×
Ad

ಎಚ್‍ಎಂಟಿ ಸಂಸ್ಥೆ ವಿರುದ್ಧ ಅರಣ್ಯ ಭೂಮಿ ಮಾರಾಟ ಆರೋಪ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-12-25 22:27 IST

ಬೆಂಗಳೂರು, ಡಿ.25: ಕೇಂದ್ರ ಸರಕಾರಿ ಒಡೆತನದ ಪ್ರತಿಷ್ಠಿತ ಎಚ್‍ಎಂಟಿ ಸಂಸ್ಥೆ ತನ್ನ ಸುಪರ್ದಿಯಲ್ಲಿರುವ 165 ಎಕರೆ ಅರಣ್ಯ ಭೂಮಿಯನ್ನು ಮಾರಾಟ ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ರಾಮಮೂರ್ತಿ ನಗರದ ಬಾಲಾಜಿ ನಾಯ್ಡು ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸರಕಾರ, ಅರಣ್ಯ ಇಲಾಖೆ ಹಾಗೂ ಎಚ್‍ಎಂಟಿ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.

ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು, ಎಚ್‍ಎಂಟಿ ಸಂಸ್ಥೆ ಭೂಮಿಯನ್ನು ಮಾರಾಟ ಮಾಡಲು ಸಿದ್ಧತೆ ನಡೆಸಿದೆ ಎಂಬ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೀಠ, ಈ ಸಂಬಂಧ ಸಂಸ್ಥೆ ಕೈಗೊಳ್ಳಲಿರುವ ಯಾವುದೇ ಕ್ರಮಗಳು ನ್ಯಾಯಾಲಯದ ಮುಂದಿರುವ ಅರ್ಜಿಯ ಅಂತಿಮ ತೀರ್ಪಿಗೆ ಒಳಪಡಲಿವೆ ಎಂದು ಮಧ್ಯಂತರ ಆದೇಶ ನೀಡಿ ವಿಚಾರಣೆಯನ್ನು ಜ.4ಕ್ಕೆ ಮುಂದೂಡಿದೆ.

ಅರ್ಜಿಯಲ್ಲಿ ಏನಿದೆ: ಎಚ್‍ಎಂಟಿ ಕಾರ್ಯನಿರ್ವಹಣೆ ಮಾಡುತ್ತಿದ್ದ 165 ಎಕರೆ ಭೂಮಿ ಮೂಲತಃ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ. ಆ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಎಚ್‍ಎಂಟಿಗೆ ನೀಡಲಾಗಿದೆ. ಆದರೀಗ ಎಚ್‍ಎಂಟಿ ತನ್ನ ಸುಪರ್ದಿಯಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ಮಾರಾಟ ಮಾಡಿ ತನ್ನ ಸಾಲ ತೀರಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ನ್ಯಾಯಾಲಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News