ನಿಮ್ಮ ಕಿವಿಯಲ್ಲಿ ಶಬ್ದಗಳು ಕೇಳಿ ಬರುತ್ತಿವೆಯೇ?

Update: 2020-12-29 18:30 GMT

ನಿಮ್ಮ ಕಿವಿಗಳಲ್ಲಿ ಆಗಾಗ್ಗೆ ಗುಂಯ್‌ಗುಡುವ,ಶಿಳ್ಳೆ ಬಾರಿಸಿದಂತಹ, ಗಾಳಿ ಬೀಸಿದಂತಹ ಶಬ್ದಗಳು ಕೇಳಿಬರುತ್ತಿವೆಯೇ? ಹಾಗಿದ್ದರೆ ನೀವು ‘ಟಿನಿಟಸ್’ ಅಥವಾ ಕಿವಿಮೊರೆತ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂದು ಅರ್ಥ.

ಟಿನಿಟಸ್‌ಗೆ ನಿಖರವಾದ ಕಾರಣವೇನು ಎನ್ನುವುದು ಇನ್ನೂ ಗೊತ್ತಿಲ್ಲ. ಆದರೆ ಕಿವಿಯಲ್ಲಿ ಗುಗ್ಗೆ ತುಂಬಿಕೊಳ್ಳುವುದು,ಕಿವಿಯ ಕಾಲುವೆಯಲ್ಲಿ ಬಾಹ್ಯ ವಸ್ತುಗಳು ಸೇರಿಕೊಂಡಿರುವುದು,ಕಿವಿ ಅಥವಾ ಸೈನಸ್ ಸೋಂಕು,ತಲೆ ಅಥವಾ ಕುತ್ತಿಗೆಗೆ ಪೆಟ್ಟು,ಒಟೊಸ್ಲೆರೋಸಿಸ್ ಅಥವಾ ಮಧ್ಯ ಮತ್ತು ಒಳಗಿವಿಯ ಸುತ್ತಲಿನ ಮೂಳೆಯ ಬೆಳವಣಿಗೆ,ಭಾರೀ ಗದ್ದಲದ ಶಬ್ದಕ್ಕೆ ಒಡ್ಡಿಕೊಳ್ಳುವುದು ಮತ್ತು ವೃದ್ಧಾಪ್ಯದಿಂದ ಶ್ರವಣ ಶಕ್ತಿ ನಷ್ಟ ಇವು ಟಿನಿಟಸ್ ಸಮಸ್ಯೆಯನ್ನು ಉಲ್ಬಣಗೊಳಿಸುತ್ತವೆ. ಮಲ್ಟಿಪಲ್ ಸ್ಲೆರೋಸಿಸ್ ಅಥವಾ ಬಹು ಸ್ನಾಯು ಪೆಡಸಾಗುವಿಕೆ,ಟ್ಯೂಮರ್‌ಗಳು,ಖಿನ್ನತೆ ಮತ್ತು ಒತ್ತಡ ಹಾಗೂ ಥೈರಾಯ್ಡ್ ಕಾಯಿಲೆಗಳೂ ಟಿನಿಟಸ್ ಸಮಸ್ಯೆಯನ್ನು ಹೆಚ್ಚಿಸುತ್ತವೆ.

ರೋಗನಿರ್ಧಾರ ಹೇಗೆ?

ವೈದ್ಯರು ಸಾಮಾನ್ಯವಾಗಿ ಪೀಡಿತ ವ್ಯಕ್ತಿಯಿಂದ ಲಕ್ಷಣಗಳ ಬಗ್ಗೆ ತಿಳಿದುಕೊಂಡು ತಪಾಸಣೆಯನ್ನು ನಡೆಸುತ್ತಾರೆ. ಲಕ್ಷಣಗಳನ್ನು ಆಧರಿಸಿ ಶ್ರವಣ ಪರೀಕ್ಷೆ,ತಲೆಯ ಎಕ್ಸ್-ರೇ,ಆ್ಯಂಜಿಯೊಗ್ರಫಿ, ತಲೆಯ ಸಿಟಿ ಅಥವಾ ಎಂಆರ್‌ಐ ಸ್ಕ್ಯಾನ್‌ಗಳನ್ನು ಅವರು ಸೂಚಿಸಬಹುದು. ಚಿಕಿತ್ಸೆ ಏನು?

 ಟಿನಿಟಸ್ ಸಮಸ್ಯೆ ಕಾಲಕ್ರಮೇಣ ತಾನಾಗಿಯೇ ನಿವಾರಣೆಯಾಗುತ್ತದೆ ಅಥವಾ ಕಡಿಮೆಯಾಗುತ್ತದೆ. ಸಮಸ್ಯೆ ಮುಂದುವರಿದರೆ ವೈದ್ಯರು ಆತಂಕ ನಿರೋಧಕ ಮತ್ತು ಖಿನ್ನತೆ ನಿರೋಧಕಗಳು,ಆ್ಯಂಟಿಹಿಸ್ಟಮೈನ್,ಆ್ಯಂಟಿಕನ್ವಲ್ಸಂಟ್ ಇತ್ಯಾದಿಗಳು ಸೇರಿದಂತೆ ಸೂಕ್ತ ಔಷಧಿಗಳನ್ನು ಶಿಫಾರಸು ಮಾಡುತ್ತಾರೆ. ಟಿನಿಟಸ್ ರಿಟ್ರೇನಿಂಗ್ ಚಿಕಿತ್ಸೆಯನ್ನೂ ವೈದ್ಯರು ನಡೆಸಬಹುದು. ಬಯೊಫೀಡ್‌ಬ್ಯಾಕ್ ಶ್ರವಣ ಸಾಧನವನ್ನೂ ವೈದ್ಯರು ಶಿಫಾರಸು ಮಾಡಬಹುದು. ಇದು ವ್ಯಕ್ತಿಯು ನಾಡಿ ಮಿಡಿತ,ಸ್ನಾಯು ಸೆಳೆತ ಮತ್ತು ಮಿದುಳಿನ ಅಲೆಯ ಚಟುವಟಿಕೆಗಳಂತಹ ಶರೀರದ ಕೆಲವು ಕಾರ್ಯಗಳ ಮೇಲೆ ನಿಯಂತ್ರಣ ಸಾಧಿಸುವ ಬಗ್ಗೆ ವ್ಯಕ್ತಿಯಲ್ಲಿ ಅರಿವು ಮೂಡಿಸುತ್ತದೆ. ಈ ಸಾಧನದಲ್ಲಿಯ ಸೆನ್ಸರ್‌ಗಳು ತನ್ನ ಶರೀರದ ಕುರಿತು ಮಾಹಿತಿಗಳನ್ನು ವ್ಯಕ್ತಿಯು ಪಡೆಯಲು ನೆರವಾಗುತ್ತವೆ ಮತ್ತು ಇದು ಸ್ನಾಯುಗಳನ್ನು ಸಡಿಲಿಸುವುದು ಇತ್ಯಾದಿ ಶಾರೀರಿಕ ಬದಲಾವಣೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಟಿನಿಟಸ್‌ಅನ್ನು ತಡೆಯುವುದು ಹೇಗೆ?

ಗದ್ದಲ,ವಿಪರೀತ ಶಬ್ದಗಳಿಂದ ದೂರವುಳಿಯುವ ಮೂಲಕ ಟಿನಿಟಸ್‌ನ ಸಾಮಾನ್ಯ ಕಾರಣವನ್ನು ನಿವಾರಿಸಬಹುದು. ಗದ್ದಲದ ವಾತಾವರಣದಲ್ಲಿರುವ ಅನಿವಾರ್ಯತೆಯಿದ್ದರೆ ಇಯರ್ ಪ್ರೊಟೆಕ್ಟರ್ ಅಥವಾ ಕರ್ಣರಕ್ಷಕಗಳನ್ನು ಬಳಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News