ಕೌಶಲಾಭಿವೃದ್ಧಿ, ಉದ್ಯೋಗಕ್ಕೆ ಸಂಬಂಧಿಸಿದ ಮೂರು ಮಹತ್ವದ ಒಪ್ಪಂದಗಳಿಗೆ ಅಂಕಿತ

Update: 2020-12-29 17:19 GMT

ಬೆಂಗಳೂರು, ಡಿ.29: ಕೌಶಲ ತರಬೇತಿ ಪಡೆದುಕೊಂಡಿರುವ ಯುವಕರಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸುವ ಸಂಬಂಧ ರಾಜ್ಯ ಸರಕಾರವು ಮೂರು ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಮಂಗಳವಾರ ನಗರದ ಡೇರಿ ವೃತ್ತದ ಕಲ್ಯಾಣ ಸುರಕ್ಷಾ ಭವನದಲ್ಲಿನ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ನವೀಕೃತ ಕಟ್ಟಡದ ಕಚೇರಿ ಹಾಗೂ ಅಂತರ್‍ರಾಷ್ಟ್ರೀಯ ವಲಸೆ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಒಪ್ಪಂದಗಳಿಂದ ಅನೇಕರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದರು.

ಜೊತೆಗೆ, ಪ್ರಾಥಮಿಕ ಹಂತದಲ್ಲೆ ಕೌಶಲ ಶಿಕ್ಷಣ ನೀಡಲು ಸರಕಾರ ನಿರ್ಧರಿಸಿದ್ದು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕುಶಲತೆಯನ್ನು ಕಲಿಸುವ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಆ ಬಗ್ಗೆ ಸರಕಾರ ಹೆಚ್ಚು ಒತ್ತಾಸೆ ನೀಡುತ್ತಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

ಒಪ್ಪಂದ 1: ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿನ ಕೈಗಾರಿಕೆಗಳ ಅಗತ್ಯಕ್ಕೆ ಅನುಗುಣವಾಗಿ ಐಟಿಐ ಸಂಸ್ಥೆಗಳಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಹಾಗೂ ಕೌಶಲ ರಹಿತ ಯುವಕ-ಯುವತಿಯರಿಗೆ ತರಬೇತಿ ನೀಡುವ ಮತ್ತು ಉದ್ಯೋಗ ಕಲ್ಪಿಸುವ ಸಂಬಂಧ ಪೀಣ್ಯ ಕೈಗಾರಿಕೆಗಳ ಸಂಘ ಹಾಗೂ ಕೈಗಾರಿಕಾ ತರಬೇತಿ-ಉದ್ಯೋಗ ಆಯುಕ್ತಾಲಯ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮಗಳ ನಡುವೆ ಒಪ್ಪಂದವಾಗಿದೆ. ಈ ಒಪ್ಪಂದದಿಂದ ಲಕ್ಷಾಂತರ ಯುವಜನರಿಗೆ ಕೆಲಸ ಸಿಗಲಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಒಪ್ಪಂದ 2: ಹೆಚ್ಚಿನ ಅಪ್ರೆಂಟಿಶಿಪ್ ಸ್ಥಾನಗಳನ್ನು ಗುರುತಿಸಲು ಹಾಗೂ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಅಪ್ರೆಂಟಿಶಿಪ್ ಕಾರ್ಯಕ್ರಮವನ್ನು ನೀಡಲು ಟೀಮ್‍ಲೀಸ್ ಸ್ಕಿಲ್ಸ್ ವಿಶ್ವವಿದ್ಯಾಲಯ ಹಾಗೂ ಕೈಗಾರಿಕಾ ತರಬೇತಿ-ಉದ್ಯೋಗ ಆಯುಕ್ತಾಲಯದ ನಡುವೆ ಒಡಂಬಡಿಕೆ ಆಗಿದೆ. ಈ ಒಪ್ಪಂದದ ಮೂಲಕ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸಲು ಹೆಚ್ಚು ಅನುಕೂಲವಾಗಲಿದೆ ಎಂದರು ಅವರು ತಿಳಿಸಿದರು.

ಒಪ್ಪಂದ 3: ಸರಕಾರಿ ಐಟಿಐ ವಿದ್ಯಾರ್ಥಿಗಳಿಗೆ ಎಂಟರ್‍ಪ್ರಿನ್ಯೂರಿಯಲ್ ಮೈಂಡ್‍ಸೆಟ್ ಕಾರ್ಯಕ್ರಮ ನೀಡುವ ಕುರಿತು ಉದ್ಯಮ್ ಲರ್ನಿಂಗ್ ಫೌಂಡೇಶನ್ (ಉದ್ಯಮ್) ಹಾಗೂ ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಆಯುಕ್ತಾಲಯಗಳ ನಡುವೆ ಒಪ್ಪಂದ ಆಗಿದೆ ಎಂದು ಉಪ ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ತಿಳಿಸಿದರು.

ಕೌಶಲಾಭಿವೃದ್ಧಿಗೆ ಆಧುನಿಕ ಸ್ಪರ್ಶ: ರಾಜ್ಯದಲ್ಲಿ ಅತ್ಯುತ್ತಮ ಮಾನವ ಸಂಪನ್ಮೂಲವಿದ್ದು, ಸದ್ಯದ ಉದ್ಯೋಗ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಯುವಜನರಿಗೆ ಕೌಶಲ ತರಬೇತಿ ನೀಡಲು ಅನೇಕ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಹೊಸ ಹೊಸ ಆವಿಷ್ಕಾರಗಳಿಗೂ ಸರಕಾರ ಆದ್ಯತೆ ನೀಡುತ್ತಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

ಜನರಿಗೆ ಹಾಗೂ ಸಮಾಜಕ್ಕೆ ಅಗತ್ಯವಾಗುವ, ದೇಶಕ್ಕೆ ಶಕ್ತಿ ತುಂಬುವ ಶಿಕ್ಷಣವನ್ನು ನೀಡಬೇಕಿದೆ. ಸಾಂಪ್ರದಾಯಿಕ ಶಿಕ್ಷಣದಿಂದ ಪ್ರಯೋಜನವಿಲ್ಲ. ಯಾವ ಉದ್ದೇಶಕ್ಕಾಗಿ ಓದಬೇಕು ಎಂಬ ಸ್ಪಷ್ಟತೆ ಮಕ್ಕಳಿಗೆ ಇರಬೇಕು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮೂಲಕ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಪ್ರಾಥಮಿಕ ಹಂತದಿಂದಲೆ ಉದ್ಯೋಗ ಆಧಾರಿತ ಶಿಕ್ಷಣ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಕೌಶಲಾಭಿವೃದ್ಧಿ ಪ್ರಾಧಿಕಾರದ ನವೀಕೃತ ಕಟ್ಟಡವನ್ನು ಅತ್ಯಾಧುನಿಕ ಸೌಲಭ್ಯಗಳ ಮೂಲಕ ನವೀಕರಣ ಮಾಡಲಾಗಿದೆ. ಜತೆಗೆ, ಅಂತರ್‍ರಾಷ್ಟ್ರೀಯ ವಲಸೆ ಕೇಂದ್ರವು ವಿದೇಶಗಳಲ್ಲಿ ಕೌಶಲ್ಯ ಆಧಾರಿತ ಉದ್ಯೋಗ ಬಯಸುವ ನಮ್ಮ ಉತ್ಸಾಹಿ ಯುವಜನರಿಗೆ ಶಕ್ತಿ ನೀಡಿ ಸೂಕ್ತ ಮಾರ್ಗದರ್ಶನ-ಸಹಕಾರ ನೀಡುತ್ತದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ರಾಜ್ಯ ಕೌಶಲಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ರತ್ನಪ್ರಭಾ, ಶಾಸಕ ಉದಯ್ ಗರುಡಾಚಾರ್, ಕೌಶಲಾವೃದ್ಧಿ ಇಲಾಖೆಯ ಕಾರ್ಯದರ್ಶಿ ಸೆಲ್ವಕುಮಾರ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತ ಡಾ.ತ್ರಿಲೋಕ ಚಂದ್ರ, ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News