ಗುರು ರಾಘವೇಂದ್ರ ಬ್ಯಾಂಕ್ ಹಗರಣ: ಆಸ್ತಿ ಮುಟ್ಟುಗೋಲಿಗೆ ಹೈಕೋರ್ಟ್ ಆದೇಶ

Update: 2020-12-23 15:09 GMT

ಬೆಂಗಳೂರು, ಡಿ.23: ಗುರು ರಾಘವೇಂದ್ರ ಬ್ಯಾಂಕ್‍ಗೆ ಸೇರಿದ ಎಲ್ಲ ಆಸ್ತಿಗಳನ್ನು ಮುಂದಿನ ಜ.8ರೊಳಗೆ ಜಪ್ತಿ ಮಾಡುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿಸಿದೆ.

ಬ್ಯಾಂಕ್ ಹಗರಣದ ತನಿಖೆ ಕೋರಿ ಕೆ.ಆರ್. ನರಸಿಂಹಮೂರ್ತಿ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಠೇವಣಿದಾರರ ಹಿತದೃಷ್ಟಿಯಿಂದ ಬ್ಯಾಂಕ್‍ನ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರಕಾರ ಕೆಪಿಐಡಿ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು. ಈ ವರದಿಯನ್ನು ಜ.8ರೊಳಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿತು.

ಅಲ್ಲದೇ, ಈ ಹಿಂದೆ ಆರ್‍ಬಿಐ ಸಲಹೆ ಮೇರೆಗೆ ಬ್ಯಾಂಕ್‍ಗೆ ಹೊಸ ಆಡಳಿತಾಧಿಕಾರಿ ನೇಮಿಸಲಾಗಿತ್ತು. ಅವರಿಗೆ ಬ್ಯಾಂಕ್‍ನ ಬಾಕಿ ಸಾಲ ವಸೂಲಿ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ವರದಿ ನೀಡಲು ನ.20ರಂದು ನಿರ್ದೇಶಿಸಲಾಗಿತ್ತು. ಆದರೆ, ಅಧಿಕಾರಿ ಈವರೆಗೆ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಿರುವ ಕುರಿತು ಯಾವುದೇ ವರದಿ ನೀಡಿಲ್ಲ. ಹೀಗಾಗಿ ಆಡಳಿತಾಧಿಕಾರಿ ಮುಂದಿನ ವಿಚಾರಣೆ ವೇಳೆ ತಪ್ಪದೇ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿತು.

ಇನ್ನು, ಆರ್‍ಬಿಐ ಆಡಳಿತಾಧಿಕಾರಿ ಹುದ್ದೆಗೆ ಇಬ್ಬರು ನಿವೃತ್ತ ಬ್ಯಾಂಕ್ ಅಧಿಕಾರಿಗಳನ್ನು ಹೆಸರಿಸಿತ್ತು. ಅವರಲ್ಲಿ ಒಬ್ಬರನ್ನು ಈಗಾಗಲೇ ಬ್ಯಾಂಕ್‍ಗೆ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಮತ್ತೊಬ್ಬರನ್ನು ಗುರು ರಾಘವೇಂದ್ರ ಕೋ-ಆಪರೇಟಿವ್ ಸೊಸೈಟಿಗೆ ಆಡಳಿತಾಧಿಕಾರಿಯಾಗಿ ನೇಮಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತು.

ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಹಲವು ನಿರ್ದೇಶನಗಳನ್ನು ನೀಡಿದ್ದು, ಅವುಗಳನ್ನು ಪಾಲಿಸುವಲ್ಲಿ ರಾಜ್ಯ ಸರಕಾರ ವಿಫಲವಾಗುತ್ತಿದೆ. ಹೀಗಾಗಿ ರಾಜ್ಯ ಸರಕಾರ ವಿಳಂಬ ಮಾಡದೆ ಕೋರ್ಟ್ ನಿರ್ದೇಶನಗಳ ಪಾಲನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸದ ಕಾರಣಕ್ಕಾಗಿ ನ್ಯಾಯಾಂಗ ನಿಂದನೆ ಅಡಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ವಿಚಾರಣೆಯನ್ನು ಜ.11ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News