ತೈಲ ಬೆಲೆ ಇಳಿಸಲು ಆಗ್ರಹ: ಆಮ್‍ಆದ್ಮಿಯಿಂದ ಬೈಕ್ ತಳ್ಳುವ ಮೂಲಕ ಪ್ರತಿಭಟನೆ
ಬೆಂಗಳೂರು, ಡಿ.23: ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸುಂಕವನ್ನು ಇಳಿಸಬೇಕು ಎಂದು ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದಲ್ಲಿ ಬೈಕ್ ತಳ್ಳುವ ಮೂಲಕ ಪ್ರತಿಭಟನೆ ನಡೆಸಿದರು.
ರಾಜ್ಯ ಮತ್ತು ಕೇಂದ್ರ ಸರಕಾರಗಳು ಸಾಮಾನ್ಯ ಜನರ ನೆರವಿಗೆ ನಿಲ್ಲದೆ ತನ್ನ ಪಾಲಿನ ತೆರಿಗೆ ಹೆಚ್ಚಳ ಮಾಡಿ ಗಾಯದ ಮೇಲೆ ಬರೆ ಎಳೆದಿವೆ. ಈ ಎರಡೂ ಸರಕಾರಗಳು ಜನ ಸಾಮಾನ್ಯರ ಕತ್ತು ಹಿಸುಕಿ ಕೊಲ್ಲಲಾಗುತ್ತಿದೆ. ಭಾರತದ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ಬೆಲೆಗೆ ಪೆಟ್ರೋಲ್ ಬೆಲೆ ಹೆಚ್ಚಳ ಮಾಡಿ ಜನರನ್ನು ದೋಚಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನಗರ ಅಧ್ಯಕ್ಷ ಮೋಹನ್ ದಾಸರಿ, ಕಳೆದ ವರ್ಷ ಇದೇ ಹೊತ್ತಿನಲ್ಲಿ ಕಚ್ಚಾ ತೈಲದ ಬೆಲೆ 62 ಡಾಲರ್ ಇತ್ತು, ಈಗ 40 ಡಾಲರ್ ಗೆ ಇಳಿದಿದೆ. ಆದರೂ ಪೆಟ್ರೋಲ್ ಬೆಲೆ 86 ರೂಪಾಯಿಗಿಂತ ಹೆಚ್ಚಿದೆ. ಪ್ರಗತಿ ಸಾಧಿಸಿ ಮುಂದಕ್ಕೆ ಹೋಗುತ್ತಿದ್ದ ದೇಶವನ್ನು ಮೋದಿ- ಅಂಬಾನಿ, ಅದಾನಿ ಜೋಡಿ ಹಿಂದಕ್ಕೆ ತಳ್ಳುತ್ತಿದೆ ಎಂದರು.
ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಪೆಟ್ರೋಲ್‍ಅನ್ನು 40 ರೂ.ಗೆ ನೀಡಬಹುದು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಅಲ್ಲದೇ ಕಚ್ಚಾ ತೈಲವನ್ನು ಸಂಸ್ಕರಿಸಲು ಕೇವಲ 30 ರೂಪಾಯಿ ಖರ್ಚಾಗುತ್ತದೆ ಎಂದಿದ್ದಾರೆ. ಹಾಗಾದರೆ ಸರಕಾರಕ್ಕೂ ಕಳ್ಳನಿಗೂ ಏನು ವ್ಯತ್ಯಾಸ ಎಂದು ಪ್ರಶ್ನಿಸಿದ ಅವರು, ಮೋದಿಗೆ ಜನರ ಪ್ರತಿಭಟನೆ ಕಣ್ಣಿಗೆ ಕಾಣಲ್ಲ. ಹೀಗಾಗಿ, ರಾಜ್ಯ ಸರಕಾರ ಕೂಡಲೇ ತನ್ನ ಪಾಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಎಎಪಿ ಸಹ ಸಂಚಾಲಕ ವಿಜಯ್ ಶರ್ಮ, ಮಾಧ್ಯಮ ಸಂಚಾಲಕ ಜಗದೀಶ್ ಸದಂ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಉಪಾಧ್ಯಕ್ಷರಾದ ಸುರೇಶ್ ರಾಥೋಡ್ ಸೇರಿದಂತೆ ಹಲವರಿದ್ದರು.