×
Ad

ಶಾಲೆ ಬಂದ್‍ನಿಂದ ಬಾಲ ಕಾರ್ಮಿಕರ ಸಂಖ್ಯೆ ದಿನೇ ದಿನೇ ಹೆಚ್ಚಳ: ಸಚಿವ ಸುರೇಶ್ ಕುಮಾರ್

Update: 2020-12-23 16:57 IST

ಬೆಂಗಳೂರು, ಡಿ.23: ಕೊರೋನ ಸೋಂಕಿನ ಭೀತಿಯಿಂದ ಶಾಲಾ-ಕಾಲೇಜು ಮುಚ್ಚಿದ ಕಾರಣಕ್ಕಾಗಿ ರಾಜ್ಯದಲ್ಲಿ ಬಾಲಕಾರ್ಮಿಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‍ ಕುಮಾರ್ ಆತಂಕ ವ್ಯಕ್ತಪಡಿಸಿದರು.

ಬುಧವಾರ ಇಲ್ಲಿನ ಶಿವಾಜಿನಗರದ ವಿ.ಕೆ.ಒಬೇದುಲ್ಲಾ ಸರಕಾರಿ ಶಾಲೆಯ ಆಡಳಿತ ಮಂಡಳಿಯೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲೆಗಳು ರಜೆ ಇದ್ದ ಕಾರಣವನ್ನೇ ಗುರಿಯಾಗಿಸಿಕೊಂಡು ಹಳ್ಳಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅಪ್ರಾಪ್ತ ಬಾಲಕರನ್ನು ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ಮತ್ತೊಂದೆಡೆ ಬಾಲ್ಯವಿವಾಹ ಪ್ರಕರಣಗಳು ಗಣನೀಯವಾಗಿ ಏರಿಕೆ ಆಗಿವೆ ಎಂದರು.

ಸಮಾಜಕ್ಕೆ ಒಂದು ಸಮುದಾಯ ಎಂದಿಗೂ ಸಮಸ್ಯೆಯಾಗಬಾರದು. ನಾವು ಗುಣಮಟ್ಟ ಶಿಕ್ಷಣ ನೀಡಿದರೆ, ಮುಸ್ಲಿಮ್ ಜನಾಂಗದ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮಾತುಗಳನ್ನಾಡಿದ್ದು, ಮುಸ್ಲಿಮರು ಒಂದು ಕೈಯಲ್ಲಿ ಪವಿತ್ರ ಕುರಾಅನ್, ಮತ್ತೊಂದು ಕೈಯಲ್ಲಿ ಕಂಪ್ಯೂಟರ್ ಹಿಡಿಯುವಂತೆ ಆಗಬೇಕಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಅಗತ್ಯ ಸಹಾಯ: ಶಿವಾಜಿನಗರದ ಸರಕಾರಿ ವಿಕೆ ಒಬೇದುಲ್ಲಾ ಶಾಲೆ ಹಾಗೂ ಪಿಯು ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳನ್ನು ಹೆಚ್ಚಿಸಲು ಬೇಕಾದ ಎಲ್ಲ ಸಹಕಾರವೂ ನೀಡಲಾಗುವುದು. ಇಲ್ಲಿನ ಕಟ್ಟಡ, ಪರಿಸರ ಸ್ನೇಹಿ ವಾತಾವರಣವನ್ನು ಸಂಪೂರ್ಣ ಬಳಕೆ ಮಾಡಿ, ಮತ್ತಷ್ಟು ಮಕ್ಕಳಿಗೆ ಜ್ಞಾನ ನೀಡುವ ಕೆಲಸ ಮಾಡೋಣ ಎಂದು ನುಡಿದರು.

ಹಝ್ರತ್ ಹಮೀದ್ ಶಾ ಹಾಗೂ ಹಝ್ರತ್ ಮುಹೀಬ್ ದರ್ಗಾ ಸಮಿತಿ ಅಧ್ಯಕ್ಷ ಜಿ.ಎ.ಬಾವಾ ಮಾತನಾಡಿ, ಶಾಲೆಯನ್ನು ನಿರ್ವಹಿಸಲು ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ವಕ್ಫ್ ಬೋರ್ಡ್ ಅಧೀನದಲ್ಲಿರುವ ನಮ್ಮ ಸಂಸ್ಥೆಯು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವುದರಿಂದ, ಮಕ್ಕಳ ಭವಿಷ್ಯಕ್ಕಾಗಿ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇವೆ ಎಂದರು.

ಈ ಶಾಲೆಗೆ ಶಿಕ್ಷಕರ ಸಂಖ್ಯೆ ಹೆಚ್ಚಳ ಮಾಡಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳ ಮನವಿ ಪತ್ರವನ್ನು ಸಚಿವರಿಗೆ ತಲುಪಿಸಿದ್ದು, ಹಂತ ಹಂತವಾಗಿ ಎಲ್ಲವನ್ನು ಈಡೇರಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಜತೆಗೆ, ಹಮೀದ್ ಶಾ ದರ್ಗಾ ಸಮಿತಿಯೂ ಸಮುದಾಯದ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ವಕ್ಫ್ ಮಂಡಳಿಯ ಸದಸ್ಯ ಎನ್.ಕೆ.ಎಂ.ಶಾಫಿ ಸಅದಿ, ಹಮೀದ್ ಶಾ ದರ್ಗಾ ಸಮಿತಿಯ ಸದಸ್ಯರು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News