ಬೆಂಗಳೂರು: ಎಲ್‍ಪಿಜಿ ದರ ಏರಿಕೆ ಖಂಡಿಸಿ ಪ್ರತಿಭಟನೆ
ಬೆಂಗಳೂರು, ಡಿ.26: ಡಿಸೆಂಬರ್‍ನಲ್ಲಿಯೇ ಎಲ್‍ಪಿಜಿ ಸಿಲಿಂಡರ್ ದರವನ್ನು ನೂರು ರೂ. ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರಕಾರ ಜನರಿಂದ ಸುಲಿಗೆ ಮಾಡುತ್ತಿದೆ ಎಂದು ಆಮ್ ಆದ್ಮಿ ಮಹಿಳಾ ಘಟಕದ ಕುಶಲಾ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ದಿನೇ ದಿನೇ ಎಲ್‍ಪಿಜಿ ದರವನ್ನು ಹೆಚ್ಚಳವಾಗುತ್ತಿರುವುದನ್ನು ಖಂಡಿಸಿ ಆಮ್‍ಆದ್ಮಿ ಮಹಿಳಾ ಘಟಕವು ನಗರದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲಾಕ್‍ಡೌನ್ ನೆಪ ಮಾಡಿಕೊಂಡು ಸಬ್ಸಿಡಿ ನೀಡುವುದನ್ನು ನಿಲ್ಲಿಸಿರುವ ಕೇಂದ್ರ ಸರಕಾರ ನೇರವಾಗಿ 20 ಸಾವಿರ ಕೋಟಿ ರೂ.ಉಳಿತಾಯ ಮಾಡಿದೆ. ಆದರೂ ಬೆಲೆ ಹೆಚ್ಚಳ ಮಾಡುವುದನ್ನು ನಿಲ್ಲಿಸಿಲ್ಲವೆಂದು ಆರೋಪಿಸಿದ್ದಾರೆ.
ಒಲೆಯಲ್ಲಿ ಅಡುಗೆ ಮಾಡುವುದರಿಂದ ಪರಿಸರ ಮಾಲಿನ್ಯ ತಪ್ಪಿಸಬಹುದೆಂದು ಹೇಳಿ ಗ್ಯಾಸ್ ವಿತರಿಸಿದ ಪ್ರಧಾನಿ ಮೋದಿ, ಈಗ ಬಡವರನ್ನು ಸುಲಿಗೆ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ಸಂಪೂರ್ಣವಾಗಿ ರೈತ, ಕಾರ್ಮಿಕ, ಮಹಿಳಾ ವಿರೋಧಿಯಾಗಿ ಪರಿವರ್ತನೆಯಾಗಿದೆ ಎಂದು ಅವರು ಕಿಡಿದ್ದಾರೆ.
ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ, ಮಹಿಳಾ ಘಟಕದ ಉಪಾಧ್ಯಕ್ಷೆ ಡಾ.ಮಾಯಾ ಪ್ರದೀಪ್, ವೈದ್ಯೆ ಪೂರ್ಣಿಮಾ ನಾಯ್ಡು, ಪ್ರತಿಮಾ ಮಲಾನಿ, ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಫಣಿರಾಜ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಕೋವಿಡ್ ಸಮಯದಲ್ಲಿ ಜನತೆ ಕನಿಷ್ಠ ಅಗತ್ಯ ವಸ್ತುಗಳಿಗೂ ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಕೇಂದ್ರ ಸರಕಾರ ಎಲ್‍ಪಿಜಿ ದರವನ್ನು ತಿಂಗಳಿಗೆ ಎರಡು ಬಾರಿ ಹೆಚ್ಚಳ ಮಾಡಿದೆ. ಈಗ ಜನತೆ ಎಲ್‍ಜಿಪಿ ಬದಲು ಸೌದೆಯನ್ನು ಬಳಸುವಂತಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಸೌದೆಯ ಬೆಲೆಯೂ ಗಗನಕ್ಕೆ ಏರಿದೆ. ಈಗ ಕೇಂದ್ರ ಸರಕಾರ ಎಲ್‍ಪಿಜಿ ಸಿಲಿಂಡರ್ ದರವನ್ನು ನಿಯಂತ್ರಿಸದಿದ್ದರೆ ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಸೌದೆ ಕಟ್ಟುಗಳನ್ನು ಪರ್ಸಲ್ ಮಾಡಲಾಗುವುದು.
-ಕುಶಲಾ ಸ್ವಾಮಿ, ಅಧ್ಯಕ್ಷ, ಆಪ್ ಮಹಿಳಾ ಘಟಕ