×
Ad

ಬೆಂಗಳೂರು: ನಗರದೆಲ್ಲೆಡೆ ಸಂಭ್ರಮ, ಸಡಗರದ ಕ್ರಿಸ್ಮಸ್ ಆಚರಣೆ

Update: 2020-12-25 22:44 IST

ಬೆಂಗಳೂರು, ಡಿ.25: ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವ ಮೂಲಕ ಕ್ರೈಸ್ತ ಧರ್ಮಿಯರು ರಾಜಧಾನಿ ಬೆಂಗಳೂರಿನಲ್ಲಿ ಕ್ರಿಸ್‍ಮಸ್ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಣೆ ಮಾಡಿದರು.

ಶುಕ್ರವಾರ ನಗರ ವ್ಯಾಪ್ತಿಯಲ್ಲಿನ ಚರ್ಚ್‍ಗಳಲ್ಲಿ ಹಬ್ಬದ ವಾತಾವರಣ ತುಂಬಿತ್ತು. ಮನೆಯಲ್ಲಿ ಹೊಸ ಬಟ್ಟೆ ತೊಟ್ಟು, ಹಾಡು ಹೇಳಿ, ಸಿಹಿ ತಿಂಡಿ ಮಾಡಿ ಹಬ್ಬ ಆಚರಿಸಿದರೆ, ಮತ್ತೊಂದೆಡೆ ಕೆಲವರು ಮನೆಯಲ್ಲಿಯೇ ಕ್ರಿಸ್ತನ ಜನನ ವೃತ್ತಾಂತವನ್ನು ಗೊಂಬೆಗಳ ಮೂಲಕ ಗೋದಲಿ ರೂಪಿಸಿದ್ದರು.

ಬಹುತೇಕರು ಹತ್ತಿರದ ಚರ್ಚ್ ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು, ಕ್ಯಾಂಡಲ್ ಹಚ್ಚಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಲ್ಲಿದ್ದ ಸ್ನೇಹಿತರು-ಬಂಧುಗಳೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು.

ಹಬ್ಬಕ್ಕಾಗಿ ನಗರದ ಎಲ್ಲ ಚರ್ಚ್‍ಗಳು ವಿದ್ಯುತ್ ದೀಪದ ಅಲಂಕಾರಗಳಿಂದ ಕಂಗೊಳಿಸುತ್ತಿದ್ದವು. ಪ್ರಮುಖವಾಗಿ ಶಿವಾಜಿನಗರದಲ್ಲಿರುವ ಸೇಂಟ್ ಮೇರಿ ಬೆಸಿಲಿಕಾ, ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಸೇಂಟ್ ಮಾರ್ಕ್ಸ್ ಕೆಥೆಡ್ರಲ್ ಚರ್ಚ್, ಹಡ್ಸನ್ ವೃತ್ತದಲ್ಲಿರುವ ಹಡ್ಸನ್ ಚರ್ಚ್, ಚಿಕ್ಕಪೇಟೆಯ ರೈಸ್ ಸ್ಮಾರಕ ಚರ್ಚ್, ಚಾಮರಾಜಪೇಟೆಯ ಸೇಂಟ್ ಲೂಕ್ಸ್ ಚರ್ಚ್, ಟ್ರಿನಿಟಿ ರಸ್ತೆಯ ಹೋಲಿ ಟ್ರಿನಿಟಿ ಚರ್ಚ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೈಸ್ತ ಬಾಂಧವರು ನೆರೆದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ದೃಶ್ಯ ಕಂಡಿತು.

ಬಹುತೇಕ ಚರ್ಚ್ ಗಳಲ್ಲಿ ಗುರುವಾರ ಮಧ್ಯರಾತ್ರಿ ಹಾಗೂ ಶುಕ್ರವಾರ ಬೆಳಗ್ಗೆ ಮತ್ತು ರಾತ್ರಿ ಸಾಮೂಹಿಕ ಪ್ರಾರ್ಥನೆಗಳು ನಡೆದವು. ಚರ್ಚ್ ಆವರಣದಲ್ಲಿ ನಡೆದ ಹಾಡು-ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News