ಕೇಂದ್ರವನ್ನು ವಿರೋಧಿಸಿದ್ದಕ್ಕೆ ಬಿಜೆಪಿಯಿಂದ ಅಮರ್ತ್ಯ ಸೇನ್ ಮೇಲೆ ದಾಳಿ: ಮಮತಾ ಬ್ಯಾನರ್ಜಿ

Update: 2020-12-28 16:54 GMT

ಕೋಲ್ಕತಾ, ಡಿ.28: ಕೇಂದ್ರ ಸರಕಾರದ ಧೋರಣೆಯನ್ನು ವಿರೋಧಿಸುತ್ತಿದ್ದಾರೆ ಎಂಬ ಏಕೈಕ ಕಾರಣಕ್ಕೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿ, ವಿನಾಕಾರಣ ಆರೋಪ ಹೊರಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ವಿಶ್ವಭಾರತಿ ವಿವಿಯ ಆವರಣದಲ್ಲಿರುವ ಜಮೀನನ್ನು ಅಮರ್ತ್ಯ ಸೇನ್ ಕುಟುಂಬ ಅಕ್ರಮವಾಗಿ ಸ್ವಾಧೀನದಲ್ಲಿರಿಸಿಕೊಂಡಿದೆ ಎಂದು ವಿವಿಯ ಆಡಳಿತ ಹೇಳಿಕೆ ನೀಡಿತ್ತು. ಈ ಹೇಳಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿ ಮಮತಾ ಬ್ಯಾನರ್ಜಿ ಕಳೆದ ವಾರ ಪತ್ರ ಬರೆದಿದ್ದರು. ‘ನನ್ನ ರಾಜಕೀಯ ನಿಲುವಿಗಾಗಿ ನನ್ನ ಮೇಲೆ ನಡೆಯುತ್ತಿರುವ ಆಕ್ರಮಣದಂತೆಯೇ, ಕೇಂದ್ರ ಸರಕಾರದ ನಿಲುವನ್ನು ವಿರೋಧಿಸುತ್ತಿರುವುದರಿಂದ ಅಮರ್ತ್ಯ ಸೇನ್ ಮೇಲೆ ಆಕ್ರಮಣ ನಡೆಯುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಮಮತಾ ಬ್ಯಾನರ್ಜಿಯ ಬೆಂಬಲಕ್ಕೆ ಧನ್ಯವಾದ ಸಲ್ಲಿಸಿರುವ ಸೇನ್, ಮುಖ್ಯಮಂತ್ರಿಯ ಗಟ್ಟಿ ಧ್ವನಿ ತನ್ನಲ್ಲಿ ಭಾರೀ ಶಕ್ತಿ ತುಂಬಿದೆ ಎಂದಿದ್ದಾರೆ. ಬಂಗಾಳದ ಮೇಲೆ ಕೇಂದ್ರ ಸರಕಾರದ ನಿಯಂತ್ರಣ ಹೆಚ್ಚುತ್ತಿರುವಂತೆಯೇ, ವಿಶ್ವಭಾರತಿ ವಿವಿಯ ಉಪಕುಲಪತಿ, ಕೇಂದ್ರದ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಂತಿನಿಕೇತನದ ಸಂಸ್ಕೃತಿ ಹಾಗೂ ವಿಶ್ವಭಾರತಿ ವಿವಿಯ ಉಪಕುಲಪತಿಯ ಸಂಸ್ಕೃತಿಯ ಮಧ್ಯೆ ಭಾರೀ ಅಂತರವಿದೆ ಎಂದು ಸೇನ್ ಪ್ರತಿಕ್ರಿಯಿಸಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿರುವ ಜಮೀನನ್ನು ತಮ್ಮ ಕುಟುಂಬಕ್ಕೆ ದೀರ್ಘಾವಧಿಯ ಲೀಸ್‌ಗೆ ನೀಡಿರುವುದಾಗಿ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ತಾಯಿಯ ಅಜ್ಜ ಕ್ಷಿತಿಮೋಹನ್ ಸೇನ್ (ರವೀಂದ್ರನಾಥ ಟಾಗೋರರ ಒಡನಾಡಿಯಾಗಿದ್ದ ವಿದ್ವಾಂಸರು) ಇಲ್ಲಿ ಮನೆಯನ್ನು ಕಟ್ಟಿದ್ದಾರೆ ಎಂದು ಅಮರ್ತ್ಯಸೇನ್ ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ಸೇನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ‘ಸೇನ್ ಬಗ್ಗೆ ತಮಗೆ ಗೌರವವಿದೆ. ಆದರೆ ತಂಡವೊಂದರ ವಕ್ತಾರರಂತೆ ಅವರು ಹೇಳಿಕೆ ನೀಡುತ್ತಿದ್ದಾರೆ. ಯಾವುದೇ ಪಕ್ಷದ ಪರ ಅವರೇಕೆ ಹೇಳಿಕೆ ನೀಡಬೇಕು? ಎಂದು ಪ್ರಶ್ನಿಸಿದೆ. ‘ರಾಜ್ಯದ ಜನತೆಗೆ ಅವರ ಬುದ್ಧಿವಂತಿಕೆ ಮತ್ತು ತಿಳುವಳಿಕೆಯ ಅಗತ್ಯವಿದೆ. ಆದರೆ ಅವರು ಓರ್ವ ವಿಫಲ ಮುಖ್ಯಮಂತ್ರಿಯ ಸಲಹೆಯಂತೆ ಅವರು ಕಾರ್ಯ ನಿರ್ವಹಿಸಿದರೆ ಜನರು ಬೇರೆಯೇ ರೀತಿ ಯೋಚಿಸುತ್ತಾರೆ. ನೊಬೆಲ್ ಪ್ರಶಸ್ತಿ ಕೊಟ್ಟಿದ್ದು ತಪ್ಪು ಎಂದು ಜನ ಭಾವಿಸುವಂತಹ ಕೆಲಸವನ್ನು ಸೇನ್ ಮಾಡಬಾರದು’ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News