ಬಿಬಿಎಂಪಿಗೆ ಸೇರಿಸುವಂತೆ ಗ್ರಾಮಸ್ಥರ ಬೇಡಿಕೆ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-12-26 17:00 GMT

ಬೆಂಗಳೂರು, ಡಿ.26: ಬಿಬಿಎಂಪಿ ವ್ಯಾಪ್ತಿಗೆ ದೊಡ್ಡತೋಗೂರು ಗ್ರಾಮ ಪಂಚಾಯಿತಿಯನ್ನು ಸೇರಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ದೊಡ್ಡತೋಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಮ್ಮದೇವನಹಳ್ಳಿ ನಿವಾಸಿ ಬಿ.ಎ.ಚೈತ್ರ ಅನಿಲ್ ಸೇರಿದಂತೆ ಪ್ರಮುಖರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ಪ್ರತಿವಾದಿಗಳಾದ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಪೌರಾಡಳಿತ ಇಲಾಖೆ ನಿರ್ದೇಶಕ, ದೊಡ್ಡತೋಗೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದೊಡ್ಡತೋಗೂರು ಗ್ರಾಮ ಪಂಚಾಯಿತಿ ಬಿಬಿಎಂಪಿ ಸರಹದ್ದಿನಲ್ಲಿದ್ದು, ಹಲವು ಐಟಿ ಕಂಪೆನಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೃಷಿ ಭೂಮಿ ಇಲ್ಲವಾಗಿದ್ದು, ವಾಣಿಜ್ಯಾತ್ಮಕವಾಗಿ ಸಾಕಷ್ಟು ಅಭಿವೃದ್ಧಿಯಾಗಿದೆ.

ಅದೇ ರೀತಿ, ದೊಡ್ಡತೋಗೂರಿನಲ್ಲಿ 8 ಸಾವಿರ ಜನಸಂಖ್ಯೆ, ಬೆಟ್ಟದಾಸನಪುರದಲ್ಲಿ 6, ಮೈಲಸಂದ್ರದಲ್ಲಿ 4, ವಿಟ್ಟಸಂದ್ರ ಮತ್ತು ಹೊಮ್ಮದೇವನಹಳ್ಳಿಯಲ್ಲಿ ತಲಾ 4 ಸಾವಿರ ಜನಸಂಖ್ಯೆ ಇದೆ. ಅಲ್ಲದೆ, ಈ ಹಿಂದೆಯೂ ಈ ಗ್ರಾ.ಪಂಚಾಯಿತಿಯನ್ನು ಪುರಸಭೆಯಾಗಿ ಘೋಷಿಸಿದರು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. 
ಅಷ್ಟೇ ಅಲ್ಲದೆ, ಈ ಬಾರಿ ಗ್ರಾಪಂಗೆ ಚುನಾವಣೆಯನ್ನೂ ಘೋಷಿಸಲಿಲ್ಲ. ಆದ್ದರಿಂದ ದೊಡ್ಡತೋಗೂರು ಗ್ರಾಮ ಪಂಚಾಯಿತಿಯನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲು ಸರ್ಕಾರಕ್ಕೆ ನಿರ್ದೇಶಸಬೇಕು ಎಂದು ಮನವಿ ಮಾಡಿದರು.

ತದನಂತರ, ಈ ಕುರಿತು ಪೀಠವು, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದಿನ ವಾರ್ಷಿಕ ಸಾಲಿನ ಫೆ.4ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News