ವಿಷ್ಣುವರ್ಧನ್ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು: ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರು, ಡಿ.26: ಕನ್ನಡ ಚಿತ್ರರಂಗದ ಮೇರುನಟ ಡಾ. ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಮಾಗಡಿ ರಸ್ತೆಯ ಟೋಲ್‍ಗೇಟ್ ಬಳಿ ನಡೆದಿದ್ದು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಷ್ಣು ಅಭಿಮಾನಿಗಳು ಹಾಗೂ ನಟರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಈ ಹಿಂದೆ ತೆಲುಗು ನಟ ವಿಜಯ ರಂಗರಾಜು ವಿಷ್ಣುವರ್ಧನ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ, ಬಳಿಕ ಕ್ಷಮೆಯಾಚಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಕಿಡಿಗೇಡಿಗಳು ವಿಷ್ಣು ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ನಡೆದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ವಿಷ್ಣು ಅಭಿಮಾನಿಗಳು ಮಾಗಡಿ ರಸ್ತೆಯಲ್ಲಿಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿ, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು.
ಇದರಿಂದಾಗಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ತಪ್ಪಿತಸ್ಥರನ್ನು ಬಂಧಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆದುಕೊಂಡರು. ಮಾಗಡಿ ರಸ್ತೆ ಬಳಿ ಇರುವ ಬಾಲ ಗಂಗಾಧರನಾಥ ವೃತ್ತದಲ್ಲಿ ವಿಷ್ಣುವರ್ಧನ್ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಒಂದೂವರೆ ವರ್ಷದ ಹಿಂದೆ ಸ್ಥಾಪಿಸಲಾಗಿದ್ದ ವಿಷ್ಣು ಪ್ರತಿಮೆಯನ್ನು ಬೇರೆ ಕಡೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು ಎಂದು ಹೇಳಲಾಗಿದೆ.
ಈ ಹಿಂದೆ ಪ್ರತಿಮೆಯನ್ನು ಕಿಡಿಗೇಡಿಗಳು ಹೊತ್ತೊಯ್ದಿದ್ದ ಘಟನೆಯೂ ನಡೆದಿತ್ತು. ಆನಂತರ ಪ್ರತಿಮೆಯನ್ನು ವಾಪಸ್ ತಂದಿಡಲಾಗಿತ್ತು. ಈಗ ರಾತ್ರೋ ರಾತ್ರಿ ದುಷ್ಕರ್ಮಿಗಳು ಪ್ರತಿಮೆ ಧ್ವಂಸಗೊಳಿಸಿ ವಿಕೃತಿ ಮೆರೆದಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಮಾಡಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಒತ್ತಾಯಿಸಿದ್ದಾರೆ. "ಅಪ್ಪಾವ್ರ ಪ್ರತಿಮೆ ಧ್ವಂಸ ಮಾಡಿರುವುದು ಬೇಸರದ ಸಂಗತಿ. ಆದರೆ, ಈ ವಿಷಯವನ್ನು ಮುಂದುವರಿಸುವುದು ಬೇಡ. ಸಮಾಜದಲ್ಲಿ ಪ್ರೀತಿ ಬೆಳೆಯಬೇಕು ಹೊರತು, ದ್ವೇಷವಲ್ಲ. ಮುಂದಿನ ದಿನಗಳಲ್ಲಿ ಈ ಕೃತ್ಯ ಮರುಕಳಿಸಬಾರದು" ಎಂದು ಅವರು ಹೇಳಿದ್ದಾರೆ.
ರಾತ್ರೋರಾತ್ರಿ ನಗರದ ಮಾಗಡಿ ರಸ್ತೆಯ ಟೋಲ್‍ಗೇಟ್ ಬಳಿ ಇರುವ ನಟ ಡಾ.ವಿಷ್ಣುವರ್ಧನ್ ಪ್ರತಿಮೆಯನ್ನು ತೆರವುಗೊಳಿಸಿರುವುದು ಪ್ರಕರಣವನ್ನು ರಾಜ್ಯ ಸರಕಾರ ಸೂಕ್ತ ತನಿಖೆ ನಡೆಸಬೇಕೆಂದು ಕರವೇ ಕನ್ನಡಿಗರ ಧ್ವನಿ ಸಂಘಟನೆ ಆಗ್ರಹಿಸಿದ್ದು, ಈ ಸಂಬಂಧ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆಯ ರಾಜ್ಯಾಧ್ಯಕ್ಷ ಕುಮಾರ, ಇಂತಹ ಕೃತ್ಯ ಎಸಗಿರುವ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು. ಅವರು ಮಾಡಿರುವ ತಪ್ಪಿಗೆ ತಕ್ಕ ಶಿಕ್ಷೆ ನೀಡಬೇಕು. ಈ ಹಿಂದೆಯೂ ಇದೇ ಪ್ರತಿಮೆಯನ್ನು ಕೆಲವರು ಹೊತ್ತೊಯ್ದಿದ್ದರು. ಹೀಗೆ ಪದೇಪದೇ ವಿಷ್ಣುವರ್ಧನ್ ಅವರನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸೋ, ಆರಾಧಿಸೋ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಮ್ಮ ನಲ್ಮೆಯ ಸಾಹಸ ಸಿಂಹ ಡಾ.ವಿಷ್ಣು ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು, ಯಾರು ಇಲ್ಲದ ಹೊತ್ತಿನಲ್ಲಿ ಧ್ವಂಸ ಮಾಡಿರುವುದು ನಾಚಿಕೆಯ ಸಂಗತಿ. ಇಂತ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು.
-ದರ್ಶನ್, ನಟ