ಅವಾಚ್ಯ ಶಬ್ದಗಳಿಂದ ನಿಂದನೆ, ದೌರ್ಜನ್ಯ ಆರೋಪ: ಬೆಂಗಳೂರು ವಿವಿ ಶಿಕ್ಷಕೇತರ ನೌಕರರಿಂದ ಅಹೋರಾತ್ರಿ ಧರಣಿ

Update: 2020-12-22 18:24 GMT

ಬೆಂಗಳೂರು, ಡಿ.22: ಕುಲಸಚಿವರು ಹಾಗೂ ವಿತ್ತಾಧಿಕಾರಿಗಳು ಶಿಕ್ಷಕೇತರ ನೌಕರರನ್ನು ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಿ ನೌಕರರ ಕರ್ತವ್ಯದ ಕುರಿತು ಹೀನಾಯವಾಗಿ ಮಾತನಾಡುತ್ತಿರುವುದು ಹಾಗೂ ನೌಕರರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬೆಂಗಳೂರು ವಿವಿ ಶಿಕ್ಷಕೇತರ ನೌಕರರ ಸಂಘದ ನೇತೃತ್ವದಲ್ಲಿ ವಿವಿ ಆವರಣದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ನೌಕರರ ಸಂಘವು, ಕುಲಸಚಿವರು ಹಾಗೂ ವಿತ್ತಾಧಿಕಾರಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕುಲಪತಿಗಳಿಗೆ ಮನವಿ ಮಾಡಿ ಹಲವು ಭಾರಿ ಪತ್ರ ಪಡೆಯಲಾಗಿದೆ. ಆದರೆ, ಆಡಳಿತ ಮಂಡಳಿಯು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಲಾಗಿದೆ.

ಈ ಹಿಂದೆ ಆರು ದಿನಗಳ ಕಾಲ ಸತತ ಹೋರಾಟ ಮಾಡಿದ್ದೆವು. ಕುಲಪತಿಗಳು ಭರವಸೆ ನೀಡಿ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದಿದ್ದರು. ಆದರೆ, ಅವರು ಭರವಸೆ ನೀಡಿ ಮೂರು ತಿಂಗಳು ಕಳೆದರೂ ಇದುವರೆಗೂ ಆಡಳಿತ ಮಂಡಳಿಯು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಅವರ ದೌರ್ಜನ್ಯ ಮತ್ತಷ್ಟು ಹೆಚ್ಚಳವಾಗಿದೆ. ಹೀಗಾಗಿ, ನಮ್ಮ ಸಮಸ್ಯೆಗೆ ಪರಿಹಾರ ಕಾಣದ ಹೊರತು ಪದೋನ್ನತಿ ಮತ್ತು ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಕಾಣುವುದು ಕಂಡುಬಂದಿಲ್ಲ ಎಂದು ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News