ಆರ್‌ಟಿಐ ಕಾಯ್ದೆಯೆಂಬ ಸದ್ಯದ ವಿರೋಧ ಪಕ್ಷ

Update: 2020-12-25 05:12 GMT

ಆರ್‌ಟಿಐ ಕಾಯ್ದೆಯನ್ನು ಜಾರಿಗೆ ತಂದಿರುವುದೇ ಯುಪಿಎ ಸರಕಾರ. ಈ ಕಾಯ್ದೆ ತನ್ನ ವಿರುದ್ಧವೇ ಬಳಸಲ್ಪಡುತ್ತದೆ ಎನ್ನುವುದು ತಿಳಿದೂ ಈ ಕಾಯ್ದೆಯನ್ನು ಜಾರಿಗೊಳಿಸಲು ಯುಪಿಎ ಹಿಂಜರಿಯಲಿಲ್ಲ. ಆರ್‌ಟಿಐ ಕಾಯ್ದೆಯಿಂದಾಗಿ ಪ್ರಜಾಸತ್ತೆಗೆ ಆನೆ ಬಲಬಂತು. ವಿವಿಧ ಇಲಾಖೆಗಳನ್ನು ಪ್ರಶ್ನಿಸುವ, ಮಾಹಿತಿ ಪಡೆಯುವ, ಆ ಮೂಲಕ ಭ್ರಷ್ಟಾಚಾರವನ್ನು ಬಹಿರಂಗಗೊಳಿಸುವ ಹಕ್ಕು ಶ್ರೀಸಾಮಾನ್ಯನದಾಯಿತು. ಯುಪಿಎ ಅವಧಿಯಲ್ಲಿ ನಡೆದ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಇದೇ ಆರ್‌ಟಿಐ ಕಾಯ್ದೆ ಬಹಿರಂಗ ಪಡಿಸಿತು ಎನ್ನುವುದನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಬೇಕಾಗಿದೆ. ಅಷ್ಟರಮಟ್ಟಿಗೆ ಪ್ರಜಾಸತ್ತೆಯ ಕುರಿತಂತೆ ಯುಪಿಎ ಸರಕಾರಕ್ಕೆ ಕಾಳಜಿಯಿತ್ತು. ಆದರೆ ಇಂದು ಮೋದಿ ನೇತೃತ್ವದ ಬಿಜೆಪಿ ಸರಕಾರ ಹಂತ ಹಂತವಾಗಿ ಆರ್‌ಟಿಐಯನ್ನು ದುರ್ಬಲಗೊಳಿಸುತ್ತಿದೆ. ಹಲವು ಮಾಹಿತಿಗಳನ್ನು ಆರ್‌ಟಿಐ ಮೂಲಕ ನೀಡುವುದಕ್ಕೆ ಸರಕಾರವೇ ಹಿಂಜರಿಯುತ್ತಿದೆ. ಇವುಗಳ ನಡುವೆಯೂ ಆರ್‌ಟಿಐ ಕಾರ್ಯಕರ್ತರು ತಮ್ಮ ಜೀವವನ್ನು ಒತ್ತೆಯಿಟ್ಟು ಮಾಹಿತಿಗಳನ್ನು ಪಡೆಯುತ್ತಿದ್ದಾರೆ. ಪ್ರಜಾಸತ್ತೆ ದುರ್ಬಲಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಆರ್‌ಟಿಐ ಕಾಯ್ದೆಗೆ ಇನ್ನಷ್ಟು ಬಲ ನೀಡಿದ್ದೇ ಆದರೆ, ಅದು ಪ್ರಭುತ್ವದ ವಿರುದ್ಧ ಪ್ರಬಲ ಅಸ್ತ್ರವಾಗುವುದರಲ್ಲಿ ಎರಡು ಮಾತಿಲ್ಲ. ಈ ದೇಶದಲ್ಲಿ ಪ್ರತಿ ವರ್ಷವೂ ಸುಮಾರು 55 ಲಕ್ಷ ಆರ್‌ಟಿಐ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಆದರೂ ಬಿಹಾರ, ಗೋವಾ,ಜಾರ್ಖಂಡ್, ರಾಜಸ್ಥಾನ, ತ್ರಿಪುರ ಹಾಗೂ ಉತ್ತರಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಮಾಹಿತಿ ಆಯೋಗಕ್ಕೆ ವರಿಷ್ಠರೇ ಇಲ್ಲದಿರುವುದು ಆತಂಕಕಾರಿಯಾಗಿದೆ. ಸಲ್ಲಿಕೆಯಾಗುವ ಬಹಳಷ್ಟು ಆರ್‌ಟಿಐ ಅರ್ಜಿಗಳಿಗೆ ಉತ್ತರ ಕೂಡಾ ದೊರೆಯುತ್ತಿಲ್ಲವೆಂದು ಗುಜರಾತ್‌ನ ಆರ್‌ಟಿಐ ಹಕ್ಕುಗಳ ಸಂಘಟನೆ ಮಾಹಿತಿ ಅಧಿಕಾರ್ ಗುಜರಾತ್ ಪಹೇಲ್ (ಎಂಎಪಿಜಿ)ನ ಕಾರ್ಯನಿರ್ವಹಣಾ ಕಾರ್ಯದರ್ಶಿ ಪಂಕ್ತಿ ಜೋಗ್ ಹೇಳುತ್ತಾರೆ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳ ಉತ್ತರದಾಯಿತ್ವದ ಕೊರತೆ ಮಾತ್ರವೇ ಕಾರಣವಲ್ಲ. ಉತ್ತರದಾಯಿತ್ವವನ್ನು ಹೊಂದಿರುವ ಹುದ್ದೆಗಳು ಭರ್ತಿಯಾಗದೆ ಉಳಿದಿರುವುದು ಇನ್ನೊಂದು ಪ್ರಮುಖ ಕಾರಣವಾಗಿದೆ.

ಮಹೇಂದ್ರ ಜೀ ಅವರು ಬಿಹಾರದ ಖ್ಯಾತ ಆರ್‌ಟಿಐ ಕಾರ್ಯಕರ್ತ. ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಜನಜಾಗೃತಿ ಮೂಡಿಸುವ ಜೊತೆಗೆ ಕೋಸಿ ಫುಡ್ಸ್ ಹಗರಣಕ್ಕೆ ಸಂಬಂಧಿಸಿ ಬಡಜನರ ಹಕ್ಕುಗಳಿಗಾಗಿ ಹೋರಾಡಿದವರು. ಆದರೆ ಈ ಹೋರಾಟದಲ್ಲಿ ತನಗೆ ಹಲವೆಡೆಯಿಂದ ಎದುರಾಗಿರುವ ಜೀವಬೆದರಿಕೆ ಹಾಗೂ ಅಪಾಯಗಳ ನಡುವೆಯೇ ತಾನು ಜೀವನ ಸಾಗಿಸುತ್ತಿರುವುದಾಗಿ ಮಹೇಂದ್ರ ಜೀ ಹೇಳುತ್ತಾರೆ. ಭಾರತದಲ್ಲಿ ಈಗಲೂ ವಿಶಲ್‌ಬ್ಲೋವರ್ (ಹಗರಣಗಳನ್ನು ಬಯಲಿಗೆಳೆಯುವವರು)ಗಳ ಹಿತರಕ್ಷಣೆಯ ಕುರಿತಾಗಿ ಯಾವುದೇ ನೀತಿಗಳನ್ನು ರೂಪಿಸಲಾಗಿಲ್ಲ. ಆಡಳಿತದ ವಿರುದ್ಧ ಧ್ವನಿಯೆತ್ತುವವರನ್ನು ರಕ್ಷಿಸುವ ವಿಷಯದಲ್ಲಿ ದೇಶ ಹಿಂದಿದೆ ಅಥವಾ ಸ್ವತಃ ಸರಕಾರಕ್ಕೆ ಅಂತಹ ಹೋರಾಟಗಾರರಿಗೆ ಜೀವ ರಕ್ಷಣೆ ನೀಡುವುದು ಬೇಕಾಗಿಲ್ಲ. ಇದು ಆರ್‌ಟಿಐ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಇರುವ ಬಹುದೊಡ್ಡ ತಡೆಯಾಗಿದೆ.

ಆರ್‌ಟಿಐ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದ ಕುರಿತ ಜಾಗೃತಿ ಕಾಲೇಜು ಹಂತದಲ್ಲೇ ನಡೆಯಬೇಕು. ಈ ಕಾಯ್ದೆಯ ಕುರಿತಂತೆ ವಿದ್ಯಾರ್ಥಿಗಳಿಗೆ ಪೂರ್ಣ ಮಾಹಿತಿಗಳನ್ನು ನೀಡುವುದು ಮಾತ್ರವಲ್ಲ, ಪ್ರಾಯೋಗಿಕವಾಗಿ ಅರ್ಜಿ ಹಾಕುವುದನ್ನು ಅವರಿಗೆ ಕಲಿಸಬೇಕು. ಪದವಿ ಶಿಕ್ಷಣದ ಸಮಯದಲ್ಲೇ ಪ್ರತಿಯೊಬ್ಬ ವಿದ್ಯಾರ್ಥಿಯು, ತಾನು ಮುಖ್ಯವೆಂದು ಭಾವಿಸುವಂತಹ ಕನಿಷ್ಠ ಒಂದು ಆರ್‌ಟಿಐ ಅರ್ಜಿಯನ್ನು ಸಲ್ಲಿಸುವಂತೆ ಪ್ರೇರೇಪಿಸಬೇಕು. ವಿದ್ಯಾರ್ಥಿಗಳು ತಮ್ಮ ಪರಿಸರದಲ್ಲಿರುವ ಸಾರ್ವಜನಿಕರಲ್ಲಿ ಆರ್‌ಟಿಐ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಬೇಕಾಗಿದೆ. ಒಟ್ಟಿನಲ್ಲಿ ಆರ್‌ಟಿಐ ಕಾಯ್ದೆ ಪಠ್ಯ ಪುಸ್ತಕದಲ್ಲಿ ಆದ್ಯತೆಯನ್ನು ಪಡೆದುಕೊಳ್ಳಬೇಕು. ಅದು ಖಂಡಿತವಾಗಿಯೂ ವಿದ್ಯಾರ್ಥಿಗಳನ್ನು ಭವಿಷ್ಯದ ನಾಯಕರಾಗಿ ರೂಪಿಸುವುದಕ್ಕೆ ಸಹಾಯ ಮಾಡಬಹುದು. ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ತಿಳಿವಳಿಕೆ ಹಾಗೂ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಮಾಧ್ಯಮಿಕ ಶಾಲಾ ಶಿಕ್ಷಣದ ಭಾಗವಾಗಿ ಅಳವಡಿಸಬೇಕು.

ಹಾಗೆಯೇ ಎಲ್ಲಾ ಎನ್‌ಜಿಓಗಳು ಹಾಗೂ ಆರ್‌ಟಿಐ ಕಾರ್ಯಕರ್ತರು ಮತ್ತು ಸಂಘಟನೆಗಳ ವಾರ್ಷಿಕ ಅಥವಾ ಅರ್ಧವಾರ್ಷಿಕ ಸಮಾವೇಶಗಳನ್ನು ನಡೆಸಬೇಕು ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವರ ಚಿಂತನೆಗಳನ್ನು ಕ್ರೋಡೀಕರಿಸಬೇಕು. ತ್ವರಿತ ವಿಚಾರಣಾ ನ್ಯಾಯಾಲಯಗಳನ್ನು ಸ್ಥಾಪಿಸುವ ಮೂಲಕ ಆರ್‌ಟಿಐ ಅಧಿಕಾರಿಗಳ ಹೊರೆಯನ್ನು ಕಡಿಮೆಗೊಳಿಸಬೇಕು. ಮಾಹಿತಿ ಹಕ್ಕು ಆಯೋಗದಲ್ಲಿ ಪ್ರತಿಪಕ್ಷದ ಸದಸ್ಯರಿಗೂ ಸ್ಥಾನ ನೀಡಬೇಕು. ಆರ್‌ಟಿಐನ ಕುರಿತ ಆಂತರಿಕ ಸಭೆಗಳ ನಡಾವಳಿಗಳು ಮತ್ತು ಅಂಕಿ-ಅಂಶಗಳು ಕೂಡಾ ಆನ್‌ಲೈನ್ ಪೋರ್ಟಲ್ ಮೂಲಕ ಪ್ರತಿಯೊಬ್ಬರಿಗೂ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಹಗರಣ ಬಯಲಿಗೆ  ೆಯುವವರ (ವಿಶಲ್ ಬ್ಲೋವರ್ಸ್‌) ಕುರಿತಾಗಿ ಸಮರ್ಪಕವಾದ ನೀತಿಯನ್ನು ಜಾರಿಗೆ ತರಬೇಕಾಗಿದೆ ಮತ್ತು ಆರ್‌ಟಿಐ ಹೋರಾಟಗಾರರಿಗೆ ರಕ್ಷಣೆಯನ್ನು ಖಾತರಿಪಡಿಸಬೇಕಾಗಿದೆ. ಹೋರಾಟಗಾರರ ಸುರಕ್ಷತೆಗಾಗಿ ಆನ್‌ಲೈನ್ ಕಣ್ಗಾವಲು ವೇದಿಕೆಯನ್ನು ರಚಿಸಬೇಕು ಹಾಗೂ ಹೆಚ್ಚುವರಿ ರಕ್ಷಣೆಗಾಗಿ ಅವರು ಸಲ್ಲಿಸುವ ಬೇಡಿಕೆಯನ್ನು ತಕ್ಷಣವೇ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ.

ಈ ಎಲ್ಲ ಸುಧಾರಣೆಗಳನ್ನು ತಂದರೆ, ಭವಿಷ್ಯದಲ್ಲಿ ಸರಕಾರದ ಪ್ರಬಲ ವಿರೋಧ ಪಕ್ಷವಾಗಿ ಶ್ರೀಸಾಮಾನ್ಯರೇ ಮುಂಚೂಣಿಯಲ್ಲಿದ್ದು ಹೋರಾಟ ನಡೆಸಬಹುದು. ದೇಶದ ಆಡಳಿತದಲ್ಲಿ ಪಾರದರ್ಶಕತೆ ಕಡಿಮೆಯಾಗುತ್ತಿದೆ. ಸರಕಾರ ಜನರಿಗೆ ನೀಡುವ ಮಾಹಿತಿಯೇ ಒಂದಾದರೆ, ಅದು ಬಚ್ಚಿಟ್ಟುಕೊಂಡಿರುವ ಮಾಹಿತಿಗಳು ಇನ್ನೊಂದು. ಈಗಾಗಲೇ ಆರ್‌ಟಿಐಯಿಂದ ಹೊರತೆಗೆದಿರುವ ಮಾಹಿತಿಗಳು ಕೇಂದ್ರ ಸರಕಾರವನ್ನು ತೀವ್ರ ಮುಜುಗರಕ್ಕೆ ತಳ್ಳಿವೆ. ಇಂದು ಸರಕಾರ ವಿರೋಧ ಪಕ್ಷಕ್ಕಿಂತ ಆರ್‌ಟಿಐ ಕಾರ್ಯಕರ್ತರಿಗೆ ಅಂಜುವ ಸನ್ನಿವೇಶವಿದೆ. ತನಿಖಾ ಪತ್ರಿಕೋದ್ಯಮಕ್ಕಂತೂ ಈ ಆರ್‌ಟಿಐ ನೀಡುತ್ತಿರುವ ಕೊಡುಗೆ ದೊಡ್ಡದು. ಹೀಗಿರುವಾಗ, ತನ್ನದೇ ಸರಕಾರದ ವಿರುದ್ಧ ಬಳಸಬಹುದಾದ ಕಾನೂನನ್ನು ಸರಕಾರ ಬಲಪಡಿಸುತ್ತದೆ ಎಂದು ನಂಬುವುದು ಇಂದಿನ ದಿನಗಳಲ್ಲಿ ಕಷ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News