ಚಿಕನ್ ಮತ್ತು ಮೊಟ್ಟೆಯ ಆರೋಗ್ಯಲಾಭಗಳು ಮತ್ತು ಕೆಡುಕುಗಳು ನಿಮಗೆ ಗೊತ್ತಿರಲಿ

Update: 2020-12-25 17:53 GMT

ಚಿಕನ್ ಒಳ್ಳೆಯದೋ ಮೊಟ್ಟೆಯೋ ಎಂಬ ಗೊಂದಲ ಕೆಲವರಲ್ಲಿ ಮನೆಮಾಡಿದೆ. ಇವೆರಡೂ ಪ್ರೋಟಿನ್‌ನ ಸಮೃದ್ಧ ಮೂಲಗಳಾಗಿದ್ದು,ಇದು ಅವುಗಳನ್ನು ನಮ್ಮ ಆಹಾರದ ಮುಖ್ಯ ಭಾಗವನ್ನಾಗಿಸಿವೆ. ಶರೀರದಲ್ಲಿ ನೀರು ಸಂಗ್ರಹಗೊಳ್ಳುವುದನ್ನು ನಿವಾರಿಸುವಲ್ಲಿ ಚಿಕನ್ ಮತ್ತು ಮೊಟ್ಟೆಯ ಸೇವನೆಯು ಮಹತ್ವದ ಪಾತ್ರವನ್ನು ಹೊಂದಿದೆ. ಮೊಳಕೆ ಬರಿಸಿದ ಕಾಳುಗಳು,ಹಾಲು ಮತ್ತು ಮೊಟ್ಟೆಯಂತಹ ಆರೋಗ್ಯಕರ ಆಹಾರಗಳು ಮಂಪರು ಮತ್ತು ಬಳಲಿಕೆಯನ್ನು ಕಡಿಮೆ ಮಾಡಲು ನೆರವಾಗುತ್ತವೆ. ಮೊಟ್ಟೆಯು ಸೌಂದರ್ಯ ವರ್ಧನೆಗೆ ಮನೆಮದ್ದಾಗಿಯೂ ಬಳಕೆಯಾಗುತ್ತದೆ. ಅದು ಕೂದಲನ್ನು ಸದೃಢ,ಮೃದು ಮತ್ತು ಆರೋಗ್ಯಯುತವನ್ನಾಗಿಸು ತ್ತದೆ. ಚಿಕನ್ ಅನ್ನು ಸಹ ಪ್ರತಿದಿನ ಸೇವಿಸಬಹುದು,ಆದರೆ ಸರಿಯಾದ ರೀತಿಯಲ್ಲಿ ಮತ್ತು ಸೂಕ್ತ ಪ್ರಮಾಣದಲ್ಲಿ ಸೇವಿಸಬೇಕು. ಚಿಕನ್ ಮತ್ತು ಮೊಟ್ಟೆಯ ಆರೋಗ್ಯಲಾಭಗಳು ಮತ್ತು ಅನಾನುಕೂಲಗಳ ಬಗ್ಗೆ ಮಾಹಿತಿಗಳಿಲ್ಲಿವೆ.......

ಮೊಟ್ಟೆಯ ಆರೋಗ್ಯ ಲಾಭಗಳು

ಮೊಟ್ಟೆ ನಮ್ಮ ಬ್ರೇಕ್‌ಫಾಸ್ಟ್‌ನಲ್ಲಿ,ಊಟದಲ್ಲಿ ಬಳಕೆಯಾಗುತ್ತದೆ. ಅದು ನಮ್ಮ ಶರೀರವು ವಿಟಾಮಿನ್ ಡಿ ಪಡೆಯಲು ಅನುಕೂಲಕರ ಮೂಲ ಎಂದು ಪರಿಗಣಿಸಲ್ಪಟ್ಟಿದೆ. ಈ ಪೋಷಕಾಂಶ ನಮ್ಮ ಶರೀರಕ್ಕೆ ದೊರೆಯುವಂತಾಗಲೂ ಮೊಟ್ಟೆಯನ್ನು ಇಡಿಯಾಗಿ ತಿನ್ನಬೇಕು. ಮೊಟ್ಟೆ ಮತ್ತು ಚಿಕನ್ ನಮ್ಮ ಶರೀರಕ್ಕೆ ಪ್ರೋಟಿನ್ ಅನ್ನು ಒದಗಿಸುವ ಸಮೃದ್ಧ ಮೂಲಗಳಾಗಿವೆ. ಮೊಟ್ಟೆಯಲ್ಲಿ ಸತುವು,ವಿಟಾಮಿನ್ ಸಿ ಮತ್ತು ಇ ಕೂಡ ಇವೆ.

* ತೂಕವನ್ನು ಇಳಿಸಲು ನೆರವಾಗುತ್ತದೆ

ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಕೆಲವು ಬೇಯಿಸಿದ ಮೊಟ್ಟೆಗಳನ್ನು ನಿಮ್ಮ ಬ್ರೇಕ್‌ಫಾಸ್ಟ್‌ನಲ್ಲಿ ಸೇರಿಸಿಕೊಳ್ಳಿ. ಅದು ಹೆಚ್ಚು ಕ್ಯಾಲೊರಿಗಳನ್ನು ಸೇರಿಸದೆ ನಿಮ್ಮ ಶರೀರಕ್ಕೆ ಪ್ರೊಟೀನ್ ಒದಗಿಸುತ್ತದೆ. ಆದರೆ ಬೇಯಿಸಿದ ಮೊಟ್ಟೆಗಳನ್ನು ಒಂದು ಮಿತಿಯಲ್ಲಿ ತಿನ್ನಬೇಕೇ ಹೊರತು ಸಿಕ್ಕಾಪಟ್ಟೆ ತಿನ್ನುವುದಲ್ಲ.

* ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು

ಮೊಟ್ಟೆಯಲ್ಲಿ ಕ್ಯಾಲ್ಸಿಯಂ,ತಾಮ್ರ ಮತ್ತು ಸತುವಿನಂತಹ ಉಪಯುಕ್ತ ಖನಿಜಗಳು ಮತ್ತು ವಿಟಾಮಿನ್‌ಗಳಿವೆ. ಇವು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತವೆ. ದೃಷ್ಟಿಯು ದುರ್ಬಲವಾಗಿದ್ದರೂ ಅದನ್ನು ಗುಣಪಡಿಸುವ ಗುಣವನ್ನು ಈ ಪೋಷಕಾಂಶಗಳು ಹೊಂದಿವೆ.

* ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಮೊಟ್ಟೆಯಲ್ಲಿರುವ ಹಲವಾರು ಪೋಷಕಾಂಶಗಳು ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರಲ್ಲಿ ಸಮೃದ್ಧವಾಗಿರುವ ವಿಟಾಮಿನ್ ಎ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ನೆರವಾಗುತ್ತದೆ.

ಮೊಟ್ಟೆಯ ಅಡ್ಡಪರಿಣಾಮಗಳು

ನಾವು ಸೇವಿಸುವ ಮೊಟ್ಟೆಗಳ ಪ್ರಮಾಣದ ಬಗ್ಗೆ ಕಾಳಜಿ ವಹಿಸುವುದು ಮತ್ತು ಪ್ರತಿದಿನ ಒಂದು ಮಿತಿಯಲ್ಲಿ ಮೊಟ್ಟೆಯನ್ನು ಸೇವಿಸುವುದು ಮುಖ್ಯವಾಗಿದೆ. ದಿನವೊಂದಕ್ಕೆ ಸೇವಿಸುವ ಮೊಟ್ಟೆಗಳ ಸಂಖ್ಯೆ ಒಂದು ಅಥವಾ ಎರಡನ್ನು ಮೀರಬಾರದು. ಅಂಗಸೌಷ್ಟವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವವರು ದಿನಕ್ಕೆ ಮೂರರಿಂದ ಆರು ಮೊಟ್ಟೆಗಳನ್ನು ತಿನ್ನಬಹುದು,ಆದರೆ ಆರಕ್ಕಿಂತ ಹೆಚ್ಚು ಮೊಟ್ಟೆಗಳನ್ನು ತಿಂದರೆ ಶರೀರದಲ್ಲಿ ಉಷ್ಣತೆಯುಂಟಾಗುತ್ತದೆ ಮತ್ತು ಇದು ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು. ಅಲ್ಲದೆ ಊಟದಲ್ಲಿ ಮೊಟ್ಟೆಯ ಜೊತೆ ಬೇರೆ ಏನನ್ನು ಸೇವಿಸುತ್ತೇವೆ ಎನ್ನುವುದರ ಬಗ್ಗೆಯೂ ಗಮನವಿರಬೇಕು. ಮೊಟ್ಟೆಯಲ್ಲಿ ಸಾಕಷ್ಟು ಪ್ರೋಟಿನ್ ಇರುತ್ತದೆ,ಹೀಗಾಗಿ ಪ್ರೋಟಿನ್ ಸಮೃದ್ಧವಾಗಿರುವ ಇನ್ನೊಂದು ಆಹಾರ ಊಟದಲ್ಲಿ ಇರಬಾರದು.

 *ಫುಡ್ ಪಾಯ್ಸನಿಂಗ್

ಅತಿಯಾಗಿ ಮೊಟ್ಟೆಗಳ ಸೇವನೆಯು ತೀವ್ರ ಫುಡ್ ಪಾಯ್ಸೆನಿಂಗ್‌ಗೆ ಕಾರಣವಾಗುತ್ತದೆ. ಅದು ಪ್ರೋಟಿನ್‌ನ ಅತ್ಯುತ್ತಮ ಮೂಲವಾಗಿರುವುದರಿಂದ ಅತಿಯಾಗಿ ಮೊಟ್ಟೆಗಳ ಸೇವನೆಯು ಜೀರ್ಣಾಂಗದ ಮೇಲೆ ಒತ್ತಡವನ್ನುಂಟು ಮಾಡುತ್ತದೆ ಮತ್ತು ಫುಡ್ ಪಾಯ್ಸೆನಿಂಗ್ ಉಂಟು ಮಾಡುತ್ತದೆ.

* ಅಲರ್ಜಿ

ಕೆಲವರು ಮೊಟ್ಟೆಗೂ ಅಲರ್ಜಿಯನ್ನು ಹೊಂದಿರುತ್ತಾರೆ. ಅಂತಹವರು ಮೊಟ್ಟೆಯನ್ನು ತಿನ್ನುವುದರಿಂದ ಚರ್ಮದಲ್ಲಿ ದದ್ದುಗಳು ಅಥವಾ ತುರಿಕೆಯುಂಟಾಗಬಹುದು.

* ಪ್ರೋಟಿನ್‌ನ ಅತಿಯಾದ ಸೇವನೆ

ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅಧಿಕ ಪ್ರೋಟಿನ್ ಇರುವ ಆಹಾರವನ್ನು ಸೇವಿಸದಂತೆ ವೈದ್ಯರು ಸೂಚಿಸುತ್ತಾರೆ. ಮೊಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪ್ರೋಟಿನ್ ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡಬಲ್ಲದು ಮತ್ತು ರಕ್ತದಿಂದ ವಿಷವಸ್ತುಗಳ ಸೋಸುವಿಕೆ ಕಠಿಣವಾಗುತ್ತದೆ. ಇದು ರಕ್ತದಲ್ಲಿ ಅತಿಯಾದ ಅಮೋನಿಯಾ ಸಂಗ್ರಹಕ್ಕೆ ಕಾರಣವಾಗುತ್ತದೆ ಮತ್ತು ಸಾವನ್ನೂ ಉಂಟು ಮಾಡಬಹುದು.

ಚಿಕನ್‌ನ ಆರೋಗ್ಯಲಾಭಗಳು

ನಮ್ಮ ಶರೀರಕ್ಕೆ ಆರೋಗ್ಯಲಾಭಗಳನ್ನು ಒದಗಿಸುವ ಹಲವಾರು ಪೋಷಕಾಂಶಗಳು ಚಿಕನ್‌ನಲ್ಲಿವೆ. ಚಿಕನ್‌ನ ಎದೆಯ ಭಾಗ ಅತ್ಯಂತ ಆರೋಗ್ಯಕರ ಎಂದು ಪರಿಗಣಿಸಲಾಗಿದೆ. ಚಿಕನ್ ಕೆಂಪು ಮಾಂಸಕ್ಕೆ ಅತ್ಯುತ್ತಮ ಪರ್ಯಾಯವಾಗಿದೆ. ಅದು ಸಮೃದ್ಧ ಪ್ರೋಟಿನ್ ಅನ್ನು ಒಳಗೊಂಡಿದೆ.

* ಮೂಳೆಗಳು ಮತ್ತು ಸ್ನಾಯುಗಳನ್ನು ಬಲಗೊಳಿಸುತ್ತದೆ

ಚಿಕನ್ ಕ್ಯಾಲ್ಸಿಯಂ ಮತ್ತು ಡಿ ವಿಟಾಮಿನ್‌ನ ಉತ್ತಮ ಮೂಲವಾಗಿರುವುದರಿಂದ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಗೊಳಿಸಲು ನೆರವಾಗುತ್ತದೆ.

* ಹೃದ್ರೋಗದ ಅಪಾಯವನ್ನು ತಗ್ಗಿಸುತ್ತದೆ

ಪ್ರೋಟಿನ್ ಸಮೃದ್ಧ ಊಟವು ನಾವು ಕಡಿಮೆ ಆಹಾರವನ್ನು ಸೇವಿಸುವಂತೆ ಮಾಡುತ್ತದೆ ಮತ್ತು ಇದು ತೂಕ ಕಡಿಮೆ ಮಾಡಿಕೊಳ್ಳಲು ಪೂರಕವಾಗಿದೆ. ಇದು ಹೃದಯಕ್ಕೆ ಅಪಾಯವನ್ನು ಕಡಿಮೆ ಮಾಡುತ್ತದೆ. ಚಿಕನ್ ಹೆಚ್ಚು ಪ್ರೋಟಿನ್ ಒಳಗೊಂಡಿದ್ದು, ಟ್ರೈಗ್ಲಿಸರೈಡ್ ಮಟ್ಟಗಳನ್ನು ಕಾಯ್ದುಕೊಳ್ಳುವ ಮೂಲಕ ಹೃದಯ ರಕ್ತನಾಳಗಳ ಸಮಸ್ಯೆಗಳಿಗೆ ಗುರಿಯಾಗುವ ಅಪಾಯವನ್ನು ತಗ್ಗಿಸುತ್ತದೆ.

* ಒತ್ತಡವನ್ನು ಕಡಿಮೆ ಮಾಡುತ್ತದೆ

ಚಿಕನ್‌ನಲ್ಲಿರುವ ಅಮಿನೊ ಆಮ್ಲ ಟ್ರಿಪ್ಟೊಫಾನ್‌ನಲ್ಲಿ ಸೆರೊಟೋನಿನ್ ಹೆಚ್ಚಿನ ಮಟ್ಟದಲ್ಲಿರುತ್ತದೆ. ಈ ಹಾರ್ಮೋನ್ ಮಿದುಳಿಗೆ ನಿರಾಳತೆಯನ್ನು ನೀಡುತ್ತದೆ ಮತ್ತು ಒಳ್ಳೆಯ ಮೂಡ್‌ನಲ್ಲಿ ಇರುವಂತೆ ಮಾಡುತ್ತದೆ. ಚಿಕನ್ ಸೇವನೆಯು ಒತ್ತಡವನ್ನು ತಗ್ಗಿಸಲು ನೆರವಾಗುತ್ತದೆ.

ಚಿಕನ್‌ನ ಅಡ್ಡಪರಿಣಾಮಗಳು

ಚರ್ಮರಹಿತ ಚಿಕನ್‌ನಂತಹ ಕಡಿಮೆ ಕೊಬ್ಬು ಇರುವ ಆಹಾರಗಳು ವಾಯು ಮತ್ತು ಹೊಟ್ಟೆಯುಬ್ಬರವನ್ನು ಮಾಡುತ್ತವೆ. ಚಿಕನ್‌ನಿಂದ ಹೆಚ್ಚಾಗಿ ಕರಿದ ಮತ್ತು ಎಣ್ಣೆ ಹೆಚ್ಚಾಗಿರುವ ಖಾದ್ಯಗಳನ್ನು ತಯಾರಿಸಲಾಗುತ್ತದೆ ಮತ್ತು ಇವು ಜೀರ್ಣಾಂಗದ ಮೇಲೆ ಒತ್ತಡವನ್ನು ಹೇರುತ್ತವೆ. ಹಾಟ್ ಡಾಗ್ಸ್, ಸಾಸೇಜ್‌ಗಳು, ಸಲಾಮಿ,ಕ್ಯೂರ್ಡ್‌ ಬೇಕನ್ ಮತ್ತು ಕಾರ್ನ್ಡ್ ಬೀಫ್‌ನಂತಹ ಸಂಸ್ಕರಿತ ಮಾಂಸಗಳಿಂದ ದೂರವುಳಿಯುವುದು ಒಳ್ಳೆಯದು.

* ಮಲಬದ್ಧತೆ

ಚಿಕನ್ ಮಾತ್ರವಲ್ಲ,ಆದರೆ ನಿರ್ದಿಷ್ಟವಾಗಿ ಕೆಂಪು ಮಾಂಸ,ಕರಿದ ಮತ್ತು ಎಣ್ಣೆಯ ಚಿಕನ್ ಖಾದ್ಯಗಳು ಮಲಬದ್ಧತೆಗ ಕಾರಣವಾಗುತ್ತವೆ. ಈಗಾಗಲೇ ಮಲಬದ್ಧತೆಯ ಸಮಸ್ಯೆಯಿದ್ದರೆ ಇವುಗಳ ಸೇವನೆ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.

* ಕ್ಯಾನ್ಸರ್‌ಗೆ ತುತ್ತಾಗುವ ಹೆಚ್ಚಿನ ಅಪಾಯ

ಅತಿಯಾದ ಚಿಕನ್ ಸೇವನೆಯು ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸಬಲ್ಲದು. ವಿಶೇಷವಾಗಿ ಕೆಂಪು ಅಥವಾ ಸಂಸ್ಕರಿತ ಮಾಂಸ ದೊಡ್ಡಕರುಳಿನ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಆದ್ದರಿಂದ ಚಿಕನ್‌ನ್ನು ಒಂದು ಮಿತಿಯಲ್ಲಿ ಸೇವಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News