ಕೃಷಿ ಕಾಯ್ದೆಗಳಿಂದ ಕೋಟ್ಯಂತರ ಕುಟುಂಬಗಳು ಹಸಿವಿಗೆ ಸಿಲುಕಲಿವೆ: ಬಂಜಗೆರೆ ಜಯಪ್ರಕಾಶ್

Update: 2020-12-30 18:10 GMT

ಬೆಂಗಳೂರು, ಡಿ.30: ದೇಶದ ಬಹುದೊಡ್ಡ ಭಾಗವಾಗಿರುವ ಸಣ್ಣ ಮತ್ತು ಅತಿಸಣ್ಣ ರೈತರನ್ನು ಕೃಷಿ ಕ್ಷೇತ್ರದಿಂದಲೇ ಶಾಶ್ವತವಾಗಿ ಹೊರ ಹಾಕುವ ಉದ್ದೇಶದಿಂದ ಈ ಹೊಸ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗುತ್ತಿದ್ದು, ಇದರಿಂದ ಪಡಿತರ ಯೋಜನೆಯಿಂದ ಆಹಾರ ಪಡೆದು ಜೀವಿಸುತ್ತಿರುವ ಕೋಟ್ಯಂತರ ಕುಟುಂಬಗಳು ಹಸಿವಿಗೆ ಸಿಲುಕಲಿವೆ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್‍ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಉದ್ಘಾಟಿಸಿ ಮಾತನಾಡಿದ ಅವರು,

ಜಾಗತೀಕರಣ ಧೋರಣೆಗಳ ಭಾಗವಾಗಿ ಬಂದಿರುವ ಇಂತಹ ಕೃಷಿ ಕಾನೂನುಗಳು ಕಾರ್ಪೋರೇಟ್ ವ್ಯವಸ್ಥೆಯನ್ನು ಕೃಷಿ ರಂಗದಲ್ಲೂ ಬಲಗೊಳಿಸುತ್ತವೆ. ದೊಡ್ಡ ದೊಡ್ಡ ಕಾರ್ಪೋರೇಟ್ ಸಂಸ್ಥೆಗಳು ಕ್ರಮೇಣ ರೈತರ ಮಾಲಕತ್ವದಲ್ಲಿ ಇರುವ ಕೃಷಿ ಭೂಮಿಯನ್ನು ಕಬಳಿಸಲಿವೆ. ಹೀಗಾಗಿ, ದೇಶದ ಆಹಾರ ಭದ್ರತೆ ದೃಷ್ಟಿಯಿಂದ ಈ ಕಾನೂನುಗಳು ರದ್ದಾಗಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಕಾನೂನು ಕಾಲೇಜಿನ ಪ್ರೊ.ಬಾಬು ಮ್ಯಾಥ್ಯೂ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಮಾಜಿ ಉಪ ಸಭಾಪತಿ ಬಿ.ಆರ್.ಪಾಟೀಲ್, ಹಿರಿಯ ಕಾರ್ಮಿಕ ನಾಯಕ ಮೈಕೆಲ್ ಫನಾರ್ಂಡೀಸ್, ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್, ಹಿರಿಯ ಸಮಾಜವಾದಿ ಬಾಪೂ ಹೆದ್ದೂರುಶೆಟ್ಟಿ, ಹಿರಿಯ ಹೋರಾಟಗಾರ ಜಿ.ಎನ್.ನಾಗರಾಜ್, ನಮ್ಮೂರ ಭೂಮಿ ಆಂದೋಲನದ ಗಾಯಿತ್ರಿ ಕೂಡ ಮಾತನಾಡಿದರು.

ಇಂದಿನ ಪ್ರತಿಭಟನಾ ಧರಣಿ ನೇತೃತ್ವವನ್ನು ಐಕ್ಯ ಹೋರಾಟದ ಡಾ.ಪ್ರಕಾಶ್ ಕಮ್ಮರಡಿ, ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ, ಹಿಂದ್ ಮಜ್ದೂರ್ ಕಿಸಾನ್ ಪಂಚಾಯತ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಎಲ್.ಕಾಳಪ್ಪ, ಕರ್ನಾಟಕ ಪ್ರಾಂತ ರೈತ ಸಂಘದ ಎಚ್.ಆರ್. ನವೀನ ಕುಮಾರ್, ಯಶವಂತ, ಎಐಸಿಸಿಟಿಯುನ ಮಣಿ, ಆರ್‍ಕೆಎಸ್‍ನ ಶಿವಪ್ರಕಾಶ್, ಎಐಕೆಎಸ್‍ನ ಪ್ರಸನ್ನ, ಕರ್ನಾಟಕ ಜನಶಕ್ತಿ ಸಂಘಟನೆಯ ಸಿರಿಮನೆ ನಾಗರಾಜ್, ಕಬ್ಬು ಬೆಳೆಗಾರರ ಸಂಘದ ಅತ್ತಿಹಳ್ಳಿ ದೇವರಾಜ್ ಮುಂತಾದವರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News