'ಬಂಗಾಳಿಗರಿಗೆ ಬಿಜೆಪಿ ಮಾಡಿದ ಅವಮಾನ ಸಹಿಸಿಕೊಳ್ಳಲು ಸಾಧ್ಯವಿಲ್ಲ'

Update: 2020-12-28 05:11 GMT
ಅಮರ್ತ್ಯ ಸೇನ್

ಕೊಲ್ಕತ್ತಾ : ವಿಶ್ವಭಾರತಿ ಆವರಣದಲ್ಲಿ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅಕ್ರಮ ಜಮೀನು ಹೊಂದಿದ್ದಾರೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಸೇನ್ ಅವರನ್ನು ಬೆಂಬಲಿಸಿ ಹಾಗೂ ಕೇಂದ್ರೀಯ ವಿವಿ ಧೋರಣೆಯನ್ನು ಖಂಡಿಸಿ ರವಿವಾರ ವಿವಿಧ ಕ್ಷೇತ್ರಗಳ ಗಣ್ಯರು ಪ್ರತಿಭಟನೆ ನಡೆಸಿದರು.

"ಕೇಂದ್ರೀಯ ವಿವಿ ಕ್ರಮ ಸರ್ವಾಧಿಕಾರಿ ಮತ್ತು ನಿರಂಕುಶ ಪ್ರಭುತ್ವ"ದ ಕ್ರಮ ಎಂದು ಬುದ್ಧಿಜೀವಿಗಳು ಟೀಕಿಸಿದರು. ಕವಿಗಳಾದ ಜೋಯ್ ಗೋಸ್ವಾಮಿ ಮತ್ತು ಸುಬೋಧ್ ಸರ್ಕಾರ್, ಗಾಯಕ ಕಬೀರ್ ಸುಮನ್, ಚಿತ್ರ ಕಲಾವಿದರಾದ ಜೋಗನ್ ಚೌಧರಿ ಮತ್ತು ಸುವಪ್ರಸನ್ನ, ರಂಗಕಲಾವಿದರಾದ ಬ್ರಾತ್ಯ ಬಸು ಮತ್ತು ಇತರರು ಲಲಿತಕಲಾ ಅಕಾಡೆಮಿ ಆವರಣದಲ್ಲಿ ಸೇರಿ ಈ ವಿವಾದಕ್ಕೆ ಸಂಬಂಧಿಸಿದಂತೆ ಧ್ವನಿ ಎತ್ತಿದರು.

"ಬಂಗಾಳಿಗರಿಗೆ ಬಿಜೆಪಿ ಮಾಡಿದ ಅವಮಾನವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಮರ್ತ್ಯ ಸೇನ್ ಅವರಿಗೆ ಮಾಡಿದ ಅವಮಾನ ಎಲ್ಲ ಬಂಗಾಳಿಗಳಿಗೆ ಮಾಡಿದ ಅವಮಾನ" ಎಂಬ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ವಿಶ್ವಭಾರತಿ ಇತ್ತೀಚೆಗೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಪತ್ರ ಬರೆದು ಸಂಸ್ಥೆಯ ಭೂಮಿಯನ್ನು ಸೇನ್ ಸೇರಿದಂತೆ ಹಲವು ಮಂದಿ ಖಾಸಗಿಯವರಿಗೆ ದಾಖಲೆ ಪತ್ರ ಮಾಡಿಕೊಡಲಾಗಿದೆ ಎಂದು ಆಪಾದಿಸಿತ್ತು. ಕ್ಯಾಂಪಸ್‌ನಲ್ಲಿ ತಮ್ಮ ಸ್ವಾಧೀನದಲ್ಲಿರುವ ಜಮೀನನ್ನು ಧೀರ್ಘಾವಧಿ ಲೀಸ್ ಮೇಲೆ ನೀಡಲಾಗಿದೆ. ಈ ಲೀಸ್ ಅವಧಿ ಮುಕ್ತಾಯದ ಹಂತದಲ್ಲಿದೆ ಎಂದು ಸೇನ್ ಸ್ಪಷ್ಟನೆ ನೀಡಿದ್ದರು.

ಅಮರ್ತ್ಯ ಸೇನ್ ಅವರಂಥ ವ್ಯಕ್ತಿಗಳ ಬಗ್ಗೆ ವಿಶ್ವಭಾರತಿಯ ನಡೆ ಸರ್ವಾಧಿಕಾರಿ ಧೋರಣೆ ಮತ್ತು ನಿರಂಕುಶ ಪ್ರಭುತ್ವವನ್ನು ಸೂಚಿಸುತ್ತದೆ. ನಾವೆಲ್ಲರೂ ಸೇನ್ ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಗೋಸ್ವಾಮಿ ಹೇಳಿದರು. ಬಿಜೆಪಿ ನೇಮಕ ಮಾಡಿದ ಕುಲಪತಿಯವರು ಸೇನ್ ಅವರನ್ನು ಗುರಿ ಮಾಡಿದ್ದಾರೆ ಎಂಧು ಸುಮನ್ ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News