ನಿಮ್ಮ ಬ್ಯಾಂಕ್ ಖಾತೆಯನ್ನು ಮುಚ್ಚುತ್ತೀರಾ? ಶುಲ್ಕಗಳಿಂದ ಪಾರಾಗಲು ಹೀಗೆ ಮಾಡಿ

Update: 2020-12-22 14:01 GMT

ನೀವು ಬ್ಯಾಂಕಿನಲ್ಲಿ ಹೊಸದಾಗಿ ಖಾತೆಯನ್ನು ತೆರೆದಿದ್ದರೆ ಮತ್ತು ಬ್ಯಾಂಕಿನ ಸೇವೆಗಳು ನಿಮಗೆ ಅತೃಪ್ತಿಯನ್ನುಂಟು ಮಾಡಿದ್ದರೆ 14 ದಿನಗಳಲ್ಲಿ ನೀವು ಖಾತೆಯನ್ನು ಮುಚ್ಚಬಹುದು ಮತ್ತು ಬ್ಯಾಂಕ್ ಶುಲ್ಕಗಳಿಂದ ಪಾರಾಗಬಹುದು.

ಸಾಮಾನ್ಯವಾಗಿ ನೀವು ಬ್ಯಾಂಕಿನಲ್ಲಿ ಎಷ್ಟು ಸಮಯದಿಂದ ಖಾತೆಯನ್ನು ಹೊಂದಿದ್ದೀರಿ ಎನ್ನುವುದನ್ನು ಅವಲಂಬಿಸಿ ನಿಮ್ಮ ಖಾತೆಯನ್ನು ಮುಚ್ಚಲು ಬೇರೆ ಬೇರೆ ದರಗಳಲ್ಲಿ ಶುಲ್ಕಗಳನ್ನು ವಿಧಿಸಲಾಗುತ್ತದೆ. ಖಾತೆಯನ್ನು ಆರಂಭಿಸಿದ 14 ದಿನಗಳಿಂದ ಒಂದು ವರ್ಷದೊಳಗೆ ನೀವು ಅದನ್ನು ಮುಚ್ಚಲು ಬಯಸಿದರೆ ಬ್ಯಾಂಕು ಅದಕ್ಕೆ ಶುಲ್ಕವನ್ನು ವಿಧಿಸುತ್ತದೆ.

ನೀವು ಖಾತೆಯನ್ನು ಆರಂಭಿಸಿದ 14 ದಿನಗಳೊಳಗೆ ಅದನ್ನು ಮುಚ್ಚಿದರೆ ಸಾಮಾನ್ಯವಾಗಿ ಯಾವುದೇ ಬ್ಯಾಂಕು ಅದಕ್ಕೆ ಶುಲ್ಕವನ್ನು ವಿಧಿಸುವುದಿಲ್ಲ. ಅಲ್ಲದೆ ಖಾತೆಯನ್ನು ಆರಂಭಿಸಿದ ಒಂದು ವರ್ಷದ ಬಳಿಕ ಅದನ್ನು ಮುಚ್ಚಿದರೆ ಶುಲ್ಕವನ್ನು ಪಾವತಿಸುವುದರಿಂದ ತಪ್ಪಿಸಿಕೊಳ್ಳಬಹುದು.

ಹೊಸ ಉದ್ಯೋಗ ಪಡೆದ ಅಥವಾ ಹೊಸ ಕಂಪನಿಗೆ ಸೇರಿದಂತಹ ವಿವಿಧ ಸಂದರ್ಭಗಳಲ್ಲಿ ಹೆಚ್ಚಿನವರಿಗೆ ಹೊಸ ಬ್ಯಾಂಕ್ ಖಾತೆಯನ್ನು ಆರಂಭಿಸುವುದು ಅಗತ್ಯವಾಗುತ್ತದೆ. ಆದರೆ ಪ್ರತಿ ಕಂಪನಿಯನ್ನು ತೊರೆದಾಗಲೂ ಸಾಮಾನ್ಯವಾಗಿ ಹೊಸ ಬ್ಯಾಂಕ್ ಖಾತೆಯನ್ನು ತೆರೆಯಬೇಕಾಗುತ್ತದೆ. ಎಲ್ಲ ಬ್ಯಾಂಕುಗಳು ತಮ್ಮ ಗ್ರಾಹಕರು ತಮ್ಮ ಪ್ರತಿಯೊಂದು ಖಾತೆಯಲ್ಲಿಯೂ ಕಾಯ್ದುಕೊಳ್ಳಬೇಕಾದ ಮಾಸಿಕ ಸರಾಸರಿ ಶಿಲ್ಕನ್ನು ನಿಗದಿಗೊಳಿಸಿವೆ ಮತ್ತು ಈ ಬಗ್ಗೆ ಬ್ಯಾಂಕುಗಳು ಕಟ್ಟುನಿಟ್ಟಾಗಿರುತ್ತವೆ. ಪರಿಣಾಮವಾಗಿ ಹೆಚ್ಚುವರಿ ಬ್ಯಾಂಕ್ ಖಾತೆಗಳನ್ನು ನಿವಾರಿಸಲು ಮತ್ತು ಕನಿಷ್ಠ ಶಿಲ್ಕು ಕಾಯ್ದುಕೊಳ್ಳದ್ದಕ್ಕೆ ದಂಡವನ್ನು ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಹೆಚ್ಚಿನವರು ಅವುಗಳನ್ನು ಮುಚ್ಚುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಆದರೆ ಇದಕ್ಕಾಗಿ ಅವರು ಹೆಚ್ಚುವರಿ ಶುಲ್ಕಗಳನ್ನೂ ಪಾವತಿಸುವುದು ಅನಿವಾರ್ಯವಾಗುತ್ತದೆ.

 ತನ್ನ ಗ್ರಾಹಕರು ಒಂದು ವರ್ಷದ ಬಳಿಕ ಖಾತೆಯನ್ನು ಮುಚ್ಚಿದರೆ ಎಸ್‌ಬಿಐ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಈ ಮೊದಲು ಅದು ತನ್ನ ಗ್ರಾಹಕರು ಖಾತೆಯನ್ನು ಆರಂಭಿಸಿದ ಒಂದು ವರ್ಷದ ಬಳಿಕ ಅದನ್ನು ಮುಚ್ಚಿದರೂ 500 ರೂ.ಗಳ ಭಾರೀ ಶುಲ್ಕವನ್ನು ವಿಧಿಸುತ್ತಿತ್ತು. ಆದರೆ ಬ್ಯಾಂಕಿನ ಗ್ರಾಹಕರು ಖಾತೆ ಆರಂಭಿಸಿದ ಒಂದು ವರ್ಷದೊಳಗೆ ಅದನ್ನು ಮುಚ್ಚಿದರೆ ಈಗಲೂ ದಂಡಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ನಿಯಮದಲ್ಲಿ ಯಾವುದೇ ಬದಲಾವಣೆಯನ್ನು ಎಸ್‌ಬಿಐ ಮಾಡಿಲ್ಲ.

ಖಾತೆಯನ್ನು ಆರಂಭಿಸುವಾಗ ಹಾಗೂ ಡೆಬಿಟ್ ಕಾರ್ಡ್ ಮತ್ತು ಚೆಕ್‌ಬುಕ್‌ನಂತಹ ಆರಂಭಿಕ ಕಿಟ್ ನೀಡುವಾಗ ತಮಗೆ ತಗಲುವ ವೆಚ್ಚವನ್ನು ವಸೂಲು ಮಾಡಲು ಬ್ಯಾಂಕುಗಳು ಈ ಮುಗಿತಾಯ ಶುಲ್ಕವನ್ನು ವಿಧಿಸುತ್ತವೆ ಎನ್ನುತ್ತಾರೆ ಬ್ಯಾಂಕಿಂಗ್ ತಜ್ಞರು. ಈ ಮೊದಲು ಮೃತವ್ಯಕ್ತಿಯ ಖಾತೆಯನ್ನು ಮುಚ್ಚಲೂ ಬ್ಯಾಂಕುಗಳು 500 ರೂ.ಶುಲ್ಕ ಮತ್ತು ಜಿಎಸ್‌ಟಿಯನ್ನು ವಿಧಿಸುತ್ತಿದ್ದವು. ಆದರೆ ಈಗ ಹೆಚ್ಚಿನ ಬ್ಯಾಂಕುಗಳು ಇಂತಹ ಖಾತೆಗಳಿಗೆ ಶುಲ್ಕವನ್ನು ವಿಧಿಸುವುದನ್ನು ಕೈಬಿಟ್ಟಿವೆ.

ಗ್ರಾಹಕರಿಗೆ ತಮ್ಮ ಬ್ಯಾಂಕಿನ ಸೇವೆ ತೃಪ್ತಿಯನ್ನು ನೀಡದಿದ್ದರೆ ಅವರು ಅದನ್ನು ಆರಂಭಿಸಿದ 14 ದಿನಗಳಲ್ಲಿ ಮುಚ್ಚಬಹುದು ಮತ್ತು ಬ್ಯಾಂಕಿನ ಶುಲ್ಕಗಳನ್ನು ತಪ್ಪಿಸಿಕೊಳ್ಳಬಹುದು. ಕರೆಂಟ್ ಅಥವಾ ಚಾಲ್ತಿ ಖಾತೆಯನ್ನು 14 ದಿನಗಳ ಬಳಿಕ ಮುಚ್ಚುವುದಾದರೆ ಬ್ಯಾಂಕುಗಳು 500 ರೂ.ಗಳಿಂದ 1,000 ರೂ.ಗಳವರೆಗೆ ಭಾರೀ ಶುಲ್ಕವನ್ನು ವಿಧಿಸುತ್ತವೆ ಎನ್ನ್ನುವುದು ಗಮನದಲ್ಲಿರಲಿ.

ಖಾತೆಗಳನ್ನು ಮುಚ್ಚುವಾಗ ಬ್ಯಾಂಕುಗಳು ವಸೂಲು ಮಾಡುವ ಶುಲ್ಕಗಳ ಬಗ್ಗೆ ಆರ್‌ಬಿಐ ಯಾವುದೇ ನಿರ್ದಿಷ್ಟ ಮಾರ್ಗಸೂಚಿಯನ್ನು ಹೊಂದಿಲ್ಲ ಎನ್ನುವುದು ನಿಮಗೆ ಗೊತ್ತಿರಲಿ. ಹೀಗಾಗಿ ಸೇವಾಶುಲ್ಕಗಳನ್ನು ವಿಧಿಸುವುದು ಸಂಪೂರ್ಣವಾಗಿ ಬ್ಯಾಂಕುಗಳ ವಿವೇಚನಾಧಿಕಾರಕ್ಕೆ ಒಳಪಟ್ಟಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News