ರೈತರ ಧರಣಿ ಎಂಟನೇ ದಿನಕ್ಕೆ: ಹೋರಾಟಕ್ಕೆ ಹಮಾಲಿ ಕಾರ್ಮಿಕರು ಸೇರಿ ಹಲವು ಸಂಘಟನೆಗಳ ಬೆಂಬಲ
ಬೆಂಗಳೂರು, ಡಿ.23: ರೈತ ವಿರೋಧಿ ಭೂ ಸುಧಾರಣಾ ಕಾಯ್ದೆಗಳನ್ನು ವಿರೋಧಿಸಿ ಹಾಗೂ ರಾಜ್ಯ ಸರಕಾರದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ಧರಣಿ ಎಂಟನೇ ದಿನಕ್ಕೆ ಕಾಲಿಟ್ಟಿದ್ದು ಬುಧವಾರ ಹಮಾಲಿ ಕಾರ್ಮಿಕರು ಸೇರಿದಂತೆ ಹಲವು ಸಂಘಟನೆಗಳು ಧರಣಿಗೆ ಬೆಂಬಲ ಸೂಚಿಸಿದವು.
ಸಿಐಟಿಯು ನೇತೃತ್ವದ ಎಪಿಎಂಸಿ ಯಶವಂತಪುರ ಮಾರುಕಟ್ಟೆ ಹಮಾಲಿ ಕಾರ್ಮಿಕರು, ಎಪಿಎಂಸಿ ಯಾರ್ಡ್ ಮಂಡಿ ಹಮಾಲರ ಸಂಘ, ಮಹಿಳಾ ಹಮಾಲಿ ಕಾರ್ಮಿಕರು, ದಲಿತ ಹಕ್ಕುಗಳ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ, ಕಟ್ಟಡ ಕಾರ್ಮಿಕ ಸಂಘಟನೆ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿದ್ದವು.
ಈ ಸಂದರ್ಭದಲ್ಲಿ ಮಾತನಾಡಿದ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಮಹಾಂತೇಶ್, ಜನರಿಗೆ ಹಲವಾರು ಭರವಸೆಗಳನ್ನು ನೀಡುತ್ತಾ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಇದೀಗ, ಜನರಿಗೆ ಅನ್ಯಾಯ ಮಾಡಲು ಮುಂದಾಗಿದ್ದಾರೆ. ಜನರನ್ನು ಮರಳು ಮಾಡುತ್ತಾ, ಕೃಷಿಕರ ಮೇಲೆ ಬಂಡೆ ಎಳೆಯಲು ಹೊರಟಿದ್ದಾರೆ ಎಂದು ಆಪಾದಿಸಿದರು.
ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳು ಎರಡೂ ಹಮಾಲಿಗಳಾಗಿ ಕೆಲಸ ಮಾಡುತ್ತಿರುವವರ ಮೇಲೆ ಪರಿಣಾಮ ಬೀರಲಿವೆ. ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಹಮಾಲಿ ಕಾರ್ಮಿಕರ ಉದ್ಯೋಗವನ್ನು ಈ ಕಾಯ್ದೆಗಳು ಕಸಿಯಲಿವೆ. ಅಲ್ಲದೆ, ಹಲವಾರು ಸೌಲಭ್ಯಗಳಿಂದ ವಂಚನೆಗೊಳಪಡಿಸುತ್ತದೆ. ಇದು ಹಮಾಲಿಗಳ ವಿರೋಧಿಯಾಗಿದೆ ಎಂದು ಹೇಳಿದರು.
ಯಶವಂತಪುರ ಎಪಿಎಂಸಿ ಯಾರ್ಡ್ ಮಂಡಿ ಹಮಾಲರ ಸಂಘದ ಅಧ್ಯಕ್ಷ ಮೂರ್ತಿ ಮಾತನಾಡಿ, ಎಪಿಎಂಸಿ ಕಾಯ್ದೆ ಜಾರಿಯಿಂದ ಕಾರ್ಮಿಕರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ರೈತರಿಗೂ ತೊಂದರೆಯಾಗಲಿದೆ. ಅಲ್ಲದೆ, ಇಷ್ಟು ವರ್ಷಗಳ ಕಾಲ ಎಪಿಎಂಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು ಮುಂದಿನ ದಿನಗಳಲ್ಲಿ ಬೀದಿಗೆ ಬಂದರೆ ನಮ್ಮ ಪರಿಸ್ಥಿತಿ ಏನಾಗಬೇಕು ಎಂದು ಆತಂಕ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಬಂಡವಾಳಶಾಹಿ ಪರ ಧೋರಣೆಗಳನ್ನು ಅನುಸರಿಸುತ್ತಿದೆ. ದುರ್ಬಲ ವರ್ಗಗಳ ಹಕ್ಕು ನಿರಾಕರಿಸುವ ಕಾಯ್ದೆಗಳನ್ನು ಮಾಡುತ್ತಿದೆ. ನೋಟು ರದ್ದು, ಜಿಎಸ್‍ಟಿ ರೀತಿಯಲ್ಲಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನೇ ಈ ಕೃಷಿ ಕಾಯ್ದೆಗಳು ಹೊಂದಿವೆ. ಇದರಿಂದ ಕೋಟ್ಯಂತರ ಜನರ ಬದುಕು ದಿವಾಳಿಯಾಗಲಿದೆ. ಇದರ ವಿರುದ್ಧ ದೆಹಲಿಯಲ್ಲಿ ಸುಮಾರು 40 ಜನ ಹೋರಾಟ ನಿರತ ರೈತರು ಹುತಾತ್ಮರಾಗಿದ್ದರೂ ಅಂಜದೇ ಹೋರಾಡುತ್ತಿರುವ ರೈತರ ಬೆಂಬಲಕ್ಕೆ ಇಡೀ ದೇಶದ ಶ್ರಮಿಕರು ನಿಲ್ಲಬೇಕು ಎಂದು ಕರೆ ನೀಡಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷೆ ಲೀಲಾವತಿ, ಮಂಡಿ ಹಮಾಲರ ಸಂಘದ ಕಾರ್ಯದರ್ಶಿ ಕುಮರೇಷನ್, ಉಪಾಧ್ಯಕ್ಷ ವೇಲು ಮುರುಗನ್, ಮಹಿಳಾ ಹಮಾಲಿ ಕಾರ್ಮಿಕರ ನಾಯಕಿ ತಂಗಮ್ಮ, ಕಟ್ಟಡ ಕಾರ್ಮಿಕ ಸಂಘಟನೆ ಜಿಲ್ಲಾ ಅಧ್ಯಕ್ಷ ವೀರಮಣಿ, ದಲಿತ ಹಕ್ಕುಗಳ ಹೋರಾಟ ಸಮಿತಿ ಮುಖಂಡ ಶರಣಪ್ಪ, ಕೆಪಿಆರ್‍ಎಸ್‍ನ ಟಿ.ಯಶವಂತ ಸೇರಿದಂತೆ ಹಲವರಿದ್ದರು.