ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ನಿಷೇಧಿಸಲು ಕೋರಿದ 5 ತಿಂಗಳ ಮಗು!: ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-12-24 15:47 GMT

ಬೆಂಗಳೂರು, ಡಿ.24: ನಗರದ ಕಬ್ಬನ್ ಪಾರ್ಕ್ ಒಳಗಡೆ ವಾಹನಗಳ ಸಂಚಾರ ನಿಷೇಧಿಸುವಂತೆ ಕೋರಿ 5 ತಿಂಗಳ ಮಗುವಿನ ಪರವಾಗಿ ಸಲ್ಲಿಸಿದ್ದ ಪಿಐಎಲ್ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಪಾರ್ಕ್ ಒಳಗೆ ವಾಹನ ಸಂಚಾರ ನಿಷೇಧಿಸುವಂತೆ ಕೋರಿ ನಗರದ 5 ತಿಂಗಳ ಮಗುವಿನ ಪರವಾಗಿ ವಕೀಲರಾದ ಅಂಜನ್ ದೇವ್ ನಾರಾಯಣ ಹಾಗೂ ಅನ್ನಪೂರ್ಣ ಸೀತಾರಾಮ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠ, ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಂಚಾರ ವಿಭಾಗದ ಹೆಚ್ಚುವರಿ ನಗರ ಪೊಲೀಸ್ ಆಯುಕ್ತ ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.

ಅರ್ಜಿದಾರ ಮಗುವಿನ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ, ತಾನು ಹಲವು ದಿನಗಳಿಂದ ಪೋಷಕರ ಜೊತೆ ಕಬ್ಬನ್ ಪಾರ್ಕ್‍ಗೆ ವಿಹಾರಕ್ಕೆ ಬರುತ್ತಿದ್ದೇನೆ. ಆದರೆ, ಕಬ್ಬನ್ ಪಾರ್ಕ್ ಒಳಗೆ ವಾಹನಗಳ ಸಂಚಾರದಿಂದಾಗಿ ಕಾರ್ಬನ್ ಡೈಯಾಕ್ಸೈಡ್ ಹೆಚ್ಚಾಗಿದೆ. ಇದರಿಂದಾಗಿ ತನ್ನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಾಗೆಯೇ, ಮಾಲಿನ್ಯ ರಹಿತ ವಾತಾವರಣದಲ್ಲಿ ಆರೋಗ್ಯಯುತವಾಗಿ ಜೀವಿಸುವ ತನ್ನ ಸಂವಿಧಾನಬದ್ಧ ಹಕ್ಕು ಉಲ್ಲಂಘನೆಯಾಗುತ್ತಿದೆ. ಹೀಗಾಗಿ, ಪಾರ್ಕ್ ಒಳಗೆ ವಾಹನ ಸಂಚಾರ ನಿಷೇಧಿಸಲು ಸರಕಾರಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಮನವಿ ಮಾಡಲಾಗಿದೆ.

ಲಾಕ್ ಡೌನ್ ಸಂದರ್ಭದಲ್ಲಿ ಪಾರ್ಕ್ ಒಳಗೆ ವಾಹನ ಸಂಚಾರವನ್ನು ಸರಕಾರ ನಿಷೇಧಿಸಿತ್ತು. ಅನ್ ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ಸಪ್ಟೆಂಬರ್ ತಿಂಗಳಲ್ಲಿ ಮತ್ತೆ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ವಾಹನ ಸಂಚಾರ ನಿರ್ಬಂಧಿಸಿದ್ದ ವೇಳೆ ಪಾರ್ಕ್ ಒಳಗೆ ಧೂಳು ಹಾಗೂ ಹೊಗೆ ಕಡಿಮೆ ಕಡಿಮೆಯಾಗಿ ಗಿಡ ಮರಗಳ ಸ್ವಚ್ಛಗೊಂಡು ಹೊಳೆಯುತ್ತಿದ್ದವು. ಜತೆಗೆ ಪಾರ್ಕ್ ಒಳಗಿನ ಒಟ್ಟಾರೆ ವಾತಾವರಣ ಚೇತರಿಕೆ ಕಂಡಿತ್ತು. ಹೀಗಾಗಿ ಪಾರ್ಕ್ ಒಳಗೆ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂಬುದು ಅರ್ಜಿದಾರ ಮಗುವಿನ ಕೋರಿಕೆ.

ಈ ಹಿಂದೆ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಪಾರ್ಕ್ ಒಳಗೆ ವಾಹನಗಳ ಸಂಚಾರವನ್ನು ನಿಷೇಧಿಸುವಂತೆ ಕೋರಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ, ಅ.22ರಂದು ಅರ್ಜಿದಾರರ ಕೋರಿಕೆಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News