೆಂಗಳೂರಿನ ವಿವಿಧ ವಾರ್ಡ್‍ಗಳಲ್ಲಿ ಸಭೆ ನಡೆಸಿ ಚರ್ಚಿಸಲಾಯಿತು. ಆದರೆ, ಎನ್‍ಐಎ ಅಧಿಕಾರಿಗಳು ಈ ಸಭೆಯಲ್ಲಿ ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಪ್ರೇರಣೆ ನೀಡಲಾಗಿತ್ತು ಎಂದು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ನ್ಯಾಯಾಂಗ ಹೋರಾಟ: ಎನ್‍ಐಎ ಅಧಿಕಾರಿಗಳು ಬಿಜೆಪಿಯ ನಿರ್ದೇಶನದಂತೆ ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಕಾರ್ಯನಿರ್ವಹಿಸುವುದರಿಂದ ನಾವು ನ್ಯಾಯಾಲಯಕ್ಕೆ ಹೋಗಲು ನಿರ್ಧರಿಸಿದ್ದೇವೆ. ನಮ್ಮ ದೇಶದ ನ್ಯಾಯಾಲಯದ ಮೇಲೆ ನಂಬಿಕೆಯಿದೆ. ಅಲ್ಲಿ ನ್ಯಾಯ ಪಡೆಯುತ್ತೇವೆಂದು ಅವರು ಹೇಳಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಎಸ್‍ಡಿಪಿಐ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಮಜೀದ್ ಖಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಝಾಹಿದ್ ಪಾಷಾ, ರಾಜ್ಯಕಾರ್ಯದರ್ಶಿ ಮಂಡಳಿ ಸದಸ್ಯ ಅಕ್ರಂ ಹಸನ್, ರಾಜ್ಯ ಸಮಿತಿ ಸದಸ್ಯ ಪಯಾಝ್, ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ ಅಹ್ಮದ್ ಉಪಸ್ಥಿತರಿದ್ದರು.

ಡಿಜೆ ಹಳ್ಳಿ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿ. ಆದರೆ, ನೂರಾರು ಮುಸ್ಲಿಂ ಯುವಕರ ಮೇಲೆ ಯುಎಪಿಎ ಅಂತಹ ಗಂಭೀರ ಕಾನೂನನ್ನು ಜಾರಿ ಮಾಡಿರುವುದು ಎಷ್ಟು ಸರಿ ಎಂಬುದುನ್ನು ಎನ್‍ಐಎ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಲಿ. ಆದರೆ, ಗಲಭೆಗೆ ಮೂಲ ಕಾರಣರಾದ ಆರೋಪಿ ನವೀನ್ ಹಾಗೂ ಮಾಜಿ ಮೇಯರ್ ಸಂಪತ್‍ರಾಜ್ ಮೇಲೆ ಯಾಕೆ ಯುಎಪಿಎ ಕಾನೂನು ಹಾಕಲಿಲ್ಲ. ಪ್ರಕರಣದಲ್ಲಿ ಮುಸ್ಲಿಮರನ್ನು ನೇರವಾಗಿ ಟಾರ್ಗೆಟ್ ಮಾಡುವ ಹುನ್ನಾರವಾಗಿದೆ. ಕೇಂದ್ರದ ಬಿಜೆಪಿ ಸರಕಾರವು ಭೀಮಾ ಕೋರೆಂಗಾವ್ ಪ್ರತಿಭಟನೆ, ದೆಹಲಿ ಗಲಭೆ ಹಾಗೂ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪ್ರಕರಣವನ್ನು ನೆಪವಾಗಿಟ್ಟು ಸಾಮಾಜಿಕ ಹೋರಾಟಗಾರರು, ಎಡಪಂಥೀಯರು ಹಾಗೂ ಮುಸ್ಲಿಮರ ವಿರುದ್ಧ ಸುಳ್ಳು ಕೇಸುಗಳನ್ನು ಹಾಕಿ ಬಂಧಿಸುವ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು.

-ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‍ಡಿಪಿಐ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News