×
Ad

ಪಶ್ಚಿಮ ವಿಭಾಗದ ಪೊಲೀಸರ ಕಾರ್ಯಾಚರಣೆ: 1.20 ಕೆಜಿ ಚಿನ್ನ ಜಪ್ತಿ, ಮೂವರ ಬಂಧನ

Update: 2020-12-29 23:46 IST

ಬೆಂಗಳೂರು, ಡಿ.29: ಕಳವು ಪ್ರಕರಣವನ್ನು ಭೇದಿಸಿರುವ ಪಶ್ಚಿಮ ವಿಭಾಗದ ಪೊಲೀಸರು, 50 ಲಕ್ಷ ರೂ. ಮೌಲ್ಯದ 1.20 ಕೆ.ಜಿ. ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸಲೀಂ, ಆಝಾದ್ ಮತ್ತು ಅವ್ನೋ ಇರಾನಿ ಎಂಬುವರು ಬಂಧಿತ ಆರೋಪಿಗಳಾಗಿದ್ದು, ಇವರ ಬಂಧನದಿಂದ 27 ಪ್ರಕರಣಗಳು ಪತ್ತೆಯಾಗಿದೆ ಎಂದು ಹೇಳಿದರು.

ನಗರದಲ್ಲಿ ಇತ್ತೀಚೆಗೆ ಸರ ಅಪಹರಣ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದುದನ್ನು ಗಮನಿಸಿದ ವಿಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕೆ.ನಂಜುಂಡೇಗೌಡ ಅವರ ಮಾರ್ಗದರ್ಶನದಲ್ಲಿ ಮಾಗಡಿ ರಸ್ತೆ ಪೊಲೀಸ್ ಠಾಣಾಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಆರಂಬಿಕವಾಗಿ ಆರೋಪಿ ಸಲೀಂ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಇತರ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು ಬೆಂಗಳೂರು ನಗರ ಮತ್ತು ಧಾರವಾಡ ನಗರಗಳಲ್ಲಿ ಒಂಟಿ ಮಹಿಳೆಯರನ್ನು ಗುರುತಿಸಿಕೊಂಡು ಸರ ಅಪಹರಣ ಮಾಡುತ್ತಿದ್ದರು ಎಂದು ಅವರು ವಿವರಿಸಿದರು.

ಸುಮಾರು 50 ಲಕ್ಷ ರೂ. ಬೆಲೆಬಾಳುವ 1 ಕೆಜಿ 20 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಗಡಿ ರಸ್ತೆಯ 2, ಬ್ಯಾಡರಹಳ್ಳಿಯ 3, ಚಂದ್ರಾ ಲೇಔಟ್‍ನ 2, ವಿಜಯನಗರ, ರಾಮಮೂರ್ತಿನಗರದ ತಲಾ 3, ಜ್ಞಾನಭಾರತಿ, ಕಾಟನ್ ಪೇಟೆ, ಯಲಹಂಕ, ಹೆಣ್ಣೂರು, ಸುಬ್ರಹ್ಮಣ್ಯನಗರ, ಬಾಣಸವಾಡಿ, ಕೊಡಿಗೇಹಳ್ಳಿ, ಬೆಳ್ಳಂದೂರು, ಬಾಗಲೂರು, ಬನಶಂಕರಿ, ವಿದ್ಯಾರಣ್ಯಪುರ, ಜೀವನ ಭೀಮಾನಗರದ ತಲಾ ಒಂದು, ಧಾರವಾಡದ ವಿದ್ಯಾಗಿರಿಯ 2 ಪ್ರಕರಣಗಳು ಸೇರಿ ಒಟ್ಟು 27 ಪ್ರಕರಣಗಳು ಪತ್ತೆಯಾಗಿವೆ ಎಂದು ಆಯುಕ್ತರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News