ಮೇಲ್ಮನೆಯಲ್ಲಿ ಗದ್ದಲ: ಸಭಾಪತಿ ನೋಟಿಸ್‍ಗೆ ಉತ್ತರಿಸಿದ ಪರಿಷತ್ ಕಾರ್ಯದರ್ಶಿ ಹೇಳಿದ್ದೇನು ?
ಬೆಂಗಳೂರು, ಡಿ.23: ಇತ್ತೀಚಿಗೆ ಮೇಲ್ಮನೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಕಾರಣ ನೀಡುವಂತೆ ಸಭಾಪತಿ ಪ್ರತಾಪಚಂದ್ರಶೆಟ್ಟಿ ನೀಡಿದ್ದ ನೋಟಿಸ್‍ಗೆ, ಪರಿಷತ್‍ನ ಕಾರ್ಯದರ್ಶಿ ಮಹಾಲಕ್ಷ್ಮಿ ಪತ್ರದ ಮೂಲಕ ಉತ್ತರ ನೀಡಿದ್ದಾರೆ. ಮೂರು ಪುಟಗಳ ಪತ್ರದ ಮೂಲಕ ಸದನದಲ್ಲಿ ನಡೆದ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದ್ದು, ಈ ಪ್ರಕರಣದಲ್ಲಿ ತಮ್ಮಿಂದ ಯಾವುದೇ ತಪ್ಪಾಗಿಲ್ಲ ಎನ್ನುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಸದನದ ಬೆಲ್ ಹೊಡೆಯುತ್ತಿರುವಾಗಲೇ ಉಪ ಸಭಾಪತಿ ಧರ್ಮೇಗೌಡರು ಸಭಾಪತಿ ಸ್ಥಾನದ ಮೇಲೆ ಕುಳಿತಿರುವುದರ ಹಿಂದೆ ಷಡ್ಯಂತ್ರ ಇದೆ. ಅದರಲ್ಲಿ ಕಾರ್ಯದರ್ಶಿಗಳೂ ಭಾಗಿಯಾಗಿರುವ ಬಗ್ಗೆ ಸಭಾಪತಿ ಅನುಮಾನ ವ್ಯಕ್ತಪಡಿಸಿ ಸೂಕ್ತ ಮಾಹಿತಿ ನೀಡುವಂತೆ ನೊಟೀಸ್ ನೀಡಿದ್ದರು.
ಉಪ ಸಭಾಪತಿಗಳು ಸಭಾಪತಿ ಪೀಠದ ಮೇಲೆ ಕುಳಿತುಕೊಂಡಾಗ ಅವರಿಗೆ ಸಭಾಪತಿ ಇರುವಾಗ ತಾವು ಕೂರಬೇಕೊ ಬೇಡವೋ ಎನ್ನುವ ಮಾಹಿತಿಯ ಪತ್ರ ನೀಡಿರುವುದಾಗಿ ಕಾರ್ಯದರ್ಶಿ ಸಭಾಪತಿ ನೋಟಿಸ್‍ಗೆ ಸ್ಪಷ್ಟೀಕರಣ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸದನದಲ್ಲಿ ಗಲಾಟೆ ನಡೆದ ಸಂದರ್ಭದಲ್ಲಿ ಸಚಿವರು ಹಿರಿಯ ಸದಸ್ಯರು ಹಾಜರಿದ್ದರು ಎಂಬ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಆ ಸಂದರ್ಭದಲ್ಲಿ ತಮ್ಮಿಂದ ಯಾವುದೇ ಲೋಪವಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.