ಬ್ರಿಟನ್‍ನಿಂದ ನಗರಕ್ಕೆ ಆಗಮಿಸಿದ 151 ಜನರು ಸಂಪರ್ಕಕ್ಕೆ ಸಿಗುತ್ತಿಲ್ಲ: ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ
ಬೆಂಗಳೂರು, ಡಿ.26: ಸಿಲಿಕಾನ್ ಸಿಟಿಗೆ ಬ್ರಿಟನ್‍ನಿಂದ ಆಗಮಿಸಿದ್ದವರಲ್ಲಿ 151 ಜನರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಬ್ರಿಟನ್‍ನಿಂದ ರಾಜಧಾನಿಗೆ ಆಗಮಿಸಿರುವ 1582 ಜನರಲ್ಲಿ ಇದುವರೆಗೂ
ಇನ್ನೂ 151 ಜನರು ಸಂಪರ್ಕಕ್ಕೆ ಸಿಗಬೇಕಾಗಿದೆ. ಇವರ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ವರ್ಗಾಯಿಸಲಾಗಿದೆ. ಶೀಘ್ರದಲ್ಲಿಯೇ ಎಲ್ಲರನ್ನೂ ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.
ನಾಪತ್ತೆಯಾಗಿರುವವರ ಕಾಲ್ ಡಿಟೇಲ್ಸ್ ಆಧಾರದ ಮೇಲೆ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಉದ್ದೇಶಪೂರ್ವಕವಾಗಿ ನಾಪತ್ತೆಯಾಗಿರುವವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದರ ಜತೆಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುವುದು ಎಂದು ವಿಜಯೇಂದ್ರ ಎಚ್ಚರಿಕೆಯನ್ನು ನೀಡಿದ್ದಾರೆ.
ಬ್ರಿಟನ್ನಿಂದ ಆಗಮಿಸಿದ 1585 ಮಂದಿಯಲ್ಲಿ 11 ಜನರಿಗೆ ಕೊರೋನ ಪಾಸಿಟಿವ್ ಬಂದಿದ್ದು, ಇವರ ಜತೆ 29 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿರುವುದು ಪತ್ತೆಯಾಗಿದ್ದು, ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಪಾಸಿಟಿವ್ ಪ್ರಕರಣಗಳಲ್ಲಿ ರೂಪಾಂತರ ಕೊರೋನ ವೈರಸ್ ಇರುವ ಬಗ್ಗೆ ಪತ್ತೆಹಚ್ಚಲು ಸೋಂಕಿತರ ಸ್ವಾಬ್‍ಗಳನ್ನು ಮೈಕ್ರೋ ಲ್ಯಾಬ್‍ಗಳಿಗೆ ರವಾನೆ ಮಾಡಲಾಗಿದೆ. ಅದರ ವರದಿ ಬಂದ ನಂತರವಷ್ಟೇ ರೂಪಾಂತರ ವೈರಸ್ ಹೌದೋ, ಅಲ್ಲವೋ ಎಂಬುದು ತಿಳಿದುಬರಲಿದೆ ಎಂದು ಹೇಳಿದ್ದಾರೆ.