ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಸರಕಾರದ ಪ್ರಥಮ ಆದ್ಯತಾ ಕ್ಷೇತ್ರ: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ಡಿ. 29: ಸರಕಾರಕ್ಕೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಪ್ರಥಮ ಆದ್ಯತಾ ಕ್ಷೇತ್ರಗಳಾಗಿದ್ದು, ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮಂಗಳವಾರ ನಗರದ ಬೋರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಆವರಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಗಳನ್ನು ತರಲು ಉದ್ದೇಶಿಸಿದ್ದಾರೆ. ಅದರಂತೆ ರಾಜ್ಯದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಲಿದ್ದೇವೆ. ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ನೀಡುವ ಮೂಲಕ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಬದಲಾವಣೆಗೆ ಪೂರಕವಾಗಿ ಸರಕಾರ ಕೆಲಸ ಮಾಡಲಿದೆ ಎಂದು ತಿಳಿಸಿದರು.
ವಾಜಪೇಯಿ ಅವರ ಹೆಸರನ್ನು ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರಕ್ಕೆ ಮರುನಾಮಕರಣ ಮಾಡಲಾಗಿದೆ. ಕಟ್ಟಡವೂ ಸುಂದರವಾಗಿದ್ದು, ಇಲ್ಲಿ ಕೆಲಸ ಮಾಡುವ ವೈದ್ಯರ ಮನಸ್ಸು ಸುಂದರವಾಗಿ ಆಸೆ, ಅಪೇಕ್ಷೆ ಹಾಗೂ ಜೀವನ್ಮರಣದ ಪ್ರಶ್ನೆ ಇಟ್ಟುಕೊಂಡು ಆಸ್ಪತ್ರೆಗೆ ಬರುವವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ವೈದ್ಯರಿಗೆ ಸಲಹೆ ನೀಡಿದರು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಮಾಲಕರು. ಸಾಮಾನ್ಯ ಜನರಿಂದ ಯಾವುದೇ ಆಕ್ಷೇಪವಿಲ್ಲದೇ ಆರೋಗ್ಯ ತಪಾಸಣೆ ಮಾಡಿ ಜನ ಸೇವೆ ಮಾಡುವುದು ವೈದ್ಯರ ಕರ್ತವ್ಯ ಹಾಗೂ ವೈದ್ಯಕೀಯ ಪದವಿ ಪಡೆದದ್ದಕ್ಕೂ ಸಾರ್ಥಕ ಎನ್ನಿಸುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದರು.
ರಾಜ್ಯ ಸರಕಾರ ಎಂಬಿಬಿಎಂಸ್ ಓದುವ ವಿದ್ಯಾರ್ಥಿಗಳಿಗೆ ಒಂದು ವರ್ಷದ ಗ್ರಾಮೀಣ ಸೇವೆಯನ್ನು ಕಡ್ಡಾಯ ಮಾಡಿದೆ. ಇದರಿಂದ ಹಳ್ಳಿಗಳಲ್ಲಿ ವೈದ್ಯರ ಕೊರತೆಯ ಸಮಸ್ಯೆ ನೀಗಲಿದೆ. ರಾಜ್ಯದಲ್ಲಿ ಕೊರೋನ ನಿಯಂತ್ರಣಕ್ಕೆ ಸರಕಾರ ಎಲ್ಲ ಕ್ರಮ ಕೈಗೊಂಡಿದೆ. ಜನರು ಕೊರೋನ ವಿರುದ್ಧ ಹೋರಾಡಲು ಸರಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದರು.
ರಾಜ್ಯಕ್ಕೆ ಹೆಚ್ಚು ವೈದ್ಯರು ಅಗತ್ಯವಿರುವುದರಿಂದ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಬೇಕಾಗುತ್ತದೆ. ಇದಕ್ಕಾಗಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಒಂದು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ 600-700 ಕೋಟಿ ರೂ. ಬೇಕಾಗುತ್ತದೆ. ಖಾಸಗಿ-ಸರಕಾರಿ ಸಹಭಾಗಿತ್ವದಲ್ಲಿ ಕಾಲೇಜು ನಿರ್ಮಿಸಿದರೆ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ, ಜನರಿಗೆ ಉಚಿತ ಆರೋಗ್ಯ ಸೌಲಭ್ಯ ನೀಡಬಹುದು. ಗುಜರಾತ್‍ನಲ್ಲಿ ಈ ರೀತಿ ಪ್ರಯತ್ನ ನಡೆಯುತ್ತಿದ್ದು, ನಮ್ಮಲ್ಲೂ ಈ ಬಗೆಯ ಪ್ರಯತ್ನ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ರಿಝ್ವಾನ್ ಅರ್ಷದ್, ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ. ಸಚ್ಚಿದಾನಂದ, ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧಾ ಕೇಂದ್ರದ ನಿರ್ದೇಶಕ ಡಾ. ಮನೋಜ್‍ಕುಮಾರ್ ಉಪಸ್ಥಿತರಿದ್ದರು.