ಎಲ್ಲ ಪಾಲಿಕೆ ಚುನಾವಣೆಗಳಲ್ಲಿ ಪಕ್ಷದ ಚಿಹ್ನೆಯಿಂದಲೇ ಸ್ಪರ್ಧೆ : ಡಿ.ಕೆ ಶಿವಕುಮಾರ್
ಬೆಂಗಳೂರು: ಬೆಳಗಾವಿ, ಧಾರವಾಡ ಪಾಲಿಕೆ ಚುನಾವಣೆ ನಡೆಸಲು ನ್ಯಾಯಾಲಯ ಸಮಯ ನಿಗದಿ ಮಾಡಿದೆ. ಇನ್ನು ಮುಂದೆ ಯಾವುದೇ ಪಾಲಿಕೆ ಚುನಾವಣೆ ನಡೆದರು ನಮ್ಮ ಪಕ್ಷದ ಚಿಹ್ನೆ ಮೂಲಕ ಸ್ಪರ್ಧಿಸಿ, ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬುಧವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಇಷ್ಟು ದಿನಗಳ ಕಾಲ ಬೆಳಗಾವಿ ಪಾಲಿಕೆಯಯಲ್ಲಿ ಕಾಂಗ್ರೆಸ್ ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡು ತನ್ನ ಅಭ್ಯರ್ಥಿ ಹಾಕುತ್ತಿರಲಿಲ್ಲ. ಈ ಬಾರಿಯಿಂದ ಎಲ್ಲ ಪಾಲಿಕೆ ಚುನಾವಣೆಗಳಲ್ಲಿ ಪಕ್ಷದ ಚಿಹ್ನೆ ಮೂಲಕ ಸ್ಪರ್ಧಿಸಲಾಗುವುದು. ಎಲ್ಲ ವಾರ್ಡ್ ಮಟ್ಟದ ಸಮಿತಿ ಮಾಡಲು ಒಂದು ಸಮಿತಿ ರಚಿಸಲಾಗಿದೆ. ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೋ, ಸೋಲುತ್ತೇವೋ ಅದು ನಂತರ. ನಮ್ಮ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸುವುದು ಮುಖ್ಯ ಎಂದರು.
ಎಲ್ಲರ ಹಿತ ಗಮನದಲ್ಲಿಟ್ಟುಕೊಂಡು ತೀರ್ಮಾನಿಸಲಿ
ಸರ್ಕಾರ ಮಕ್ಕಳು ಮತ್ತು ಶಾಲೆ ವಿಚಾರದಲ್ಲಿ ಪ್ರತಿ ನಿಮಿಷವೂ ಗೊಂದಲದಲ್ಲಿದೆ. ನಮ್ಮ ಶಿಕ್ಷಣ ಸಚಿವರು ಸಿಎಂ, ಶಾಲೆ ಆಡಳಿತ ಮಂಡಳಿ, ಪೋಷಕರ ಜತೆ ಮಾತನಾಡುವುದಾಗಿ ಹೇಳುತ್ತಾರೆ. ಸರ್ಕಾರ ಮೊದಲು ಗೊಂದಲ ನಿವಾರಣೆ ಮಾಡಬೇಕು. ಇಷ್ಟು ದಿನ ಸಂಸ್ಥೆಗಳು ನಡೆಯುತ್ತಿರಲಿಲ್ಲ. ಶಿಕ್ಷಕರಿಗೂ ಸಂಬಳ ನೀಡಬೇಕು. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಶಾಲೆ ತೆರೆಯಬೇಕೋ ಬೇಡವೋ ಎಂಬುದರ ಬಗ್ಗೆ ತಜ್ಞರ ಜತೆ ಚರ್ಚೆ ಮಾಡಬೇಕು. ರಾಜಕಾರಣಿಗಳು ಏನೇ ಅಭಿಪ್ರಾಯ ಹೇಳಿದರೂ ಅಂತಿಮವಾಗಿ ವಿದ್ಯಾರ್ಥಿಗಳು, ಶಾಲೆಗಳು ಹಾಗೂ ಶಿಕ್ಷಕರ ಹಿತ ಹಾಗೂ ಭವಿಷ್ಯ ಕಾಯಬೇಕು. ನಾವು ರಾಜಕೀಯ ಪಕ್ಷವಾಗಿ ನಮ್ಮ ಅಭಿಪ್ರಾಯ ಹೇಳುವುದಕ್ಕಿಂತ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಹಾಗೂ ಆ ತೀರ್ಮಾನದಲ್ಲಿ ಸ್ಪಷ್ಟತೆ ಇರಬೇಕು. ಪೋಷಕನಾಗಿ, ಶಿಕ್ಷಣ ಸಂಸ್ಥೆಯ ಭಾಗವಾಗಿ ನನಗೂ ಆತಂಕಗಳಿವೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬ ಗೊಂದಲ ಇದೆ ಎಂದರು.
ಕುಮಾರಸ್ವಾಮಿ ಈಗಲೂ ಸ್ನೇಹಿತರೆ
ಕುಮಾರಸ್ವಾಮಿ ಅವರು ಈ ಹಿಂದೆ ಮಾತ್ರ ನನ್ನ ಸ್ನೇಹಿತರಾಗಿರಲಿಲ್ಲ. ಈಗಲೂ ಅವರು ನನ್ನ ದೋಸ್ತಿಯೇ. ಮುಂದೆಯೂ ಇರುತ್ತಾರೆ. ಮಾಧ್ಯಮದವರು ಯಾವ ಆಧಾರದ ಮೇಲೆ ಹಳೇ ದೋಸ್ತಿ ಅಂತಾ ಹೇಳುತ್ತೀರಿ ? ನೀವು ಇಬ್ಬರ ಮಧ್ಯೆ ದ್ವೇಷ ಇದೆ ಅಂತೀರಿ ? ನಾನು ದ್ವೇಷ ಮಾಡುವ ಕಾಲ ಹೋಯ್ತು. ಜೆಡಿಎಸ್ ಕೂಡ ಒಂದು ಪಕ್ಷ. ಅದರದೇ ಆದ ಸಂವಿಧಾನ, ಸಿದ್ಧಾಂತ ಇದೆ. ಅವರು ಹಾಗೂ ಬಿಜೆಪಿ ಹೇಗೆ ಒಪ್ಪಂದ ಮಾಡಿಕೊಳ್ಳುತ್ತಾರೋ ಅದು ಅವರಿಗೆ ಬಿಟ್ಟದ್ದು. ಬಿಜೆಪಿಯವರು ಅವರನ್ನು ಯಾವ ರೀತಿ ನೋಡುತ್ತಾರೋ ಗೊತ್ತಿಲ್ಲ. ನಾವಂತೂ ಆ ಪಕ್ಷವನ್ನು ಗೌರವದಿಂದ ನೋಡುತ್ತೇವೆ. ನಾನು ಬೇರೆ ಪಕ್ಷಗಳ ಬಗ್ಗೆ ಮಾತನಾಡಲ್ಲ. ಅವರು ಅನೇಕ ಬಾರಿ ಸರ್ಕಾರ ಮಾಡಿದ್ದಾರೆ. ನಾವು ಅವರ ಜತೆ ಸರ್ಕಾರ ಮಾಡಿದ್ದೇವೆ. ಅವರ ಬಗ್ಗೆ ಕೀಳಾಗಿ ಮಾತನಾಡಲು ನಾನು ಇಚ್ಚಿಸುವುದಿಲ್ಲ ಎಂದು ಡಿಕೆಶಿ ತಿಳಿಸಿದರು.