ಗೋವಿಂದರಾಜನಗರದ ಮಸೀದಿಯಲ್ಲಿ ಅಕ್ರಮ ಧ್ವನಿವರ್ಧಕ ಬಳಕೆ ನಿಲ್ಲಿಸಲಾಗಿದೆ: ಹೈಕೋರ್ಟ್ ಗೆ ಮೆಮೋ ಸಲ್ಲಿಕೆ
Update: 2020-12-22 23:38 IST
ಬೆಂಗಳೂರು, ಡಿ.22: ಬೆಂಗಳೂರಿನ ಗೋವಿಂದರಾಜನಗರದ ಮಸೀದಿಯಲ್ಲಿ ಅಕ್ರಮವಾಗಿ ಧ್ವನಿವರ್ಧಕ ಬಳಕೆ ಮಾಡುವುದನ್ನು ನಿಲ್ಲಿಸಲಾಗಿದೆ ಎಂದು ಪೊಲೀಸರು ಹೈಕೋರ್ಟ್‍ಗೆ ಮೆಮೋ ಸಲ್ಲಿಸಿದ್ದಾರೆ.
ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಸುವುದನ್ನು ಪ್ರಶ್ನಿಸಿ ನಗರದ ವಕೀಲೆ ಸುಮಂಗಲ ಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು.
ಗೋವಿಂದರಾಜನಗರದ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಪೊಲೀಸರು ಸಲ್ಲಿಸಿದ ಮೊಮೋವನ್ನು ಗಮನಿಸಿದ ನ್ಯಾಯಪೀಠ, ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಲು ಪೊಲೀಸರಿಗೆ ಸೂಚನೆ ನೀಡಿತು.
ಈ ಮಧ್ಯೆ, ಶಬ್ದಮಾಲಿನ್ಯದ ಕುರಿತು ದೂರು ಬಂದರೆ ಅವುಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ನ್ಯಾಯಪೀಠವು ಸೂಚನೆ ನೀಡಿದ್ದು, ಈ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿದೆ. ಅರ್ಜಿ ವಿಚಾರಣೆಯನ್ನು ಜ.21ಕ್ಕೆ ಮುಂದೂಡಿದೆ.